ಸಾರಾಂಶ
ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡರು.
ಕನ್ನಡಪ್ರಭ ವಾರ್ತೆ ಮಂಗಳೂರು
ಉದ್ಯಮಿ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್ ಶೆಟ್ಟಿ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವ ಬೆರಗಿನಿಂದ ಭಾರತವನ್ನು ನೋಡುತ್ತಿದೆ. ಹಳ್ಳಿಹಳ್ಳಿಯಲ್ಲೂ ಮೋದಿ ಹೆಸರು ಕೇಳಿಬರುತ್ತಿದೆ. ಸ್ವಾವಲಂಬಿ ಬದುಕು ಸಾಗಿಸಲು ಹಲವು ಯೋಜನೆಗಳನ್ನು ನರೇಂದ್ರ ಮೋದಿ ನೀಡಿದ್ದು, ಯುವಜನತೆ ಮೆಚ್ಚಿಕೊಂಡಿದೆ. ಮೋದಿ ಅವರ ನಾಯಕತ್ವ ಮೆಚ್ಚಿ ದೇಶದ ಯುವಜನತೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಯುವ ನಾಯಕ ಅಶ್ವಿನ್ ಎಂ. ಶೆಟ್ಟಿ ಅವರನ್ನು ಪಕ್ಷ ಪ್ರೀತಿಪೂರ್ವಕವಾಗಿ ಬರಮಾಡಿಕೊಂಡಿದೆ ಎಂದು ಹೇಳಿದರು.
ಅಶ್ವಿನ್ ಶೆಟ್ಟಿ ಮಾತನಾಡಿ, ದೇಶದ ಬಗೆಗೆ ಪ್ರಧಾನಿ ಮೋದಿ ಅವರಿಗೆ ಇರುವ ಅಭಿಮಾನ ಅಪಾರವಾದುದು. ಅವರ ನಾಯಕತ್ವವೂ ಮಾದರಿ. ಯುವಜನತೆ ದೇಶದಲ್ಲೇ ಇದ್ದುಕೊಂಡು ದೇಶಕ್ಕೆ ಕೊಡುಗೆ ನೀಡಬೇಕು ಎಂಬ ಅವರ ಪರಿಕಲ್ಪನೆಯಂತೆ ವಿದೇಶದಲ್ಲಿನ ಕೆಲಸ ಬಿಟ್ಟು ದೇಶಸೇವೆಯತ್ತ ಮನಸಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದರು.ಸಂಸದ ನಳಿನ್ ಕುಮಾರ್ ಕಟೀಲು, ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಹರೀಶ್ ಕಂಜಿಪಿಲಿ, ರಾಧಾಕೃಷ್ಣ ಮತ್ತಿತರರು ಇದ್ದರು.