ಉಡುಪಿ: ಇಲ್ಲಿನ ಶಿವಾಸ್ ಫುಟ್ಬಾಲ್ ಕ್ಲಬ್ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಮಣಿಪಾಲದ ಸಿಟಿ ಅರೆನಾದಲ್ಲಿ ನಡೆಯಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪಂದ್ಯಾಟವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, “ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ಮಣಿಪಾಲದಲ್ಲಿ ಈ ಪಂದ್ಯಾಟ ಸಂಘಟಿಸಿ ಫುಟ್ಬಾಲ್ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಸೃಷ್ಟಿಸಿದೆ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಹರಿಪ್ರಸಾದ್ ರೈ ಅವರ ಮನವಿ ಮೇರೆಗೆ ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಲಿದ್ದೇವೆ ಎಂದರು.ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ “ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯ ಕ್ರೀಡೆ ಫುಟ್ಬಾಲ್. 200 ರಾಷ್ಟ್ರಗಳು ಪುಟ್ಬಾಲ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಈ ಆಟಕ್ಕೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಉಡುಪಿ ಜಿಲ್ಲೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮನ್ನಣೆ ಪಡೆದ ಹಾಗೆ ಕ್ರೀಡೆಯಲ್ಲೂ ಪ್ರಮುಖವಾಗಿ ಗುರುತಿಸುವಂತಾಗಬೇಕೆನ್ನುವ ಉದ್ದೇಶದಿಂದ ಶಿವಾಸ್ ಕಪ್ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಹರೀಶ್ ಕಿಣಿ, ಸದಾನಂದ್ ಕಾಂಚನ್, ಜಯವೀರ್ ಇನ್ನಿತರರು ಉಪಸ್ಥಿತರಿದ್ದರು.