ಕನ್ನಡಪ್ರಭ ವಾರ್ತೆ ವಿಜಯಪುರಪಶ್ಚಿಮ ಬಂಗಾಳದಂತೆ ಅಮಾಯಕರು ಮತದಾನ ಹಕ್ಕು ಕಳೆದುಕೊಂಡಂತೆ ಕರ್ನಾಟಕದ ಮತದಾರರ ಹಕ್ಕು ಕಳೆದುಕೊಳ್ಳಲು ನಾನು ಬಿಡುವುದಿಲ್ಲ. ಚುನಾವಣೆ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ನೀಡುವವರೆಗೂ ನಾವು ಬಿಡಲ್ಲ ಎಂದು ಚಿತ್ರನಟ, ಪ್ರಗತಿಪರ ಚಿಂತಕ ಪ್ರಕಾಶ ರೈ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪಶ್ಚಿಮ ಬಂಗಾಳದಂತೆ ಅಮಾಯಕರು ಮತದಾನ ಹಕ್ಕು ಕಳೆದುಕೊಂಡಂತೆ ಕರ್ನಾಟಕದ ಮತದಾರರ ಹಕ್ಕು ಕಳೆದುಕೊಳ್ಳಲು ನಾನು ಬಿಡುವುದಿಲ್ಲ. ಚುನಾವಣೆ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ನೀಡುವವರೆಗೂ ನಾವು ಬಿಡಲ್ಲ ಎಂದು ಚಿತ್ರನಟ, ಪ್ರಗತಿಪರ ಚಿಂತಕ ಪ್ರಕಾಶ ರೈ ಹೇಳಿದರು.ಮತ ಕಾವಲು ಸಮಿತಿ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಮುಂಭಾಗದದಲ್ಲಿ ನಡೆದ ಎಸ್‌ಐಆರ್ ಗೊಂದಲ ಕುರಿತಾದ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದರು. ಗಣೇಶನ ಉತ್ಸವ ಮೂರ್ತಿ ವಿಸರ್ಜನೆಯಾಗಿದೆ, ಈಗ ಚುನಾವಣೆ ಮುಖ್ಯ ಆಯುಕ್ತರ ವಿಸರ್ಜನಯಾಗಬೇಕಿದೆ. ಆತ ಒಬ್ಬ ಕಳ್ಳ, ಕಳ್ಳ ಹೇಗೆ ತನ್ನ ಕಳ್ಳತನ ಮುಚ್ಚಿಡಲು ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವಾಗ ಆತ ಸಿಕ್ಕಿ ಬಿಳುತ್ತಾನೆ, ಈಗ ಅವರು ಅಷ್ಟೇ ಸಿಕ್ಕಿ ಬೀಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಆದಿಯಾಗಿ ಯಾವ ಪಕ್ಷವನ್ನು ನಂಬಬೇಡಿ, ನಿಮ್ಮ ಹಕ್ಕು ಉಳಿವಿಗಾಗಿ ಹಾಗೂ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಮತ್ತೊಂದು ಶಾಂತಿಯುತ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ. ಈ ಹೋರಾಟ ಪ್ರಜೆಗಳ ಹೋರಾಟ, ಯಾವ ಪಕ್ಷಕ್ಕೂ ಈ ಹೋರಾಟ ಹೈಜಾಕ್ ಆಗಬಾರದು. ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ ಅದರಲ್ಲೂ ತಮ್ಮ ಪಕ್ಷಕ್ಕೆ ಬಾರದೇ ಇರುವ ಮತಗಳನ್ನೇ ಟಾರ್ಗೆಟ್ ಮಾಡಿ ಅವರ ಹೆಸರುಗಳನ್ನು ಡಿಲೀಟ್ ಮಾಡುವ ವ್ಯವಸ್ಥಿತ ಹುನ್ನಾರ ಮನುಸ್ಮೃತಿ ಹೇರುವ ಷಡ್ಯಂತ್ರದ ಭಾಗವಾಗಿದೆ ಎಂದು ಹೇಳಿದರು.ಮತ ಕಾವಲು ಸಮಿತಿಯ ಪ್ರಮುಖ ಭೋಗೇಶ ಸೋಲಾಪೂರ ಮಾತನಾಡಿ, ಮತದಾನ ಒಂದು ಪಾವಿತ್ರ್ಯವಾದ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳಲು ಕಾರಣೀಭೂತರಾಗಿರುವ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ಅವರ ಮೇಲೆ ದೇಶದ್ರೋಹ ಪ್ರಕರಣದ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅಬ್ದುಲ ಹಮೀದ್ ಮುಶ್ರೀಫ, ಮುಖ್ತಿಯಾರ್ ದಖನಿ, ಇಸಾಬೆಲ್ಲಾ ಕ್ಸೇವಿಯರ್, ಅಬ್ದುಲ್ ಖಾದೀರ್, ಮಲ್ಲಿಕಾರ್ಜುನ ಬಟಗಿ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ ಮುಂತಾದವರು ಪಾಲ್ಗೊಂಡಿದ್ದರು.ಬಾಕ್ಸ್
ಬಹಿರಂಗ ಅಧಿವೇಶನದಲ್ಲಿ ಮತದಾರರು ಪ್ರತ್ಯಕ್ಷಜೀವಂತವಿದ್ದರೂ ಸಹ ಮೃತಪಟ್ಟಿದ್ದಾರೆ ಎಂದು ಅವರ ಮತಗಳನ್ನು ಡಿಲೀಟ್ ಮಾಡುವಂತೆ ವಿಜಯಪುರ ನಗರ ಶಾಸಕರು ನೀಡಿದ ಪಟ್ಟಿಯಲ್ಲಿರುವ ಅನೇಕ ವ್ಯಕ್ತಿಗಳು ಬಹಿರಂಗ ಸಭೆಗೆ ಹಾಜರಾದರು. ಚಿತ್ರ ನಟ ಪ್ರಕಾಶ ರೈ ಅವರ ನೇತೃತ್ವದಲ್ಲಿ ಎಸ್‌ಐಆರ್ ಪ್ರಕ್ರಿಯೆ ಗೊಂದಲ ಕುರಿತಾಗಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಮುಂಭಾಗದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಹಾಜರಾಗಿ ಅಚ್ಚರಿ ಮೂಡಿಸಿದರು. ಅಬ್ದುಲ ರಜಾಕ್ ಹುಸೇನಸಾಬ್ ಬಾಗವಾನ ಮೊದಲಾದವರು ಹಾಜರಾಗಿ ತಮ್ಮ ಆಧಾರ ಕಾರ್ಡ್ ಪ್ರದರ್ಶಿಸಿದರು. ಆಗ ಪ್ರಕಾಶ್ ರೈ ಸಹ, ನಮ್ಮ ದೇಶದಲ್ಲಿ ನಡೆಯುತ್ತಿರುವ ದೊಡ್ಡ ದುರಂತವಿದು, ಆದರೆ ಈ ಅನ್ಯಾಯವನ್ನು ನಾನು ಸಹಿಸಲ್ಲ. ನೋಡಿ ಈ ವ್ಯಕ್ತಿ ಜೀವಂತವಾಗಿಯೇ ಇದ್ದಾನೆ, ಭೂತ ಅಲ್ಲ. ಮುಟ್ಟಿ ನೋಡಿ, ಈ ವ್ಯಕ್ತಿ ಮರಣವನ್ನಪ್ಪಿದ್ದಾನೆ ಎಂದು ಡಿಲೀಟ್ ಮಾಡಲು ಲೆಟರ್ ಕೊಟ್ಟಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಕೆಲ ದಿನಗಳ ಹಿಂದೆ ಈ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ನಗರ ಶಾಸಕರು ಅಧಿಕೃತ ಲೆಟರ್ ಹೆಡ್ ನಲ್ಲಿ ಮನವಿ ನೀಡಿದ್ದು, ಈಗ ಸತ್ಯಾಸತ್ಯತೆಯನ್ನು ಅಧಿಕಾರಿಗಳೇ ಅಧಿಕೃತವಾಗಿ ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದರು.