ವೀಕೆಂಡ್‌ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿ ಸ್ಮಾರಕಗಳನ್ನು ವೀಕ್ಷಿಸಿ ಖುಷಿಪಟ್ಟರು.

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾನುವಾರ ಕೂಡ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ವೀಕೆಂಡ್‌ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿ ಸ್ಮಾರಕಗಳನ್ನು ವೀಕ್ಷಿಸಿ ಖುಷಿಪಟ್ಟರು.

ಹಂಪಿಯ ಗೆಜ್ಜಲ ಮಂಟಪದಿಂದ ಬ್ಯಾಟರಿ ಚಾಲಿತ ವಾಹನಗಳು ಸಮಯಕ್ಕೆ ಸರಿಯಾಗಿ ದೊರೆಯದೇ ಹಲವು ಪ್ರವಾಸಿಗರು ನಡೆದುಕೊಂಡೇ ವಿಜಯ ವಿಠಲ ದೇವಾಲಯ, ಕಲ್ಲಿನತೇರು, ಸಪ್ತಸ್ವರ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ರಥಬೀದಿ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪತಿ, ಕಡಲೆ ಕಾಳು ಗಣಪತಿ, ಬಡವಿಲಿಂಗ, ಉಗ್ರ ನರಸಿಂಹ, ಶ್ರೀಕೃಷ್ಣ ದೇವಾಲಯ, ಉದ್ದಾನ ವೀರಭದ್ರೇಶ್ವರ ದೇವಾಲಯ, ಮಹಾನವಮಿ ದಿಬ್ಬ, ಹಜಾರ ರಾಮ ದೇವಾಲಯ, ರಾಣಿ ಸ್ನಾನ ಗೃಹ, ಕಮಲ ಮಹಲ್‌, ಪುರಂದರದಾಸರ ಮಂಟಪ, ರಾಜರ ತುಲಾಭಾರ, ವಿಷ್ಣು ಮಂಟಪ, ಕೋದಂಡರಾಮ, ಯಂತ್ರೋದ್ಧಾರಕ ಆಂಜನೇಯ, ವರಾಹ ದೇವಾಲಯ, ಅಚ್ಯುತರಾಯ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ದೇಶ, ವಿದೇಶಿ ಪ್ರವಾಸಿಗರು ವೀಕ್ಷಿಸಿದರು.

ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ 14 ಬ್ಯಾಟರಿ ಚಾಲಿತ ವಾಹನಗಳು ಕೂಡ ಸಾಲದೇ ಪ್ರವಾಸಿಗರು ನಡೆದುಕೊಂಡೇ ಸ್ಮಾರಕಗಳನ್ನು ವೀಕ್ಷಿಸಿದರು. ಇನ್ನೂ ದೂರದೂರಿನಿಂದ ಸ್ಮಾರಕಗಳ ವೀಕ್ಷಣೆಗೆ ಬಂದಿರುತ್ತೇವೆ. ಸಮಯಕ್ಕೆ ಸರಿಯಾಗಿ ಬ್ಯಾಟರಿ ಚಾಲಿತ ವಾಹನಗಳನ್ನು ಓಡಿಸಬೇಕು. ಇದರಿಂದ ಉಳಿದ ಸ್ಮಾರಕಗಳ ವೀಕ್ಷಣೆಗೆ ಅನುಕೂಲ ಆಗಲಿದೆ ಎಂದು ಕೆಲವು ಪ್ರವಾಸಿಗರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾನುವಾರ ಆಗಮಿಸಿದ್ದ ಪ್ರವಾಸಿಗರು; ಬ್ಯಾಟರಿ ಚಾಲಿತ ವಾಹನಗಳು ದೊರೆಯದೇ ನಡೆದುಕೊಂಡೇ ಸ್ಮಾರಕಗಳನ್ನು ವೀಕ್ಷಿಸಿದರು. ಹಂಪಿ ವಿಜಯ ವಿಠಲ ದೇವಾಲಯದಲ್ಲಿ ಸ್ಮಾರಕಗಳನ್ನು ವೀಕ್ಷಿಸಿದ ಪ್ರವಾಸಿಗರು.