ಸಾರಾಂಶ
ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಆಶೀರ್ವದಿಸಿ, ಗೆಲ್ಲಿಸಿದ್ದೀರಿ - ವಿಶೇಷ ಧನ್ಯವಾದ ಸಲ್ಲಿಸುವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಡೂರು: ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಆಶೀರ್ವದಿಸಿ, ಗೆಲ್ಲಿಸಿದ್ದೀರಿ. ಆ ಮೂಲಕ ಸಂಡೂರು ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಪುನಃ ಸಾಬೀತು ಮಾಡಿದ್ದೀರಿ. ಕ್ಷೇತ್ರದ ಎಲ್ಲ ಮತದಾರ ದೇವರಿಗೂ, ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರಿಗೂ, ಕಾರ್ಯಕರ್ತರಿಗೂ ವಿಶೇಷ ಧನ್ಯವಾದ ಸಲ್ಲಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈ. ಅನ್ನಪೂರ್ಣಾ ತುಕಾರಾಂ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಮೂರು ದಿನ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಹಲವು ಸಚಿವರು, ಸಂಸದರು, ಶಾಸಕರು, ಮುಖಂಡರು ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರು. ನಮ್ಮದು ನುಡಿದಂತೆ ನಡೆದ ಸರ್ಕಾರ. ಕ್ಷೇತ್ರದ ಶಾಸಕರಾಗಿದ್ದ ಈ. ತುಕಾರಾಂ ಅವರೂ ಜನರ ಮಧ್ಯೆ ಇದ್ದು, ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಸರ್ಕಾರ ಜಾತಿ, ಧರ್ಮ, ಭಾಷೆ, ಪಕ್ಷ ಎಣಿಸದೇ ಎಲ್ಲ ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ ಎಂದರು.
ಬಡಜನತೆಗೆ ಆರ್ಥಿಕ ಶಕ್ತಿ ತುಂಬಿರುವ ಪಕ್ಷ ಕಾಂಗ್ರೆಸ್. ಬಿಜೆಪಿ ಬಡವರ ಪರವಾಗಿಲ್ಲ. ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದೆವು. ಜನತೆ ನಮ್ಮ ಮನವಿಗೆ ಮನ್ನಣೆ ನೀಡಿ, ಪಕ್ಷದ ಅಭ್ಯರ್ಥಿ ಗೆಲ್ಲಿಸಿದ್ದೀರಿ. ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸ ಮಾಡುವೆವು ಎಂದರು.ಬಿಜೆಪಿ ಕೊಟ್ಟ ಮಾತಿನಂತೆ ನಡೆದಿಲ್ಲ. ೨೦೧೪ರಲ್ಲಿ, ೨೦೧೮ರಲ್ಲಿ ನರೇಂದ್ರ ಮೋದಿ ವರ್ಷಕ್ಕೆ ೨ ಕೋಟಿ ಉದ್ಯೋಗ, ವಿದೇಶದಲ್ಲಿನ ಕಪ್ಪುಹಣ ತಂದು ಎಲ್ಲರ ಅಕೌಂಟಿಗೆ ₹೧೫ ಲಕ್ಷ ಹಾಕುವ, ರೈತರ ಆದಾಯ ದ್ವಿಗುಣ ಮಾಡುವ ಭರವಸೆಗಳನ್ನು ಈಡೇರಿಸಲಿಲ್ಲ. ಅವರ ಹೇಳಿದ ಅಚ್ಛೇ ದಿನ್ ಬಂದಿದೆಯಾ? ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಎಂದೂ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ೨೦೦೮, ೨೦೧೮ರಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ, ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿತ್ತು. ನರೇಂದ್ರ ಮೋದಿ ನಾ ಕಾವೂಂಗ, ನಾ ಕಾನೇದೂಂಗ ಎಂದಿದ್ದರು. ಶಾಸಕರ ಖರೀದಿಗೆ ಹಣ ಎಲ್ಲಿಂದ ಬಂದಿತ್ತು? ಅದು ಲಂಚ, ಅಕ್ರಮದ ಹಣವಲ್ಲವೇ ಎಂದು ಕಿಡಿಕಾರಿದರಲ್ಲದೆ, ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಕುಟುಕಿದರು.ಬಿಜೆಪಿಯ ವಿಜಯೇಂದ್ರ, ಆರ್. ಅಶೋಕ್, ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ. ಸರ್ಕಾರ ಬಿದ್ದು ಹೋಗುತ್ತದೆ. ತಾವು ಮುಖ್ಯಮಂತ್ರಿಯಾಗಬಹುದೆಂದು ಕನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ. ೫ ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಜಗ್ಗಿಸಲು-ಬಗ್ಗಿಸಲು ಆಗಲ್ಲ ಎಂದು ಖಡಕ್ ಆಗಿ ನುಡಿದರು.
೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ೧೩೬ ಸ್ಥಾನ ಗಳಿಸಿದೆ. ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಜನರ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಆರೋಪ, ಅಪಪ್ರಚಾರ ಬಿಡಬೇಕು. ಅವರು ಸರ್ಕಾರದೊಂದಿಗೆ ಸಹಕರಿಸಬೇಕು. ಅವರು ರಚನಾತ್ಮಕವಾಗಿ ಟೀಕೆ ಮಾಡಲಿ. ನಾವು ಉತ್ತರ ಕೊಡಲು ತಯಾರಿದ್ದೇವೆ. ಮುಡಾ, ವಕ್ಫ್, ವಾಲ್ಮೀಕಿ ನಿಗಮದ ಹಗರಣಗಳ ಕುರಿತು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಿಮಗೆ ನಾಚಿಕೆಯಾಗಲ್ವ ಎಂದು ಬಿಜೆಪಿ, ಜೆಡಿಎಸ್‌ನವರನ್ನು ಟೀಕಿಸಿದರು.ಈ ಹಿಂದೆ ಬಳ್ಳಾರಿಗೆ ಕಳಂಕ ತಂದಿದ್ದ ಜನಾರ್ದನ ರೆಡ್ಡಿ ಉಪ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಹೊತ್ತುಕೊಂಡಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಈ ಹಿಂದೆ ಗಣಿ ಲೂಟಿ, ಹಫ್ತಾ ವಸೂಲಿ ಮಾಡಿ ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿಯನ್ನಾಗಿ ಮಾಡಲಾಗಿದೆ ಎಂದು "ಸಂತೋಷ್ ಲಾಡ್ " ಹೇಳಿದ್ದರು ಎಂದರು. ಆಗ ಅವರ ಬಳಿ ಕುಳಿತಿದ್ದವರು "ನ್ಯಾ.ಸಂತೋಷ್ ಹೆಗ್ಡೆ " ಹೇಳಿದ್ದು ಎಂದು ಹೇಳಿದಾಗ, ತಮ್ಮ ಮಾತನ್ನು ತಿದ್ದಿಕೊಂಡ ಸಿದ್ದರಾಮಯ್ಯ, ರಿಪಬ್ಲಿಕ್ ಆಫ್ ಬಳ್ಳಾರಿ ಕುರಿತು ಸಂತೋಷ್ ಹೆಗ್ಡೆ ನೀಡಿದ ವರದಿಯನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆಗ ಜನಾರ್ದನ ರೆಡ್ಡಿ, ಅವರ ಸಹೋದರರು, ಶ್ರೀರಾಮುಲು, ಶ್ರೀರಾಮುಲು ಅವರ ಬಾಮೈದ ನನ್ನ ಮೇಲೆಯೇ ಎಗರಿ ಬಿದ್ದಿದ್ದರು. ಶ್ರೀರಾಮುಲು ಅವರ ಬಾಮೈದ ಸುರೇಶ್ ಬಾಬು ನನ್ನನ್ನು ಹೊಡೆಯಲು ಬರುವಂತೆ ಮುನ್ನುಗ್ಗಿದ್ದರು. ಒಂದು ಹೆಜ್ಜೆ ಮುಂದೆ ಬಂದರೆ ಕಾಲು ಮುರಿಯುವೆ ಎಂದಿದ್ದೆ. ಬಳ್ಳಾರಿಗೆ ಬನ್ನಿ ನೋಡೋಣ ಎಂದಿದ್ದರು. ನಾನು ನಡೆದುಕೊಂಡೇ ಬರುತ್ತೇನೆಂದು ಬಳ್ಳಾರಿಗೆ ಪಾದಯಾತ್ರೆ ಮಾಡಿದೆವು. ಏನೂ ಮಾಡಲಾಗಲಿಲ್ಲ. ಉಪ ಚುನಾವಣೆಯಲ್ಲಿ ಗೆದ್ದು, ಸಂಡೂರನ್ನು ರಿಪಬ್ಲಿಕ್ ಆಫ್ ಸಂಡೂರು ಮಾಡಲು ಬಿಜೆಪಿಯವರು ಹೊರಟಿದ್ದರು. ಆದರೆ, ಜನತೆ ಅವರ ಸುಳ್ಳು ಪ್ರಚಾರಕ್ಕೆ ಬಲಿಯಾಗಲಿಲ್ಲ. ಕ್ಷೇತ್ರದ ಮತದಾರರಿಗೆ ಋಣಿಯಾಗಿರುವೆ ಎಂದರು.
ಬಳ್ಳಾರಿಯಲ್ಲಿ ಮೃತ ಬಾಣಂತಿಯರ ವಾರಸುದಾರರಿಗೆ ತಲಾ ₹೫ ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದರು.ಕ್ಷೇತ್ರದ ಮತದಾರರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಗೆಲ್ಲಿಸಿದ್ದಾರೆ. ಇದರಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ. ಸಚಿವ ಸಂತೋಷ್ ಲಾಡ್, ಸಂಸದ ಈ. ತುಕಾರಾಂ ಹಾಗೂ ಶಾಸಕರಾದ ಈ. ಅನ್ನಪೂರ್ಣಾ ತುಕಾರಾಂ ಹೇಳಿದ ಕೆಲಸವನ್ನು ಮಾಡಿಕೊಡುತ್ತೇವೆ. ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಜಮೀರ್ ಅಹಮದ್ ಖಾನ್, ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಸಂಸದ ಈ. ತುಕಾರಾಂ, ಶಾಸಕರಾದ ಈ. ಅನ್ನಪೂರ್ಣಾ ತುಕಾರಾಂ, ಡಾ. ಎನ್.ಟಿ. ಶ್ರೀನಿವಾಸ್, ಬಿ.ಎಂ. ನಾಗರಾಜ, ಜೆ.ಎನ್. ಗಣೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಮಾಜಿ ಸಚಿವರಾದ ಪಿ.ಟಿ. ಪರಮೇಶ್ವರ ನಾಯ್ಕ್, ನಬಿಸಾಬ್, ವಿಪ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಡಿಸಿಸಿ ಅಧ್ಯಕ್ಷ ಸಿರಾಜ್ ಶೇಖ್, ಅಲ್ಲಂ ಪ್ರಶಾಂತ್, ಬಿ.ವಿ. ಶಿವಯೋಗಿ, ಜಿ. ಏಕಾಂಬ್ರಪ್ಪ, ಚಿತ್ರಿಕಿ ಸತೀಶಕುಮಾರ್, ವಿಶ್ವಾಸ್ ಲಾಡ್ ಮತ್ತಿತರರಿದ್ದರು.