ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ತಪ್ಪು- ಸರಿ ಹೇಳುವುದು ಬರಹಗಾರ್ತಿ ಕೆಲಸವಲ್ಲ. ಓದುವವರು ನಿರ್ಧಾರಕ್ಕೆ ಬರಬೇಕು ಎಂದು ಲೇಖಕಿ ಸಂಧ್ಯಾರಾಣಿ ಹೇಳಿದರು.ನಗರದ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಮೈಸೂರು ಲಿಟರರಿ ಫೆಸ್ಟ್‌ನಲ್ಲಿ ನಡೆದ ಅಂತರ್ಜಾಲ ಯುಗದಲ್ಲಿ ಸಂಬಂಧಗಳ ಸುಳಿಗಳು ಕುರಿತ ಗೋಷ್ಠಿಯಲ್ಲಿ ಅವರು ತಮ್ಮ ನಾತಿಚರಾಮಿ ಕಾದಂಬರಿ ಕುರಿತು ಮಾತನಾಡಿದರು.
ಸಮಾಜದಲ್ಲಿ ವಿವಾಹ ಬಂಧನವನ್ನು ನೈತಿಕ ನೆಲೆಗಟ್ಟಿನಲ್ಲಿ ರೂಪಿಸಲಾಗಿದೆ. ಗೌರಿಗೆ ಮರು ವಿವಾಹದ ಸಲಹೆ ನೀಡಿದಾಗ ಆಕೆ ಒಪ್ಪುವುದಿಲ್ಲ. ಆದರೆ, ಗೌರಿ ಹಾಗೆ ದೈಹಿಕ ಸಾಂಗತ್ಯಕ್ಕೆ ಮುಂದುವರೆದಿದ್ದು ಸರಿಯೇ? ದೈಹಿಕ ಪಾವಿತ್ರ್ಯಕ್ಕೆ ಮುಖ್ಯವಾಗಿ ಆತನನ್ನು ಮನಸ್ಸಿನಲ್ಲಿ ಮರೆಯಲು ಸಾಧ್ಯವಿಲ್ಲ ಎನ್ನುತ್ತಾಳೆ. ಆದರೆ ದೈಹಿಕ ಕರೆಗೆ ಓಗೋಡೋದು ಸರಿಯೇ, ತಪ್ಪೇ. ಕಣ್ಣಿಗೆ ಕಾಣದ ತಪ್ಪುಗಳನ್ನು ಹೆಣ್ಣಿನ ಮೇಲೆ ಹೊರಿಸಲಾಗುತ್ತದೆ. ಈ ಕಾದಂಬರಿಯಲ್ಲಿ ಗೌರಿಯ ನಡೆ ಏನಾದರೂ ಅನ್ನಿಸಬಹುದು. ಓದುವವರು ನಿರ್ಧಾರಕ್ಕೆ ಬರಬೇಕು ಎಂದರು.ಹೆಣ್ಣಿಗೆ ಅವಳ ಸಂಸಾರ ಹಾಗೂ ಮತ್ತೊಬ್ಬರ ಸಂಸಾರದ ಹೊಣೆಯನ್ನೂ ಹೇಳಿ ಗಂಡಸರನ್ನು ಎಲ್ಲಾ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗುತ್ತದೆ. ಸುರೇಶ್ವಿವಾಹಿತ, ಆದರೆ ಗೌರಿ ಒಂಟಿ. ಇಲ್ಲಿ ಯೋಚಿಸಬೇಕಿದ್ದು ಯಾರು? ಎಂದು ಅವರು ಪ್ರಶ್ನಿಸಿದರು. ಗಂಡಸರ ಮೇಲೆ ಯಾವುದೇ ಜವಾಬ್ದಾರಿ ಹಾಕದೆ ಅನ್ಯಾಯ ಮಾಡುತ್ತಿದ್ದೇವೆ ಎಂದೆನಿಸುತ್ತದೆ ಎಂದರು.
ಕಾದಂಬರಿಯಲ್ಲಿ ಮೂರು ಕುಟುಂಬಗಳಿವೆ. ಲಕ್ಷ್ಮಮ್ಮ ಗಲಾಟೆ ಮಾಡಿಯಾದರೂ ಗಂಡನ ಉಳಿಸಿಕೊಳ್ಳುತ್ತಾಳೆ. ಸುಮಾ ನಾಲ್ಕು ಗೋಡೆಗಳ ನಡುವೆ ಸರಿಪಡಿಸಿಕೊಳ್ಳುವ ಮಹಿಳೆ. ಗೌರಿ ಪಾತ್ರ ದೈಹಿಕ ಬಯಕೆ ಗಂಡಿನಷ್ಟೇ ಹೆಣ್ಣಿಗೂ ಸಹಜ ಎಂಬ ಮಾಹಿತಿ ನೀಡುತ್ತದೆ ಎಂದರು.ಕದಳಿ ಕಲ್ಯಾಣ ನಾಟಕ:
ಲೇಖಕಿ ಉಷಾ ನರಸಿಂಹನ್ ಅವರು ಕದಳಿ ಕಲ್ಯಾಣ ನಾಟಕ ಕುರಿತು ಪ್ರಶ್ನೆಗಳಿಗೆ ಉತ್ತರಿಸುತ್ತ, ಕುಜ ದೋಷ ಉಳ್ಳ ಹುಡುಗಿ ಬಾಳೆ ಮರದೊಂದಿಗೆ ಮೊದಲು ವಿವಾಹವಾಗಿ ನಂತರ ಆ ಮರವನ್ನು ಕತ್ತರಿಸಿ, ನಿಗದಿಯಾಗಿದ್ದ ಯುವಕನೊಡನೆ ವಿವಾಹ ಮಾಡುವ ಜಾನಪದದ ನಂಬಿಕೆಯನ್ನು ಒಳಗೊಂಡಿದೆ ಎಂದರು.ನಾಟಕಗಳನ್ನು ಬರೆಯುವಾಗ ಬರಹಗಾರರು ಕೆಲವು ಭ್ರಮೆಗಳನ್ನು ಉಂಡು, ಓದುಗರಿಗೂ ನೀಡಬೇಕಾಗುತ್ತದೆ. ಸಸ್ಯಗಳಿಗೆ ಜೀವ ಇದೆ, ಭಾವ, ಸಂಗೀತ, ನಲ್ಮುಡಿಗೆ ಸ್ಪಂದಿಸುತ್ತದೆ ಎಂದು ಹೇಳಲಾಗುತ್ತದೆ. ಈ ನಾಟಕದಲ್ಲಿ ಮರಗಳಿಗೂ ಜೀವ ಇದೆ ಎಂಬ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇನೆ. ಕರೆದೊಯ್ದಿದ್ದೀನಿ. ಭ್ರಮೆ ಎಂದು ತಿಳಿಯುವುದು ಅವರವರ ಸ್ವಾತಂತ್ರ್ಯ. ಇಂತಹ ಪ್ರಸಂಗ ಕನ್ನಡದ ನಾಟಕಗಳಲ್ಲಿ ಸಾಕಷ್ಟು ಬಂದಿದೆ. ಕದಳಿಯ ಜತೆ ಪ್ರೇಮ, ಕಾಮ ಬಾಂಧವ್ಯ ಆಗಿ ಆಕೆ ಫಲವತೆಯೂ ಆಗುತ್ತಾಳೆ ಎಂದು ಹೇಳಿದ್ದೇನೆ. ಗಂಡು ಮಗು ಜೊತೆಗೆ ಬಾಳೆ ಗಡ್ಡೆಯೂ ಉದರದಲ್ಲಿರುತ್ತದೆ. ಬಾಳೆ ಜೊತೆ ಸಂಕರ ಆಗಿರುತ್ತದೆ ಎಂದರು.
ಲೈಂಗಿಕ ಸಂಪರ್ಕ ಬೇರೊಂದು ಅಸ್ಮಿತೆಯಾಗಿದೆ ಎಂದು ತಿಳಿದು ವಿಷಮ ಸಂಕರವನ್ನು ಸ್ವೀಕರಿಸಿದ್ದಾಳೆ. ನಿಜವಾಗಿ ಆಕೆ ಬಾಳೆಯೊಂದಿಗಿನ ಸಂಬಂಧವನ್ನು ಅಂಗೀಕರಿಸಿರುತ್ತಾಳೆ. ಮಂಗಳೆ ಮತ್ತೊಂದು ಮದುವೆಯನ್ನು ಒಪ್ಪಿಕೊಂಡು ಗೌಡರ ಮನೆ ಹಿರಿಯ ಸೊಸೆಯಾಗಿ ಬದುಕುತ್ತಾಳೆ. ಮೋಹಿಸಿದವರು, ಪ್ರೀತಿಸುವುದರನ್ನು ಮದುವೆಯಾಗಲು ಸಾಧ್ಯವೇ? ಮೊದಲ ಪ್ರೇಮದ ನೆನಪು ಇರಬಾರದು ಎಂದೇನಿಲ್ಲ. ಎಲ್ಲಾ ಪ್ರಯತ್ನಗಳ ಆಚೆ ವಿಧಿ ಲಿಖಿತ ಎಂದಿರುತ್ತದೆ. ಎಲ್ಲವನ್ನೂ ವಿಧಿ ಮೇಲೆ ಹೇಳುತ್ತೇವೆ. ಈ ನಾಟಕದಲ್ಲಿಯೂ ಆಕೆಯ ಗಂಡ ಮೃತಪಟ್ಟಿದ್ದನ್ನು ವಿಧಿಯ ಮೇಲೆ ಹಾಕುತ್ತೇನೆ ಎಂದರು.ಬಳಿಕ ವಸುಮತಿ ಉಡುಪ ಅವರ ಪ್ರಬಂಧಗಳ ಸಂಕಲನ ಕುರಿತು ಸಂವಾದ ನಡೆಯಿತು. ಈ ವೇಳೆ ಮಾತನಾಡಿದ ಅವರು, ವಿಷಯದ ಹಂಗಿಲ್ಲದ ಸಾಹಿತ್ಯದ ಪ್ರಕಾರ ಪ್ರಬಂಧವಿದು. ಗಂಭೀರವಲ್ಲದ ಕಾರಣ ಸುಲಲಿತ ಪ್ರಬಂಧ ಎನ್ನಲಾಗಿದೆ. ಕಾವ್ಯ- ಕುಂಚ- ಚಿತ್ರ ಪ್ರಬಂಧದಲ್ಲಿ ಸ್ವಗತ ಏಕೆ? ಅದರ ಬಾಯಲ್ಲೇ ಹೇಳಿಸಿದರೆ ಮನಸ್ಸಿಗೆ ತಟ್ಟುತ್ತದೆ ಎನಿಸಿತು. ಪ್ರಬಂಧ ಪ್ರಕಾರದಲ್ಲಿ ಇದು ಒಂದು ಹೊಸ ಪ್ರಯೋಗ ಎಂದರು.
ಸಾವಿನ ಮನೆ ಪ್ರಬಂಧ ವಾಸ್ತವ ನೆಲೆಗಟ್ಟಿನಲ್ಲಿ ರಚನೆ ಮಾಡುವಂತದ್ದು, ಕಲ್ಪನೆ ಸೇರ್ಪಡೆ ಮಾಡಲು ಸಾಧ್ಯವಿಲ್ಲ. ನಗೆ ಬರಹ, ಪ್ರಬಂಧಕ್ಕೆ ಮಿತಿಯಾಗಿ ಬರೆಯಬೇಕಾಗುತ್ತದೆ. ಸಣ್ಣಕತೆ, ಪ್ರಬಂಧ, ಕಾದಂಬರಿ ಮಾಡಬಹುದೇ ಎನ್ನುವುದನ್ನು ವಸ್ತುವೇ ತಿಳಿಸಿಕೊಡುತ್ತದೆ ಎಂದು ಅವರು ಹೇಳಿದರು. ಲೇಖಕಿ ಬಿ.ಆರ್. ನಾಗರತ್ನ ಸಂವಾದ ನಡೆಸಿಕೊಟ್ಟರು.