ಸಾರಾಂಶ
ಕನ್ನಡಪ್ರಭ ವಾರ್ತೆ, ಕಲಬುರಗಿ.ಮಹಾರಾಷ್ಟ್ರಕ್ಕೆ ಭೀಮಾ ನದಿಯಲ್ಲಿ ನ್ಯಾಯಸಮ್ಮತವಾಗಿ ಹಂಚಿಕೆಯಾದ ನೀರಿಗಿಂತ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಂಡು ನದಿಪಾತ್ರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಯಾವ ಕಾರಣಕ್ಕೂ ಬಿಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾಡಿದ್ದಾರೆ. ಬಚಾವತ್ ತೀರ್ಪಿನಂತೆ ನಮ್ಮ ಪಾಲಿನ ನೀರು ಪಡೆಯಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ದ ಮೊರೆ ಹೋಗುತ್ತೇವೆ, ಅಗತ್ಯ ಕಂಡಲ್ಲಿ ಕೋರ್ಟ್ ಬಾಗಿಲು ತಟ್ಟುತ್ತೇವೆ ಎಂದು ಘೋಷಿಸಿದ್ದಾರೆ.ಭೀಮಾ ತೀರದಲ್ಲಾಗಿರುವ ಪ್ರವಾಹ ಹಾನಿಯ ವೈಮಾನಿಕ ಸಮೀಕ್ಷೆ, ಅಧಿಕಾರಿಗಳ ಸಭೆಯ ನಂತರ ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಭೀಮೆಯ ಪಾಲಿನ ನೀರನ್ನು ನಾವು ಪಡೆಯೋದು ಶತಃಸಿದ್ಧ. ಅದಕ್ಕೆ ನಾವು ಶಾಸನ ಬದ್ಧ ವೇದಿಕೆಯಲ್ಲಿ ಪ್ರಶ್ನೆ ಮಾಡಲೂ ಸಿದ್ಧ ಎಂದು ಘಂಟಾಘೋಷವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿದ್ದ ಉದ್ದಿಮೆ ಸಚಿವ ಎಂ.ಬಿ.ಪಾಟೀಲ್ ಮಾತನಾಡುತ್ತ, ಕೃಷ್ಣಾ ಕೊಳ್ಳದಲ್ಲಿ ಮಹಾರಾಷ್ಟ್ರ 300 ಟಿಎಂಸಿ ನೀರನ್ನು ಬಳಸುವ ಹಕ್ಕು ಹೊಂದಿದೆ. ಈ ಪೈಕಿ 95 ಟಿಎಂಸಿಯಷ್ಟು ಭೀಮಾ ನದಿಯಲ್ಲೇ ಆ ರಾಜ್ಯದ ಪಾಲಿದೆ. ಆದರೆ, ಮಹಾರಾಷ್ಟ್ರ ಹೆಚ್ಚುವರಿ ನೀರು ಬಳಸುತ್ತಿರುವ ಆರೋಪಗಳಿವೆ. ಭೀಮಾ ನದಿಯ ಹಿನ್ನೀರನ್ನು ಸೀನಾ ನದಿಗೆ ತಿರುವು ಮಾಡಿ ಬಳಸುತ್ತಿರುವುದು ಸೇರಿದಂತೆ ಮಹಾರಾಷ್ಟ್ರ ವಿರುದ್ಧ ಇರುವ ಆರೋಪಗಳ ಬಗ್ಗೆ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ತಕರಾರು ಎತ್ತಿದ್ದೆ. ಆಗ ಮಹಾರಾಷ್ಟ್ರ ತನ್ನ ಪಾಲಿನ 95 ಟಿಎಂಸಿ ನೀರನ್ನೇ ಬಳಸುತ್ತಿರುವುದಾಗಿ ವಿವರಣೆ ನೀಡಿತ್ತು. ಆದಾಗ್ಯೂ, ಈ ವಿಷಯವಾಗಿ ಕೇಂದ್ರ ಜಲ ಆಯೋಗದ ಮೊರೆ ಹೋಗುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿಯೇ ಉಪಸ್ಥಿತರಿದ್ದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಈ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಭೀಮಾ ಪಾಲಿನ ನೀರನ್ನು ನಾವು ಯಾವ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಸಿಡಬ್ಲ್ಯೂಸಿ ಮೊರೆ ಹೋಗುವುದು ನಿಶ್ಚಿತ ಎಂದು ಹೇಳಿದರು.