ಅಯೋಧ್ಯೆಯಲ್ಲಿ ಮಂಡಲೋತ್ಸವ ಪೂರೈಸಿದ ಪೇಜಾವರ ಶ್ರೀಗಳಿಗೆ 17ರಂದು ಸ್ವಾಗತ ಸಮಾರಂಭ

| Published : Mar 15 2024, 01:19 AM IST / Updated: Mar 15 2024, 01:20 AM IST

ಅಯೋಧ್ಯೆಯಲ್ಲಿ ಮಂಡಲೋತ್ಸವ ಪೂರೈಸಿದ ಪೇಜಾವರ ಶ್ರೀಗಳಿಗೆ 17ರಂದು ಸ್ವಾಗತ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಶ್ರೀಗಳನ್ನು ನೂರಾರು ವಾಹನಗಳ ಜಾಥಾದೊಂದಿಗೆ ಕೆ.ಎಂ. ಮಾರ್ಗ - ಹಳೆ ಸರ್ವಿಸ್ ಬಸ್ ನಿಲ್ದಾಣ, ಸಂಸ್ಕೃತ ಕಾಲೇಜಿಗೆ ಕರೆತಂದು, ಅಲ್ಲಿಂದ ಕಾಲ್ನಡಿಗೆಯಲ್ಲಿ ರಥಬೀದಿಗೆ ಬಂದು ಶ್ರೀಕೃಷ್ಣದೇವರು, ಶ್ರೀ ಅನಂತೇಶ್ವರ ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಪೇಜಾವರ ಮಠ ಪ್ರವೇಶಿಸುವರು.

ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಮಾ.17ರಂದು ಉಡುಪಿಗೆ ಆಗಮಿಸುತ್ತಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಉಡುಪಿಗೆ ವೈಭವದಿಂದ ಸ್ವಾಗತಿಸಲು ನಿರ್ಧರಿಸಲಾಗಿದೆ.ಅಂದು ಬೆಳಗ್ಗೆ 8.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಶ್ರೀಗಳನ್ನು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಹಿಂಪ ರಾಜ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭರತ್ ಶೆಟ್ಟಿ, ಮಂಜುನಾಥ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ, ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಲಿರುವರು.ಬಳಿಕ ವಿಮಾನ ನಿಲ್ದಾಣದಿಂದ ಬಜ್ಪೆ ಜಂಕ್ಷನ್, ಕಟೀಲು ದೇವಳ, ಮೂಲ್ಕಿ ಬಸ್ ಸ್ಟ್ಯಾಂಡ್, ಹೆಜಮಾಡಿ ಟೋಲ್ ಗೇಟ್, ಕಾಪು ಹೊಸಮಾರಿಗುಡಿ ಬಳಿ, ಕಟಪಾಡಿ ಜಂಕ್ಷನ್, ಉಡುಪಿ ಜೋಡುಕಟ್ಟೆಗಳಲ್ಲಿ ಗಣ್ಯರು ಸಂಘ ಸಂಸ್ಥೆಗಳ ಪ್ರಮುಖರು ಶ್ರೀಗಳನ್ನು ಸ್ವಾಗತಿಸುವರು.

ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಶ್ರೀಗಳನ್ನು ನೂರಾರು ವಾಹನಗಳ ಜಾಥಾದೊಂದಿಗೆ ಕೆ.ಎಂ. ಮಾರ್ಗ - ಹಳೆ ಸರ್ವಿಸ್ ಬಸ್ ನಿಲ್ದಾಣ, ಸಂಸ್ಕೃತ ಕಾಲೇಜಿಗೆ ಕರೆತಂದು, ಅಲ್ಲಿಂದ ಕಾಲ್ನಡಿಗೆಯಲ್ಲಿ ರಥಬೀದಿಗೆ ಬಂದು ಶ್ರೀಕೃಷ್ಣದೇವರು, ಶ್ರೀ ಅನಂತೇಶ್ವರ ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಪೇಜಾವರ ಮಠ ಪ್ರವೇಶಿಸುವರು.ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ 11.30ಕ್ಕೆ ಶಾಸಕ ಯಶ್ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಸ್ವಾಮೀಜಿಯವರಿಗೆ ಅಭಿವಂದನೆ, ಸಾರ್ವಜನಿಕರಿಂದ ಗೌರವಾರ್ಪಣೆ, ಶ್ರೀಗಳವರ ಅನುಗ್ರಹ ಸಂದೇಶದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ ಎಂದು ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸ್ವಾಗತ ಮತ್ತು ಅಭಿವಂದನ ಸಮಿತಿ ತಿಳಿಸಿದೆ.