ಚಿಕ್ಕಮಗಳೂರುಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಅಧಿಸೂಚನೆಗೆ ಉಪಗ್ರಹ ಆಧಾರಿತ ಚಿತ್ರಣವನ್ನಷ್ಟೇ ಅವಲಂಬಿಸದೆ, ಸ್ಥಳೀಯ ವಾಸ್ತವ ಪರಿಸ್ಥಿತಿ ಆಧರಿಸಿ ಗ್ರೌಂಡ್ ಸರ್ವೇ ನಡೆಸಬೇಕು ಎಂದು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಝ ಆಲಂ ಶರೀಫ್ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಅಧಿಸೂಚನೆಗೆ ಉಪಗ್ರಹ ಆಧಾರಿತ ಚಿತ್ರಣವನ್ನಷ್ಟೇ ಅವಲಂಬಿಸದೆ, ಸ್ಥಳೀಯ ವಾಸ್ತವ ಪರಿಸ್ಥಿತಿ ಆಧರಿಸಿ ಗ್ರೌಂಡ್ ಸರ್ವೇ ನಡೆಸಬೇಕು ಎಂದು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಝ ಆಲಂ ಶರೀಫ್ ಆಗ್ರಹಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಸಂರಕ್ಷಣೆ ಹಾಗೂ ಜನರ ಜೀವನೋಪಾಯದ ನಡುವೆ ಸಮತೋಲನ ಸಾಧಿಸಲು ರಾಜ್ಯಕ್ಕೆ ಪ್ರತ್ಯೇಕ ಪಶ್ಚಿಮ ಘಟ್ಟ ನೀತಿ ರೂಪಿಸುವುದು ಮತ್ತು ಕರ್ನಾಟಕ ಕಾರ್ಬನ್ ಕ್ರೆಡಿಟ್ ಕಾರ್ಪೊರೇಷನ್ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾಪಿಸಲಾಗಿದೆ ಎಂದರು.ಕಸ್ತೂರಿರಂಗನ್ ವರದಿ ಆಧಾರದ ಮೇಲೆ ಶೇ.37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲಾಗಿದೆ. 15 ವರ್ಷಗಳ ಹಿಂದೆ ಉಪಗ್ರಹ ಚಿತ್ರಣದ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಹಳ್ಳಿಗಳು, ರೈತರ ಜಮೀನುಗಳು ಹಾಗೂ ಕಾಫಿ ತೋಟಗಳು ಹಸಿರು ಹೊದಿಕೆಯಾಗಿ ಕಾಣಿಸಿಕೊಂಡಿರುವುದರಿಂದ ಅವುಗಳೂ ಇಎಸ್‌ಎ ವ್ಯಾಪ್ತಿಗೆ ಸೇರ್ಪಡೆ ಯಾಗಿವೆ. ಹೀಗಾಗಿ ಇಂದಿನ ಕ್ಯಾಡಸ್ಟ್ರಲ್ ಮ್ಯಾಪಿಂಗ್ ಹಾಗೂ ಲೈಡಾರ್ ತಂತ್ರಜ್ಞಾನ ಬಳಸಿ, ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಪಾರದರ್ಶಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.ಕಾಫಿ ಬೆಳೆಗಾರರು ಹಾಗೂ ರೈತರ ಹಸಿರು ಸಂರಕ್ಷಣೆಗೆ ಆರ್ಥಿಕ ಉತ್ತೇಜನ ನೀಡಲು ಕಾರ್ಬನ್ ಕ್ರೆಡಿಟ್ ನಿಗಮ ಸ್ಥಾಪನೆಗೆ ಸುದೀರ್ಘ ವರದಿ ಸಲ್ಲಿಸಲಾಗಿದೆ. ಇಂಡಿಯನ್ ಕಾರ್ಬನ್ ಮಾರ್ಕೆಟ್ ಮೂಲಕ ಕ್ರೆಡಿಟ್ ಮಾರಾಟ ಮಾಡಿ, ಆದಾಯದ ಬಹು ಪಾಲನ್ನು ಕೃಷಿಕರು ಹಾಗೂ ಬೆಳೆಗಾರರಿಗೆ ನೀಡುವ ಉದ್ದೇಶವಿದೆ. ಉಳಿದ ಮೊತ್ತವನ್ನು ಮೂಲಸೌಕರ್ಯ ಮತ್ತು ರಸ್ತೆ ಅಭಿವೃದ್ಧಿಗೆ ಬಳಸುವ ಪ್ರಸ್ತಾಪವಿದೆ ಎಂದರು.ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ಗ್ರೀನ್ ಬಾಂಡ್ ಬಿಡುಗಡೆ ಹಾಗೂ ನದಿಗಳ ಆರೋಗ್ಯ, ಗುಡ್ಡ ಕುಸಿತ ತಡೆಗೆ ವಿಶೇಷ ನಿಧಿ ಮೀಸಲಿಡುವಂತೆ ಶಿಫಾರಸು ಮಾಡಲಾಗಿದೆ. ಕೇವಲ ನಿಷೇಧದಿಂದ ಸಂರಕ್ಷಣೆ ಸಾಧ್ಯವಿಲ್ಲ. ಸಂರಕ್ಷಣೆ ಮತ್ತು ಮೂಲ ಸೌಕರ್ಯಗಳ ನಡುವೆ ಸಮತೋಲನ ಸಾಧಿಸುವ ನೀತಿ ಅಗತ್ಯ ಎಂದು ಹೇಳಿದರು.ಬೆಳಗಾವಿ ಅಧಿವೇಶನದಲ್ಲಿ ಪಶ್ಚಿಮ ಘಟ್ಟದ ಕುರಿತು ವಿಶೇಷ ಚರ್ಚೆ ನಡೆಯಲಿದ್ದು, ಬಳಿಕ ವ್ಯಾಪ್ತಿಯ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಳೀಯರ ಕುಂದುಕೊರತೆ ಆಲಿಸಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಐಐಎಸ್‌ಸಿ ವಿಶೇಷ ಸಲಹೆಗಾರ ನಯೀಮುಲ್ಲಾ ಎ.ಆರ್., ಕಾನೂನು ಸಲಹೆಗಾರ ಮೃತ್ಯುಂಜಯ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಉಪಸ್ಥಿತರಿದ್ದರು.