ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನವೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ಮತ್ತೊಮ್ಮೆ ಎಸ್‌.ವಿ. ಸಂಕನೂರ ಹೆಸರನ್ನು ಅಖೈರುಗೊಳಿಸಿದೆ. ಈ ಮೂಲಕ ಬಿಜೆಪಿಯ ಹಾಲಿ ಸದಸ್ಯ ಸಂಕನೂರು-ಕಾಂಗ್ರೆಸ್‌ನ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೆಸರು ಅಂತಿಮವಾಗಿದ್ದು, ಅಖಾಡ ಸಿದ್ಧವಾಗಿದೆ.

ಪರಿಷತ್‌ ಟಿಕೆಟ್‌ ಪಡೆಯಲು ಬಿಜೆಪಿಯ ಸಾಕಷ್ಟು ನಾಯಕರು ಪ್ರಯತ್ನಿಸಿದ್ದರೂ ಸಂಕನೂರು ಅವರಿಗೆ ವರಿಷ್ಠರು ಮಣೆ ಹಾಕಿದ್ದು ಇದು ಇವರಿಗೆ ಮೂರನೇ ಚುನಾವಣೆಯಾಗಿದೆ.

ಭಾರೀ ಲಾಬಿ:


ಈ ಬಾರಿ ಸಂಕನೂರಗೆ ಟಿಕೆಟ್‌ ನೀಡುವುದಿಲ್ಲ ಎಂದು ಹಲವು ನಾಯಕರು ಅಂದುಕೊಂಡಿದ್ದರು. ಹೀಗಾಗಿ ಹಿರಿಯ ಮುಖಂಡರಾದ ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ರಾಜಣ್ಣ ಕೊರವಿ, ಬಸವರಾಜ ದಂಡಿನ, ವಸಂತ ಹೊರಟ್ಟಿ, ಸುಭಾಸಸಿಂಗ್‌ ಜಮಾದಾರ, ಕಿರಣ ಉಪ್ಪಾರ, ವೀರೇಶ ಸಂಗಳದ ಸೇರಿದಂತೆ 12ಕ್ಕೂ ಹೆಚ್ಚು ಟಿಕೆಟ್‌ ಆಕಾಂಕ್ಷಿಗಳು ಪ್ರಯತ್ನಿಸಿದ್ದರು.

ಆದರೆ, ಇವರೆಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಬಿಜೆಪಿ ವರಿಷ್ಠರು ಸಂಕನೂರಗೆ ಟಿಕೆಟ್‌ ಘೋಷಿಸುವ ಮೂಲಕ ಟಿಕೆಟ್‌ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಇದರಲ್ಲಿ ಕೆಲವರು ಬಂಡಾಯ ಏಳುವ ಸಾಧ್ಯತೆ ಇದ್ದು ಇವರನ್ನು ಸಮಾಧಾನಪಡಿಸುವುದು ಸಂಕನೂರಗೆ ದೊಡ್ಡ ಸವಾಲು ಆಗಬಹುದು.

ಬಿಜೆಪಿಮಯ:

ಪಶ್ಚಿಮ ಪದವೀಧರ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ತೆಕ್ಕೆಯಲ್ಲಿ ಇತ್ತು. ಮೊದಲ ಮೂರು ಚುನಾವಣೆಯಲ್ಲಿ ವೈ.ಎಸ್‌. ಪಾಟೀಲ, 1984ರಲ್ಲಿ ಎಚ್‌.ಕೆ. ಪಾಟೀಲ ಗೆಲುವು ಸಾಧಿಸುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ 1990, 1996, 2002..ಹೀಗೆ ನಾಲ್ಕು ಬಾರಿ ಗೆಲವು ಸಾಧಿಸಿದ್ದರು. ಹೀಗಾಗಿ 7 ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿತ್ತು. ಬಳಿಕ 2008ರಲ್ಲಿ ಬಿಜೆಪಿ ತೆಕ್ಕೆಗೆ ಜಾರಿತು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಕೆ. ಪಾಟೀಲ ವಿರುದ್ಧ ಬಿಜೆಪಿಯ ಮೋಹನ ಲಿಂಬಿಕಾಯಿ ಗೆಲುವಿನ ನಗೆ ಬೀರಿದ್ದರು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಲಿಂಬಿಕಾಯಿ 2013ರಲ್ಲಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕೆಜಿಪಿ ಸೇರಿದ್ದರು. ಅದಾದ ಬಳಿಕ 2014, 2020ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಕನೂರ ಗೆಲವು ಸಾಧಿಸಿದರು.

ಮತದಾರರೆಷ್ಟು?

ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ ಹೀಗೆ ನಾಲ್ಕು ಜಿಲ್ಲೆಗಳ ಪದವೀಧರರು ಮತದಾರರಾಗಿದ್ದಾರೆ. ಈ ಕ್ಷೇತ್ರವೂ ಬರೋಬ್ಬರಿ 23 ವಿಧಾನಸಭಾ ಕ್ಷೇತ್ರ ಒಳಗೊಂಡಿದ್ದು ಈ ಪೈಕಿ 17ರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, 6 ಬಿಜೆಪಿ ಶಾಸಕರಿದ್ದಾರೆ. ಇನ್ನು ಮೂವರು ಎಂಎಲ್‌ಸಿ ಪೈಕಿ ಇಬ್ಬರು ಬಿಜೆಪಿಗರಿದ್ದರೆ, ಒಬ್ಬರು ಕಾಂಗ್ರೆಸ್‌ನವರು. ಗದಗ ಜಿಲ್ಲೆಯಲ್ಲಿ 19643, ಧಾರವಾಡ 30907, ಹಾವೇರಿ 22161, ಉತ್ತರ ಕನ್ನಡ 15376 ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 88087 ಮತದಾರರಿದ್ದಾರೆ. ಇದರಲ್ಲಿ 51599 ಪುರುಷರಿದ್ದರೆ, 36488 ಮಹಿಳಾ ಮತದಾರರಿದ್ದಾರೆ. ಇದು ಸದ್ಯದ ಪರಿಸ್ಥಿತಿ. ಇನ್ನು ಮತದಾರರ ಎನ್‌ರೋಲ್‌ ನಡೆಯಲಿದ್ದು, ಮತದಾರರ ಸಂಖ್ಯೆ 1 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ.

ಪ್ರತಿ ಚುನಾವಣೆಗೂ ಹದಿನೈದು ದಿನವಿರುವಾಗ ಅಭ್ಯರ್ಥಿಗಳನ್ನು ಅಗೈರು ಮಾಡುತ್ತಿದ್ದ ಪಕ್ಷಗಳು ಇದೀಗ ಏಳೆಂಟು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಘೋಷಿಸಿದ್ದು ಅಖಾಡ ರಂಗೇರುವಂತೆ ಮಾಡಿದೆ. ಎರಡು ಪಕ್ಷದಲ್ಲಿ ಟಿಕೆಟ್‌ ವಂಚಿತರು ಅಸಮಾಧಾನಗೊಂಡಿದ್ದು ಯಾವ ಪಕ್ಷ ಲಾಭ, ನಷ್ಟವಾಗಲಿದೆ ಎಂಬುದನ್ನು ಕಾಯ್ದೆ ನೋಡಬೇಕಿದೆ.