ಜನರಿಂದ ನನಗೆ ದೊರಕಿರುವ ಅಧಿಕಾರವನ್ನು ಅವರ ಸೇವೆಗಾಗಿಯೇ ಧಾರೆ ಎರೆಯುವ ಮೂಲಕ ಚಾಚೂ ತಪ್ಪದೆ ಕ್ಷೇತ್ರದ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು

ಹೊಳಲ್ಕೆರೆ: ಜನರಿಂದ ನನಗೆ ದೊರಕಿರುವ ಅಧಿಕಾರವನ್ನು ಅವರ ಸೇವೆಗಾಗಿಯೇ ಧಾರೆ ಎರೆಯುವ ಮೂಲಕ ಚಾಚೂ ತಪ್ಪದೆ ಕ್ಷೇತ್ರದ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಬಿದರಕೆರೆ ಮತ್ತು ಮಲ್ಲೇನಹಳ್ಳಿ ಗ್ರಾಮದ ಮಧ್ಯೆ ಹಳ್ಳಕ್ಕೆ 1.50 ಕೋಟಿ ರು. ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.ಐದು ಬಾರಿ ಎಂಎಲ್‍ಎ ಆಗಿರುವ ನಾನು ಅಧಿಕಾರದ ದರ್ಪ ತೋರಿಸಿದ್ದರೆ ಮನೆಯಲ್ಲಿ ಮಕ್ಕಳು ಸಂಸ್ಕಾರವಂತರಾಗುತ್ತಿರಲಿಲ್ಲ. ಮತದಾರರು ಕೊಟ್ಟ ಅಧಿಕಾರವನ್ನು ಅವರಿಗೆ ವಾಪಸ್ ನೀಡಿದಾಗ ಮುಕ್ತಿ ಸಿಗುತ್ತದೆಂಬ ಅರಿವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ಜನರು ಸರಾಗವಾಗಿ ಓಡಾಡಲು ಬ್ರಿಜ್‌ ಕಟ್ಟಿಸಿದ್ದೇನೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗಬಾರದೆಂದು ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಇದರಿಂದ ಬೋರ್‍ವೆಲ್‍ಗಳಲ್ಲಿ ನೀರಿನ ಮಟ್ಟ ಹೆಚ್ಚಿ ರೈತರ ತೋಟಗಳಿಗೆ ಅನುಕೂಲವಾಗಲಿದೆ ಎಂದರು.ಮಲ್ಲೇನಹಳ್ಳಿ, ಬಿದರಕರೆ, ಗಂಗಸಮುದ್ರದಲ್ಲಷ್ಟೆ ಅಲ್ಲ, ತಾಲೂಕಿನಾದ್ಯಂತ 493 ಹಳ್ಳಿಗಳಲ್ಲಿಯೂ ಕೆಲಸ ಮಾಡಿದ್ದೇನೆ. 2019ರಲ್ಲಿ ಮಳೆಯಿಲ್ಲದೆ ರೈತರು ಅಡಕೆ ತೋಟಗಳನ್ನು ಕಡಿದು ಹಾಕಿ ಎಷ್ಟು ನೋವು ಪಟ್ಟಿದ್ದಾರೆನ್ನುವುದು ನನಗೆ ಗೊತ್ತಿದೆ. ಎಪ್ಪತ್ತೈದು ವರ್ಷಗಳಿಂದ ಹೊಳಲ್ಕೆರೆಯಲ್ಲಿ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ನಾನು ಶಾಸಕನಾಗಿ ಬಂದ ಮೇಲೆ ಹೈಟೆಕ್ ಆಸ್ಪತ್ರೆ, ಪಾಲಿಟೆಕ್ನಿಕ್ ಕಾಲೇಜು, ಬೆಟ್ಟ ಕಡಿದು ಸಮ ಮಾಡಿ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ಸುಳ್ಳು, ನಾಟಕ ಮಾಡುವ ರಾಜಕಾರಣಿಗಳ ಕುತಂತ್ರ ಇಲ್ಲಿ ತುಂಬಾ ದಿನ ನಡೆಯಲ್ಲ. ನೀವುಗಳು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿರುವುದರಿಂದ ನಿಮ್ಮಗಳ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.ತೇಕಲವಟ್ಟಿ, ಕೋಗುಂಡೆಯಲ್ಲಿ ಐದು ಹತ್ತು ಕೋಟಿ ರು.ಗಳ ಚೆಕ್‍ಡ್ಯಾಂ ಕಟ್ಟಿಸಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಅನುದಾನ ತರುವ ಗಡಸು, ಕೆಪಾಸಿಟಿಯಿಟ್ಟುಕೊಂಡಿದ್ದೇನೆ. ಹಾಗಾಗಿ ಪ್ರತಿನಿತ್ಯವೂ ಒಂದಲ್ಲ ಒಂದು ಅಭಿವೃದ್ಧಿ ಕಾಮಗಾರಿಗಳು ತಾಲೂಕಿನಲ್ಲಿ ನಡೆಯುತ್ತಿರುತ್ತದೆ ಎಂದು ನುಡಿದರು.ಹೊಳಲ್ಕೆರೆ ಬಿಜೆಪಿ. ಮಂಡಲ ಅಧ್ಯಕ್ಷ ಕುಮಾರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನವೇಂದ್ರ ದಾನೇಶ್, ಜಗದೀಶ್, ಮಂಜುನಾಥ್, ಮಲ್ಲಿಕಾರ್ಜುನ, ಪ್ರವೀಣ್, ಪ್ರಕಾಶ್, ರೇಣುಕಪ್ಪ ಹಾಗೂ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.