ಕಚೇರಿ, ಕಾರ್ಖಾನೆಗಳಲ್ಲಿ ಆಯುಧ ಪೂಜೆ ಜೋರು

| Published : Oct 01 2025, 01:00 AM IST

ಸಾರಾಂಶ

ಬುಧವಾರ ಮತ್ತು ಗುರುವಾರ ರಜೆ ಹಿನ್ನೆಲೆಯಲ್ಲಿ ಮಂಗಳವಾರವೇ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಕೈಗೊಳ್ಳಲಾಯಿತು. ವಿಧಾನ ಸೌಧ, ವಿಕಾಸಸೌಧದ ಸಚಿವರ ಕಚೇರಿಗಳನ್ನು ಹೂವು, ತಳಿರು ತೋರಣ, ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಪೂಜೆ ನೆರವೇರಿಸಿ ಬಳಿಕ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬುಧವಾರ ಮತ್ತು ಗುರುವಾರ ರಜೆ ಹಿನ್ನೆಲೆಯಲ್ಲಿ ಮಂಗಳವಾರವೇ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಕೈಗೊಳ್ಳಲಾಯಿತು. ವಿಧಾನ ಸೌಧ, ವಿಕಾಸಸೌಧದ ಸಚಿವರ ಕಚೇರಿಗಳನ್ನು ಹೂವು, ತಳಿರು ತೋರಣ, ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಪೂಜೆ ನೆರವೇರಿಸಿ ಬಳಿಕ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು.

ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬೂದು ಕುಂಬಳಕಾಯಿ ಸೇರಿದಂತೆ ಪೂಜಾ ಸಾಮಗ್ರಿ ಖರೀದಿಗೆ ಜನರು ಮಂಗಳವಾರ ಮುಗಿ ಬಿದ್ದಿದ್ದು ಕಂಡುಬಂತು. ಕೃಷ್ಣರಾಜೇಂದ್ರ ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಗಾಂಧಿ ಬಜಾರ್, ಜಯನಗರ ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಹೂವು, ಬೂದು ಕುಂಬಳಕಾಯಿ, ಬಾಳೆ ದಿಂಡು, ಮಾವಿನ ಸೊಪ್ಪು, ಕರ್ಪೂರ, ಊದುಬತ್ತಿ, ಬಾಳೆಹಣ್ಣು, ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿ ಖರೀದಿ ಹೆಚ್ಚಾಗಿತ್ತು.

ಆಯುಧ ಪೂಜೆ ಹಿನ್ನಲೆಯಲ್ಲಿ ಬೂದುಕುಂಬಳ ಕಾಯಿಗೆ ಬೇಡಿಕೆ ಹೆಚ್ಚಾಗಿದ್ದು ಕೆಜಿಗೆ 30 ರಿಂದ 50 ರುಪಾಯಿಯವರೆಗೂ ಮಾರಾಟವಾಯಿತು. ಸಾಮಾನ್ಯವಾಗಿ ಆಯುಧ ಪೂಜೆ ಸಮಯದಲ್ಲಿ ತಮಿಳುನಾಡಿನಿಂದ ಕೆ.ಆರ್‌.ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೂದುಕುಂಬಳಕಾಯಿ ಸರಬರಾಜಾಗುತ್ತದೆ. ಆದರೆ ಈ ಬಾರಿ ತಮಿಳುನಾಡಿನಲ್ಲಿ ಅಧಿಕ ಮಳೆಯಾಗಿ ಕಡಿಮೆ ಪೂರೈಕೆಯಾಗಿರುವುದೂ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಹೂವಿಗೂ ಬೇಡಿಕೆ ಹೆಚ್ಚು:

ಹಬ್ಬದ ಹಿನ್ನೆಲೆಯಲ್ಲಿ ಹೂವಿಗೂ ಹೆಚ್ಚು ಬೇಡಿಕೆ ಉಂಟಾಗಿದ್ದು ಗುಲಾಬಿ, ಕನಕಾಂಬರ, ಮಲ್ಲಿಗೆ, ಕಾಕಡ, ಸೇವಂತಿಗೆ ಸೇರಿದಂತೆ ವಿವಿಧ ಹೂವುಗಳ ಖರೀದಿ ಹೆಚ್ಚಾಗಿತ್ತು. ಚೆಂಡು ಹೂವಿಗೆ ಅಷ್ಟೊಂದು ಬೇಡಿಕೆ ಇರುವುದು ಕಂಡುಬರಲಿಲ್ಲ. ಕೆಜಿ ಗುಲಾಬಿ ಹೂವಿಗೆ ಸಗಟು ದರ 225 ರಿಂದ 300 ರು. ಇದ್ದರೆ ಚಿಲ್ಲರೆ ದರವು 350 ರಿಂದ 400 ರು. ಇತ್ತು.

ಕೆಜಿ ಸೇವಂತಿಗೆಯ ಸಗಟು ದರ 150 ರಿಂದ 250 ರು. ಇದ್ದರೆ ಚಿಲ್ಲರೆ ಮಾರಾಟ ಮಾರಾಟಗಾರರು ಕೆಜಿಗೆ 300 ರಿಂದ 350 ರು. ದರ ನಿಗದಿಪಡಿಸಿದ್ದರು. ಮಲ್ಲಿಗೆ ಮತ್ತು ಕಾಕಡ ಹೂವು ಕೆಜಿಗೆ 400 ರು.ವರೆಗೂ ಬಿಕರಿಯಾಯಿತು. ಬೆಲೆ ಹೆಚ್ಚಾದರೂ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಖರೀದಿ ಉತ್ಸಾಹಕ್ಕೇನೂ ಕೊರತೆ ಕಂಡು ಬರಲಿಲ್ಲ.