ಸಂಪತ್ತು ಅಳಿದರೂ ಸಂಗ್ರಹಿಸಿದ ಜ್ಞಾನ ಅಳಿಯದು-ಶಾಂತಲಿಂಗ ಸ್ವಾಮೀಜಿ

| Published : Nov 07 2025, 03:00 AM IST

ಸಂಪತ್ತು ಅಳಿದರೂ ಸಂಗ್ರಹಿಸಿದ ಜ್ಞಾನ ಅಳಿಯದು-ಶಾಂತಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂದು ಮಂತ್ರಗಳು ಕೆಲಸ ಮಾಡುತ್ತಿದ್ದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ತಂತ್ರಗಳು ಕೆಲಸ ಮಾಡುತ್ತವೆ. ನಾವು ಸಂಪಾದಿಸಿದ ಹಣ, ಆಸ್ತಿ ಅಳಿಯಬಹುದು, ಆದರೆ ಸಂಗ್ರಹಿಸಿದ ಜ್ಞಾನ ಅಳಿದು ಹೋಗಲಾರದು ಎಂದು ಹೊಸಮಠ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಅಂದು ಮಂತ್ರಗಳು ಕೆಲಸ ಮಾಡುತ್ತಿದ್ದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ತಂತ್ರಗಳು ಕೆಲಸ ಮಾಡುತ್ತವೆ. ನಾವು ಸಂಪಾದಿಸಿದ ಹಣ, ಆಸ್ತಿ ಅಳಿಯಬಹುದು, ಆದರೆ ಸಂಗ್ರಹಿಸಿದ ಜ್ಞಾನ ಅಳಿದು ಹೋಗಲಾರದು ಎಂದು ಹೊಸಮಠ ಶಾಂತಲಿಂಗ ಸ್ವಾಮೀಜಿ ಹೇಳಿದರು.ನಗರದ ಹೊಸಮಠದಲ್ಲಿ ಬಸವ ಕೇಂದ್ರ, ಅಕ್ಕನ ಬಳಗ, ಶೂನ್ಯ ಫೌಂಡೇಶನ್ ಹಾಗೂ ತಾಯಿ ಸೇವಾ ಫೌಂಡೇಶನ್ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಮಾಜಿಕ ಜಾಲತಾಣಗಳ ಸಾಧಕ-ಬಾಧಕಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಬೆಂಕಿ ಇದ್ದಂತೆ. ಅದರಿಂದ ಅನ್ನವನ್ನು ಮಾಡಬಹುದು, ನಾಶವನ್ನು ಮಾಡಬಹುದು. ಅದರ ಸದ್ಬಳಕೆ ನಮ್ಮ ಕೈಯಲ್ಲಿದೆ. ಸಂವಾದದ ಮೂಲಕ ಸಂದೇಶ ರವಾನಿಸುವ ಈ ಕಾರ್ಯಕ್ರಮ ಶ್ಲಾಘನೀಯ. ಮನುಷ್ಯ ಏನೆಲ್ಲ ತಿಳಿದುಕೊಂಡರೂ ತನ್ನನ್ನು ತಾನು ತಿಳಿದುಕೊಂಡಿಲ್ಲ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ಈ ರೀತಿಯ ಸಂವಾದಗಳು ನಡೆಯುತ್ತಿರಬೇಕು ಎಂದರು.ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಮೇಲೆ ನಿರ್ಬಂಧಗಳ ಮಿತಿಗಳು ಇರಬೇಕು ಎಂಬ ವಿಚಾರವಾಗಿ ವಿಶ್ವದಾದ್ಯಂತ ಪದ-ವಿರೋಧ ಚರ್ಚೆಗಳು ಬಹಳ ಜೋರಾಗಿ ನಡೆದಿವೆ. ಆಸ್ಟೇಲಿಯಾದಲ್ಲಿ 16 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಬಳಕೆ ಮಾಡುವಂತಿಲ್ಲ ಎಂದು ಕಾನೂನು ರೂಪಿಸಿದ ಮೊದಲ ದೇಶವಾಗಿದೆ ಎಂದರು.ಸಾಧಕಗಳ ಕುರಿತು ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ನ್ಯಾಯವಾದಿ ಅನಿತಾ ಹರನಗೇರಿ ಹಾಗೂ ಪತ್ರಕರ್ತ ಬಸವರಾಜ ಮರಳಿಹಳ್ಳಿ ಮಾತನಾಡಿದರು. ಬಾಧಕಗಳ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಶಶಿಧರ, ವಿಶ್ವವಿದ್ಯಾಲಯದ ಕೌಶಲ್ಯ ತರಬೇತಿ ಅಧಿಕಾರಿ ಅಂಬಿಕಾ ಹಂಚಾಟೆ, ನೈಸ್ ಅಕಾಡೆಮಿ ಮುಖ್ಯಸ್ಥ ಲಿಂಗರಾಜ ಸುಳ್ಳಳ್ಳಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಹಿತಿ ಸುರೇಶ ಮಲ್ಲಾಡ, ಶಿಕ್ಷಕ ಸಿ.ಎನ್. ಪಾಟೀಲ್ ಹಾಗೂ ಕಲಾವಿದ ಬಸವರಾಜ ಗೊಬ್ಬಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ನಿಂಗಣ್ಣ ಚಾವಡಿ ಅವರನ್ನು ಗೌರವಿಸಲಾಯಿತು. ಶಿಕ್ಷಕ ಸಾಹಿತಿ ನಾಗರಾಜ ಹೊನ್ನತ್ತಿಗೌಡ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಮಮತಾ ನಂದಿಹಳ್ಳಿ ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕ ಎ.ಎಚ್. ಕಬ್ಬಿಣ ಕಂತಿಮಠ ಸ್ವಾಗತಿಸಿದರು. ಶಿಕ್ಷಕ ಚೆನ್ನಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.