ಸಾರಾಂಶ
ಪಟ್ಟಣದ ಪವರ್ ಲೂಮ್‌ನಲ್ಲಿ ಕೂಲಿ ಕೆಲಸ ಮಾಡುವ ಚಂದ್ರು-ಮಾಲ ದಂಪತಿ ಮಗಳು ಭಾವನಾ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಿಜಯಪುರ: ಪಟ್ಟಣದ ಪವರ್ ಲೂಮ್‌ನಲ್ಲಿ ಕೂಲಿ ಕೆಲಸ ಮಾಡುವ ಚಂದ್ರು-ಮಾಲ ದಂಪತಿ ಮಗಳು ಭಾವನಾ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಭಾವನಾ ಬಡತನದ ನಡುವೆಯೂ ಯಾವುದೇ ಟ್ಯೂಷನ್ ಇಲ್ಲದೆ ತಾನೇ ಮನೆಯಲ್ಲಿ ಓದಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಟಾಪರ್ ಆಗಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ಊರಿಗೆ ಕೀರ್ತಿ ತಂದಿರುವಳು.
ವಿದ್ಯಾರ್ಥಿನಿ ಭಾವನ ಮಾತನಾಡಿ, ರಾಜ್ಯಕ್ಕೆ ಟಾಪರ್ ಆಗುತ್ತೇನೆಂದು ನಿರೀಕ್ಷೆ ಇರಲಿಲ್ಲ, ಪ್ರಾರಂಭದ ಹಂತದಿಂದಲೂ ಹೆಚ್ಚುವರಿ ಶ್ರಮ ಹಾಕಿ ಏನು ಓದುತ್ತಿರಲಿಲ್ಲ. ನಂತರದ ದಿನಗಳಲ್ಲಿ ಶಾಲಾ ಶಿಕ್ಷಕರು ಪ್ರತಿವಾರ ಮನೆಗೆ ಬಂದು ಪೋಷಕರೊಂದಿಗೆ ಮಾತನಾಡಿದರು. ಬಳಿಕ ನಾನು ಸಹ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತೆಂದು ಈ ಫಲಿತಾಂಶಕ್ಕಾಗಿ ಶಾಲಾ ಮುಖ್ಯ ಶಿಕ್ಷಕರು, ಆಡಳಿತ ವರ್ಗ ಹಾಗೂ ತಂದೆ ತಾಯಿಗೆ ಕೃತಜ್ಞತೆ ಅರ್ಪಿಸುತ್ತೇನೆ.
ವಿದ್ಯಾರ್ಥಿನಿಯ ತಂದೆ ಚಂದ್ರು ವಿಕಲಚೇತನರು. ಮಗ್ಗದ ಕೆಲಸ ಮಾಡುತ್ತ ಕಷ್ಟಪಟ್ಟು ಮಗಳನ್ನು ಓದಿಸಿದರು. ತಾವು ಇದುವರೆಗೂ ಮಗಳಿಗೆ ಚೆನ್ನಾಗಿ ಓದು ಎಂದೂ ಒತ್ತಡ ಹೇರುತ್ತಿರಲಿಲ್ಲ. ರಾತ್ರಿ ಹೆಚ್ಚು ಸಮಯದವರೆಗೂ ಓದಿದರೆ ಆರೋಗ್ಯ ಹಾಳಾಗುತ್ತದೆ. ನಿದ್ದಯೂ ಮಾಡಬೇಕು. ಓದುವ ಸಮಯದಲ್ಲಿ ಮಾತ್ರ ಓದು ಎಂದು ಹೇಳುತ್ತಿದ್ದೆ. ಇದೀಗ ಮಗಳ ಸಾಧನೆ ನಮಗೆ ಅಪಾರ ಸಂತೋಷ ನೀಡಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯ ತಾಯಿ ಗೃಹಿಣಿಯಾಗಿದ್ದು ತಾವು ಮಗಳಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ನೀಡಿದ್ದೇವೆಯೇ ಹೊರತು ಹೆಚ್ಚುವರಿಯಾಗಿ ನಾವೇನು ಮಾಡಲು ಸಾಧ್ಯವಾಗಿಲ್ಲ, ಅವಳ ಈ ಫಲಿತಾಂಶಕ್ಕೆ, ಎಲ್ಲಾ ಭಾವನಾಳ ಶ್ರಮವೇ ಆಗಿದೆ. ನಮ್ಮ ಮಗಳು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಒಕ್ಕಲಿಗರ ನೀಲಗಿರೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ವೀರಣ್ಣ ಮಾತನಾಡಿ, ನಮ್ಮ ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತಂದಿರುವ ಭಾವನಾ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಸಾಧ್ಯವಿರುವ ಎಲ್ಲಾ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಒಕ್ಕಲಿಗರ ಸಂಘದ ನೀಲಗಿರೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ ಮಾತನಾಡಿ, ಸಂಸ್ಥೆಯಲ್ಲಿ ಬೇರೆ ಶಾಲೆಗಳಲ್ಲಂತೆ ಕೇವಲ ಟಾಪರ್‌ಗಳು ಮಾತ್ರ ಇರುವುದಿಲ್ಲವೆಂದು, ಜಸ್ಟ್ ಪಾಸ್ ಆಗಿರುವ ಮಕ್ಕಳನ್ನು ಸಹ ಇಲ್ಲಿ ಸೇರಿಸಿಕೊಂಡು ಅತ್ಯುತ್ತಮ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಫಲಿತಾಂಶ ನೀಡಲಾಗುತ್ತಿರುವ ಶಾಲಾ ಮುಖ್ಯ ಶಿಕ್ಷಕ ಸೋಮಶೇಖರ್ ಹಾಗೂ ಸಿಬ್ಬಂದಿ ವರ್ಗದ ಶ್ರಮವೂ ಕಾರಣ. ಈಗಲೂ ನಮ್ಮ ಶಾಲೆಯಲ್ಲಿ ೫೪ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತು ಹತ್ತು ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ, ೨೭ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉಳಿದ ೧೭ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ ತಂದು ಕೊಟ್ಟಿರುವರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸೋಮಶೇಖರ್, ಆಡಳಿತ ಮಂಡಳಿಯ ಕೇಶವಪ್ಪ, ನಾಗರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.