ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಪ್ಪು ಹಣಕ್ಕೆ ಹಾಗೂ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸುವ ವಿಧೇಯಕವನ್ನು ಮಾರ್ಚ್ ತಿಂಗಳಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ ರಬಕವಿ-ಬನಹಟ್ಟಿ ತಾಲೂಕಿನ ನೇಕಾರರಿಗೆ ಇದು ಅನ್ವಯವಿಲ್ಲವೆಂಬಂತಾಗಿದೆ. ಮೈಕ್ರೋ ಫೈನಾನ್ಸ್‌ನವರು ಈಗಲೂ ಕಿರುಕುಳ ಮುಂದುವರೆಸಿವೆ.ರಬಕವಿ-ಬನಹಟ್ಟಿ ತಾಲೂಕು ನೇಪಥ್ಯಕ್ಕೆ ಸರಿದಿರುವ ನೇಕಾರಿಕೆಯಿಂದ ತುತ್ತಿನಚೀಲ ತುಂಬಿಸಿಕೊಳ್ಳಲು ಹೆಣಗುತ್ತಿರುವ ಬಡ ನೇಕಾರರಿಗೆ ಗಾಯದ ಮೇಲೆ ಬರೆ ಎಂಬಂತೆ ಲೇವಾದೇವಿ ಮಾಫಿಯಾ ಪ್ರಹಾರಕ್ಕೆ ತತ್ತರಿಸಿದ್ದಾರೆ. ಅವಳಿ ನಗರದ ನೇಕಾರರಿರುವ ಕನಿಷ್ಠ ಜೀವನಮಟ್ಟ ಹೊಂದಿರುವ ಪ್ರದೇಶವಾಗಿರುವ ಕಾರಣ ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಲಕ್ಷಾಂತರ ನೇಕಾರರು ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದಾರೆ.ಬನಹಟ್ಟಿಯ ಸದಾಶಿವ ಕಾಲನಿ, ಅಶೋಕ ಕಾಲನಿ, ನೀರಿನ ಟಾಕಿ ಸೇರಿ ಹಲವು ಪ್ರದೇಶಗಳಲ್ಲಿ ಅಷ್ಟಕಷ್ಟೇ ಬದುಕು ಕಟ್ಟಿಕೊಂಡಿರುವ ನೇಕಾರ ಸಮುದಾಯಕ್ಕಂತೂ ಸಾಕಾಗಿ ಹೋಗಿದೆ. ನಸುಕಿನ ಜಾವವೇ ನೇಕಾರ ಮನೆಗಳಿಗೆ ತೆರಳಿ ಬಡ್ಡಿಸಹಿತ ಅಸಲು ಈಗಲೇ ತುಂಬಬೇಕೆಂದು ಪೀಡಿಸುತ್ತಿದ್ದು, ಕುಟುಂಬ ನಿರ್ವಹಣೆಗೆ ಹರಸಾಹಸ ಪಡುತ್ತಿರುವ ನೇಕಾರರು ಲೇವಾದೇವಿಗಾರರ ಪೀಡನೆಗೆ ನಲುಗಿದ್ದಾರೆ.
ಮನೆ ಬಿಟ್ಟು ಹೋಗುತ್ತಿರುವ ನೇಕಾರರು: ಉದ್ಯೋಗವಿಲ್ಲದೇ ಆದಾಯ ಕಾಣದ ನೇಕಾರರು ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ಅಲ್ಲದೆ ಬೆಳಗಿನ ಜಾವವೇ ಮನೆಗೆ ಬರುತ್ತಿರುವುದರಿಂದ ರಾತ್ರಿ ಹೊತ್ತು ಮನೆಗೆ ಕೀಲಿ ಹಾಕಿ ಮನೆಯಲ್ಲಿ ಮಲಗದೆ ಗುಡಿ-ಗುಂಡಾರಗಳಲ್ಲಿ ಮಲಗಿಗೊಂಡು ತಡವಾಗಿ ಮನೆ ಸೇರುವಂತಾಗಿದೆ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಂತೆ ಮೈಕ್ರೋ ಫೈನಾನ್ಸ್‌ಗಳ ದಂಧೆ ಮಾಡುವವರನ್ನು ಬಗ್ಗು ಬಡಿಯಬಹುದಾಗಿತ್ತು. ಆದರೆ ಸುಗ್ರೀವಾಜ್ಞೆ ನಂತರ ಸರ್ಕಾರ ಸಂಪೂರ್ಣ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿದೆಯೇ ಎಂಬ ಅನುಮಾನ ಮೂಡುತ್ತಿದೆ.ಈ ಮೊದಲು ಸಕಷ್ಟು ಬಡಜನರ ಪ್ರಾಣ ನಷ್ಟವಾಗಿದೆ. ಕಾನೂನುನ್ನು ಕಟ್ಟುನಿಟ್ಟಾಗಿ ಪಾಲನೆಯೊಂದಿಗೆ ಸದ್ಯ ಆರ್ಥಿಕ ಸಂಕಷ್ಟದಲ್ಲಿರುವ ನೇಕಾರ ಕುಟುಂಬಗಳ ಬದುಕು ಸುಗಮಗೊಳಿಸುವಲ್ಲಿ ಹಾಗೂ ಸರ್ಕಾರದ ಆದೇಶ ಪಾಲನೆಯಲ್ಲಿ ಪೋಲೀಸ ಇಲಾಖೆ ಮಧ್ಯಸ್ಥಿಕೆ ವಹಿಸಬೇಕಿದೆ.
ಬಡಜನರ ರಕ್ತ ಹೀರುವ ಮೈಕ್ರೋ ಫೈನಾನ್ಸ್‌ಗಳ ಕಿರುಕುಳವಾದಲ್ಲಿ ತಕ್ಷಣೇ ಪೊಲೀಸ್ ಠಾಣೆ ಸಂಪರ್ಕಿಸಿ. ಸರ್ಕಾರ ಬೇರುಮಟ್ಟದಿಂದ ಇದನ್ನು ಕಿತ್ತು ಹಾಕಬೇಕು.- ಸಿದ್ದು ಸವದಿ ಶಾಸಕರು ತೇರದಾಳ