ಸಾರಾಂಶ
ಕಾಂಗ್ರೆಸ್ಸಿಗೆ ಮುಸ್ಲಿಂ ಲೀಗ್ ಸೇರಿ ಹಲವು ಸಂಘಟನೆಗಳೊಂದಿಗೆ ಸಂಪರ್ಕವಿದೆ. ಯಾರೋ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡಿ ಧರ್ಮಸ್ಥಳ ವಿರುದ್ಧ ತನಿಖೆ ಮಾಡಲಾಗುತ್ತಿದೆ. ಧರ್ಮಸ್ಥಳ ನಮ್ಮ ಸ್ವತ್ತು ಅಂತ ನಾವು ಹೇಳಿಲ್ಲ. ಆದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದರೆ ಸುಮ್ಮನಿರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕಾಂಗ್ರೆಸ್ಸಿಗೆ ಮುಸ್ಲಿಂ ಲೀಗ್ ಸೇರಿ ಹಲವು ಸಂಘಟನೆಗಳೊಂದಿಗೆ ಸಂಪರ್ಕವಿದೆ. ಯಾರೋ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡಿ ಧರ್ಮಸ್ಥಳ ವಿರುದ್ಧ ತನಿಖೆ ಮಾಡಲಾಗುತ್ತಿದೆ. ಧರ್ಮಸ್ಥಳ ನಮ್ಮ ಸ್ವತ್ತು ಅಂತ ನಾವು ಹೇಳಿಲ್ಲ. ಆದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಬಂದರೆ ಸುಮ್ಮನಿರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದರು.ಧರ್ಮಸ್ಥಳ ಬಿಜೆಪಿ ಸ್ವತ್ತಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ರ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಜೋಶಿ ಅವರು, ‘ನೀವು ದೇಶದ ಗುಡಿ-ಗುಂಡಾರ ಒಡೆಯುವ ಪ್ರಯತ್ನ ಮಾಡಿದ್ದೀರಿ. ಧರ್ಮಸ್ಥಳ ವಿಷಯವಾಗಿ ಷಡ್ಯಂತ್ರ ನಡೆದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಎರಡು ದಡದ ಮೇಲೆ ಕಾಲಿಟ್ಟು ಹೋಗುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಕೆಫೆ ಬ್ಲಾಸ್ಟ್ ಆದಾಗ ಭಯೋತ್ಪಾದನೆ ಕೃತ್ಯ ಅಲ್ಲ ಅಂದರು. ಅದೇ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕುರಿತು ಕೆಲವರು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ. ಇದುವರೆಗೂ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಹರಿಹಾಯ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್ಎಸ್ ಪಾತ್ರ ಇಲ್ಲ ಅನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರಿಗೆ ಆಡಳಿತ ನಡೆಸಲು ಬರಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲ. ಸ್ವಾತಂತ್ರ್ಯ ಹೋರಾಟಗಾರರಾದ ವಲ್ಲಭಭಾಯಿ ಪಟೇಲ್, ಸುಭಾಶ್ಚಂದ್ರ ಬೋಸ್ ಅವರನ್ನು ನೀವು ಯಾವ ರೀತಿ ನಡೆಸಿಕೊಂಡಿದ್ದೀರಿ? ಇಂದಿರಾ ಗಾಂಧಿ ಅವರಿಗಿಂತ ಡಾ. ಅಂಬೇಡ್ಕರ್ ಹತ್ತುಪಟ್ಟು ತ್ಯಾಗ ಮಾಡಿದ್ದಾರೆ. ಸರ್ಕಾರಿ ಯೋಜನೆಗಳಿಗೆ ಎಷ್ಟು ಜನರ ಹೆಸರು ಇಟ್ಟಿದ್ದೀರಿ? ಬರಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರು ಇಟ್ಟಿದ್ದೀರಿ ಎಂದು ಕುಟುಕಿದರು.