ಸಾರಾಂಶ
ಕನ್ನಡಪ್ರಭ ವಾರ್ತೆ ಘಟಪ್ರಭಾ
ಸಂತರು ಇದ್ದಲ್ಲಿ ಸಂತಸ ಇರುತ್ತದೆ. ಸಂಪತ್ತು ಇದ್ದಲ್ಲಿ ಸಂತಾಪ ಇರುತ್ತದೆ. ನಿಜವಾದ ಸಂಪತ್ತು, ಸಂತಸ ಸಿಗುವುದು ಗುರವಿನಲ್ಲಿ ಮಾತ್ರ ಎಂದು ನಯಾನಗರದ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು.ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ಹನುಮಾನ ದೇವರ ಕಾರ್ತಿಕೋತ್ಸವದ ನಿಮಿತ್ತ ಶ್ರೀ ಹನುಮಾನ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಕರುಣೆ ಮನುಷ್ಯನಿಗೆ ಆಗಬೇಕಾದರೇ ಗುರುವಿನಲ್ಲಿ ಭಕ್ತಿಯಿಂದ, ಒಳ್ಳೆಯ ಮನಸ್ಸಿನಿಂದ, ಶ್ರದ್ಧೆಯಿಂದ ನಡೆದುಕೊಳ್ಳಬೇಕು. ಜ್ಞಾನ ಮತ್ತು ಮುಕ್ತಿ ಪಡೆಯಬೇಕಾದರೆ ಗುರು ಮುಖ್ಯವಾಗಿದ್ದಾನೆ. ವ್ಯಕ್ತಿ, ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು ಎಂದರು.
ಅಧ್ಯಾತ್ಮಿಕವಾಗಿ ಸಾಧನೆ ಮಾಡಬೇಕಾದರೂ ಸಹ ಜ್ಞಾನ ಅತ್ಯಂತ ಅವಶ್ಯವಾಗಿದೆ. ಶಿಂದಿಕುರಬೇಟ ಗ್ರಾಮವು ಅಧ್ಯಾತ್ಮಿಕತೆಯಿಂದ ಕೂಡಿದ್ದು ಎಲ್ಲ ಸಮುದಾಯದ ಜನರು ಮತ್ತು ಭಕ್ತರು ಮಹಾತ್ಮರಲ್ಲಿ, ಶರಣರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟಿದ್ದಾರೆ ಎಂದರು.ಸೇವಾ ಸಮಿತಿಯವರು ಶ್ರೀ ಹನುಮಾನ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳಿಗೆ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ನೀಡಿ ಭಕ್ತರ ಹಾಗೂ ಜನರ ಮನಸ್ಸುಗಳನ್ನು ಗಟ್ಟಿಗೊಳಿಸಿದ್ದಾರೆ. ನಾಡಿನ ಶ್ರೇಷ್ಠ ಸಂತರು, ಮಹಾತ್ಮರು, ಅನುಭಾವಿಗಳು ಆಗಮಿಸಿದ್ದು ಅವರ ದರ್ಶನ ಪಡೆದು ಅವರ ಮಾತುಗಳನ್ನು ಕೇಳುವುದೇ ಪುಣ್ಯ ಎಂದರಲ್ಲದೇ ಗುರುಗಳು ಭಕ್ತರ ಪಾಲಿಗೆ ನೀತಿಯ ಗುರುಗಳಾಗಿ ನೀತಿಯ ವ್ಯಕ್ತಿತ್ವವನ್ನು ತಿಳಿಸಿಕೊಟ್ಟಿದ್ದಾರೆ. ಭಗವಂತನ ಸ್ಮರಣೆ ಅಗತ್ಯವಾಗಿದೆ. ಗುರುವಿನ ಮತ್ತು ಶಿಷ್ಯನ ಸಂಬಂಧ ಅಪಾರವಾಗಿದೆ ಎಂದರಲ್ಲದೇ ಭಕ್ತಿ ಪಂಕ್ತದಲ್ಲಿ ನಡೆದವರ ಹೆಸರು ಇತಿಹಾಸದಲ್ಲಿ ಇದ್ದಾರೆ. ನಾವುಗಳ ಕೂಡಾ ನಮ್ಮ ಸಂಸ್ಕೃತಿ, ಧರ್ಮ, ಗುರು, ತಂದೆ-ತಾಯಿಗಳನ್ನು ಪ್ರೀತಿ, ವಾತ್ಸಲ್ಯ, ನಂಬಿಕೆಯಿಂದ ಕಾಣಿದರೇ ಮಾತ್ರ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ವೇದಿಕೆ ಮೇಲೆ ವಿಠ್ಠಲ ದೇವರ ದೇವಋಷಿ ಮುರೇಪ್ಪ ಪೂಜೇರಿ, ಬಸವೇಶ್ವರ ದೇವರ ದೇವಋಷಿ ಬಸವರಾಜ ಕಬ್ಬೂರ, ರವಿ ಸ್ವಾಮಿಜಿ, ಪ್ರವಚನಕಾರ ದಯಾನಂದ ಬೆಳಗಾವಿ, ಸದಾಶಿವ ಗುದಗಗೋಳ, ಮಲ್ಲಿಕಾರ್ಜುನ ಚೌಕಶಿ ಊರಿನ ಗಣ್ಯರು ಇದ್ದರು.ರಕ್ತದಾನ ಮಾಡಿದ ರಕ್ತದಾನಿಗಳಿಗೆ ಗೋಕಾಕ ರೋಟರಿ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕ ಮಹಾಂತೇಶ ಬೆಳಗಲಿ ಸ್ವಾಗತಿಸಿ ,ನಿರೂಪಿಸಿದರು.