ವನಹಳ್ಳಿ ಗ್ರಾಮಸ್ಥರು ಊರಿನ ದೇವಸ್ಥಾನದ ಎದುರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ 70 ವರ್ಷ ದಾಟಿದ ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು.

ಧಾರವಾಡ: ವನಹಳ್ಳಿ ಗ್ರಾಮಸ್ಥರು ಊರಿನ ದೇವಸ್ಥಾನದ ಎದುರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ 70 ವರ್ಷ ದಾಟಿದ ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು.

ಶುಕ್ರವಾರ ನಡೆದ ಈ ಪ್ರತಿಭಟನೆಯಲ್ಲಿ ಎಐಡಿಎಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯದ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ಹೆಬ್ಬಳ್ಳಿಯ ಸರ್ಕಾರಿ ಹಿರಿಯ ಬಾಲಕರ ಮಾದರಿ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ವನಹಳ್ಳಿ ಗ್ರಾಮದ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ. 225 ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರ ಬಡ ರೈತ-ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ತಲವಾಯಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಮಾರಡಗಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಹೆಬ್ಬಳ್ಳಿಯ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಹೆಬ್ಬಳ್ಳಿಯ ಜನತಾ ಪ್ಲಾಟ್ ಹಿರಿಯ ಪ್ರಾಥಮಿಕ ಶಾಲೆ, ಶಿವಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಆರು ಶಾಲೆಗಳನ್ನು ಮುಚ್ಚಿ ಹೆಬ್ಬಳ್ಳಿಯ ಮ್ಯಾಗ್ನೆಟ್ ಶಾಲೆಗೆ ಸೇರಿಸಲಾಗುತ್ತಿದೆ. ಈ ರೀತಿ ಕೇವಲ ಧಾರವಾಡ ಜಿಲ್ಲೆಯಲ್ಲೇ 500ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗುತ್ತಿದೆ.

ಹೋರಾಟಗಾರ ಯೋಗೇಶ್ ಹುಂಬಿ ಮಾತನಾಡಿ, ವನಹಳ್ಳಿ ಶಾಲೆ ಮುಚ್ಚಿದರೆ ಮಕ್ಕಳನ್ನು ಖಂಡಿತ ಹೆಬ್ಬಳ್ಳಿಗೆ ಕಳಿಸಲು ಸಾಧ್ಯವಿಲ್ಲ. ನಮ್ಮೂರಿಗೆ ಸರಿಯಾದ ಬಸ್ ಇಲ್ಲ. ಜನರು ಹೊಲದ ಕೆಲಸಕ್ಕೆ ಹೋದರೆ ಬರುವುದೇ ರಾತ್ರಿ. ಯಾವ ಭರವಸೆಯ ಮೇಲೆ ನಾವು ಬೇರೆ ಊರಿಗೆ ನಮ್ಮ ಮಕ್ಕಳನ್ನು ಹೇಗೆ ಕಳಿಸಬೇಕು? ಇಷ್ಟಾಗಿಯೂ ಸರ್ಕಾರ ನಮ್ಮ ಊರಿನ ಶಾಲೆಯನ್ನು ಮುಚ್ಚಲು ಮುಂದುವರೆದರೆ ವನಹಳ್ಳಿ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಸಿಂಧೂ ಕೌದಿ, ವೀರಭದ್ರಯ್ಯ ಚಿಕ್ಕಮಠ, ಕಲ್ಲಪ್ಪ ರಾಮನಾಳ, ಚಂದ್ರಶೇಖರ್ ಹಿರೇಮಠ, ಮಾಂತೇಶ ಮೆಣಸಿನಕಾಯಿ, ಇಮಾಮಸಾಬ್, ಕಲ್ಲಪ್ಪ ಮೆಣಸಿನಕಾಯಿ, ಊರಿನ ಗ್ರಾಮಸ್ಥರಿದ್ದರು.