ಕರ್ನಾಟಕ- 50 ಜ್ಯೋತಿ ರಥಯಾತ್ರೆಗೆ ಸ್ವಾಗತ

| Published : Nov 20 2023, 12:45 AM IST

ಸಾರಾಂಶ

ಸಂಜೆ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಕಾಲೇಜು ವಿದ್ಯಾರ್ಥಿಗಳು ಚಲನಚಿತ್ರ ಗೀತೆಗಳಿಗೆ ಗುಂಪುನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಕುರುಗೋಡು

ಪಟ್ಟಣಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ ಕರ್ನಾಟಕದ 50ರ ಸಂಭ್ರಮದ ಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಕರ್ನಾಟಕ 50ರ ಸಂಭ್ರಮದ ರಥಯಾತ್ರೆಯನ್ನು ಅಗ್ನಿಶಾಮಕ ಠಾಣೆ ಬಳಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ನಂತರ ರಥಯಾತ್ರೆ ಮೆರವಣಿಗೆಗೆ ಶಾಸಕ ಜೆ.ಎನ್. ಗಣೇಶ್ ಮತ್ತು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ನಾಡಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.

ಅಗ್ನಿಶಾಮಕ ಠಾಣೆಯಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳ ಸಂಚರಿಸಿ ಪಟ್ಟಣದ ಪ್ರಮುಖ ವೃತ್ತದಲ್ಲಿ ಸಮಾವೇಶಗೊಂಡಿತು.

ಪೂರ್ಣಕುಂಭ, ಸುಮಂಗಲೆಯರ ಕಳಸ, ರಾಮ್ಡೋಲ್, ತಾಸಿರಾಮ್, ಡೊಳ್ಳು, ಮಂಗಳವಾದ್ಯದವರು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದರು.

500 ಮೀಟರ್ ಉದ್ದದ ಹಳದಿ ಮತ್ತು ಕೆಂಪು ವರ್ಣದ ನಾಡಧ್ವಜವನ್ನು ಕೈಯಲ್ಲಿ ಹಿಡಿದು ಮುಖ್ಯ ರಸ್ತೆಯಲ್ಲಿ ಸಾಗಿದ ಸಾವಿರಾರು ವಿದ್ಯಾರ್ಥಿಗಳು ನಾಡಪ್ರೇಮ ಮೆರೆದರು.

ಬೆಂಗಳೂರಿನ ಪೀಸ್ ಟ್ವಿನ್ಸ್ ಕಲಾವಿದರ ತಂಡದ ಸದಸ್ಯರು ಮತ್ತು ಬಳ್ಳಾರಿಯ ಡೊಳ್ಳು ಕುಣಿತ ಕಲಾವಿದರ ತಂಡದ ಸದಸ್ಯರು ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು.

ಸಂಜೆ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಕಾಲೇಜು ವಿದ್ಯಾರ್ಥಿಗಳು ಚಲನಚಿತ್ರ ಗೀತೆಗಳಿಗೆ ಗುಂಪುನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಗ್ರೇಡ್- 2 ತಹಸೀಲ್ದಾರ್ ಮಲ್ಲೇಶಪ್ಪ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಬಿಇಒ ಸಿದ್ಧಲಿಂಗಮೂರ್ತಿ, ತಾಲೂಕು ಪಂಚಾಯಿತಿ ಇಒ ಕೆ.ವಿ. ನಿರ್ಮಲಾ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನ್ ಕುಮಾರಿ, ಪ್ರಾಚಾರ್ಯ ವೇಣುಗೋಪಾಲ್, ಉಪಪ್ರಾಚಾರ್ಯ ಗಾಳಿ ಮಾರುತಿ, ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.