ಇಲ್ಲಿಯ ಅಧಿಕಾರಿಗಳು ಅಷ್ಟೂ ಕೃಷಿ ಹೊಂಡಗಳನ್ನು‌ ರೋಣ ಮತಕ್ಷೇತ್ರಕ್ಕೆ ನೀಡುವ ಮೂಲಕ ಶಿರಹಟ್ಟಿ ಕ್ಷೇತ್ರದ ಮುಂಡರಗಿ ಹೋಬಳಿ ರೈತರನ್ನು ಕೃಷಿ ಅಧಿಕಾರಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.

ಮುಂಡರಗಿ: ಶಿರಹಟ್ಟಿ ಹಾಗೂ ರೋಣ ವಿಧಾನಸಭಾ ಮತಕ್ಷೇತ್ರಗಳಿಗೆ ಮುಂಡರಗಿ ತಾಲೂಕು ಹರಿದು ಹಂಚಿ ಹೋಗಿದ್ದು, ಕೃಷಿ ಇಲಾಖೆ ಅಧಿಕಾರಿ ಮುಂಡರಗಿ ತಾಲೂಕನ್ನು ಅಲಕ್ಷಿಸುತ್ತಿದ್ದಾರೆ. ಇದರಿಂದ ಬಡ ಕೃಷಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಡ ರೈತರ ಮೇಲಿನ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಕೃಷಿ ಅಧಿಕಾರಿಗಳಿಗೆ ಎಚ್ಚರಿಸಿದರು.

ಸರ್ಕಾರದಿಂದ ರೈತರಿಗೆ ದೊರೆಯಬೇಕಾದ ವಿವಿಧ ಕೃಷಿ ಸೌಲಭ್ಯಗಳ ವಿತರಣೆಯಲ್ಲಿ ಇಲ್ಲಿನ ಕೃಷಿ ಅಧಿಕಾರಿ ತಾರತಮ್ಯ ಎಸಗುತ್ತಿದ್ದಾರೆ ಎನ್ನುವ ದೂರು ಬಂದ ಹಿನ್ನೆಲೆ ಶುಕ್ರವಾರ ದಿಢೀರ್ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿ ನೀಡಿ ಅಧಿಕಾರಿಯೊಂದಿಗೆ ಚರ್ಚಿಸಿದರು.

ತಾಲೂಕಿನಾದ್ಯಂತ ರೈತರಿಗೆ ವಿತರಿಸಲು ಒಟ್ಟು 42 ಹಸುಗಳು ಮಂಜೂರಾಗಿದ್ದವು. ಅವುಗಳೆಲ್ಲವನ್ನೂ ಕೇವಲ ರೋಣ ಮತಕ್ಷೇತ್ರಕ್ಕೆ ವಿತರಿಸಲಾಗಿದ್ದು, ಈ ಭಾಗದ ರೈತರಿಗೆ ಒಂದೂ ಹಸುವನ್ನು ವಿತರಿಸಿಲ್ಲ. ಕಳೆದ ಎರಡು ವರ್ಷಗಳಿಂದ ಈ ಭಾಗರ ರೈತರಿಗೆ ಹಸುಗಳನ್ನು ವಿತರಿಸದೆ ಇರುವುದರಿಂದ ಇಲ್ಲಿಯ ರೈತರಿಗೆ ಅನ್ಯಾಯವಾಗಿದ್ದು, ಅದಕ್ಕೆ ಅಧಿಕಾರಿಗಳ ಮಲತಾಯಿ ಧೋರಣೆಯೇ ಕಾರಣವಾಗಿದೆ. ಇಂತಹ ತಾರತಮ್ಯವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಿರಹಟ್ಟಿ ಮತಕ್ಷೇತ್ರವು ಅರೆಮಲೆನಾಡು ಪ್ರದೇಶವಾಗಿದ್ದು, ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಅಧಿವೇಶನದಲ್ಲಿ ಸಾಕಷ್ಟು ಕೃಷಿಹೊಂಡಗಳನ್ನು ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಆದರೆ ಕೃಷಿ ಅಧಿಕಾರಿಯಿಂದ ಈ ಭಾಗದ ರೈತರಿಗೆ ಅನ್ಯಾಯವಾಗಿದ್ದು, ಒಟ್ಟು 52 ಕೃಷಿ ಹೊಂಡಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಅದರಲ್ಲಿ 26 ಕೃಷಿಹೊಂಡಗಳು ಈ ಭಾಗದ ರೈತರಿಗೆ ದೊರೆಯಬೇಕಿತ್ತು. ಆದರೆ ಇಲ್ಲಿಯ ಅಧಿಕಾರಿಗಳು ಅಷ್ಟೂ ಕೃಷಿ ಹೊಂಡಗಳನ್ನು‌ ರೋಣ ಮತಕ್ಷೇತ್ರಕ್ಕೆ ನೀಡುವ ಮೂಲಕ ಶಿರಹಟ್ಟಿ ಕ್ಷೇತ್ರದ ಮುಂಡರಗಿ ಹೋಬಳಿ ರೈತರನ್ನು ಕೃಷಿ ಅಧಿಕಾರಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಒಂದು ವಾರದೊಳಗಾಗಿ ಅರ್ಜಿ ಸಲ್ಲಿಸಿದ ಇಲ್ಲಿಯ ಅರ್ಹ ರೈತರಿಗೆ ಹಸು ಮತ್ತು ಕೃಷಿಹೊಂಡಗಳನ್ನು ಮಂಜೂರು ಮಾಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ಬಸವರಾಜ ಬಿಳಿಮಗ್ಗದ, ರವಿಗೌಡ ಪಾಟೀಲ, ಸುನೀಲರಡ್ಡಿ ನೀರಲಗಿ, ಪವನ ಮೇಟಿ, ರಾಜಶೇಖರ ರಡ್ಡಿ, ಶಿವಕುಮಾರ ಕುರಿ, ಶಂಕರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.