ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಏನ್ ಬಿಸಲೈತ್ರಿ, ನೆತ್ತಿ ಸುಡುತೈತಿ ನೋಡ್ರೀ. ಮನ್ಯಾಗಿಂದ್ ಹೊರಗ ಕಾಲ ಇಡಾಕ್ ಅಂಜಿಕಿ ಬರತ್ತೈತಿ. ಇಂಥಾ ಬಿಸಲ್ ನಾವ್ ನೋಡೇ ಇರಲಿಲ್ಲರೀ...!ಇಂತಹ ಮಾತು ಕಳೆದೊಂದು ತಿಂಗಳಿಂದ ನಗರದ ಜನತೆಯಿಂದ ಕೇಳಿ ಬರುತ್ತಿದೆ. ಜತೆಗೆ ಹೀಟ್ ಸ್ಟ್ರೋಕ್ ಭಯವು ಜನರಲ್ಲಿ ಆವರಿಸಿದ್ದು, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಉಸಿರಾಟ ತೊಂದರೆ ಇರುವವರು ಬಿಸಿಲಿನ ಭಯಕ್ಕೆ ಮನೆಯಿಂದ ಆಚೆ ಬರುತ್ತಿಲ್ಲ.
ಮನೆಯೊಳಗೆ ಬಂಧಿ:ತಾಪಮಾನ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿಯೇ ಸಾಗುತ್ತಿದೆ. ಬೆಳಗ್ಗೆ 8 ಗಂಟೆ ಆಗುತ್ತಿದ್ದಂತೆ ಸೂರ್ಯ ಬೆಂಕಿಯ ಉಂಡೆ ಉಗುಳಲು ಶುರು ಮಾಡುತ್ತಾನೆ. ಮಧ್ಯಾಹ್ನ 12 ಗಂಟೆ ಆಗುತ್ತಿದ್ದೆ 38 ಡಿಗ್ರಿ ಸೆಲಿಯಸ್ಸ್ ದಾಟುತ್ತಿದೆ. ಹೀಗಾಗಿ ಜನರು ಅಷ್ಟರೊಳಗೆ ಕಚೇರಿ, ಮಾರುಕಟ್ಟೆಯಲ್ಲಿ ತಮ್ಮ ಕೆಲಸ ಮುಗಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಸಂಜೆ 6ರ ವರೆಗೆ ಮನೆಯಲ್ಲಿಯೇ ಬಂದಿಯಾಗುತ್ತಿದ್ದಾರೆ. ಹೊರಗಡೆ ಬಂದರೆ ಬಿಸಿಲ ಝಳ, ಒಳಗಡೆ ಇದ್ದರೂ ಫ್ಯಾನ್ ಝಳದಿಂದ ಬಸವಳಿಯತ್ತಿದ್ದಾರೆ.
ರಸ್ತೆಗಳು ಖಾಲಿ ಖಾಲಿ:
ಮಧ್ಯಾಹ್ನ 12ರ ಬಳಿಕ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಟ್ರಾಫಿಕ್ ಕಿರಿಕಿರಿ, ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಸುಡುಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ಬೇಡ ಎಂದು ಜನರು ಸಾಮೂಹಿಕ ಸಾರಿಗೆ ಅವಲಂಬಿಸುತ್ತಿದ್ದಾರೆ. ಹೀಗಾಗಿ ರಸ್ತೆಗಳು ಖಾಲಿಖಾಲಿಯಾಗುತ್ತವೆ. ಬೆಳಗ್ಗೆ 11 ಗಂಟೆ, ಸಂಜೆ 5 ಗಂಟೆ ಬಳಿಕ ಮತ್ತೆ ವಾಹನಗಳು ರಸ್ತೆಗಿಳಿಯುತ್ತಿವೆ.ಹಣ್ಣುಗಳು ದುಬಾರಿ:
ಬಿಸಿಲಿನಿಂದ ದೇಹದಲ್ಲಿರುವ ನೀರಿನ ಪ್ರಮಾಣ ಬೆವರಿನ ಮೂಲಕ ಹೊರಬರುತ್ತಿದೆ. ಇದರಿಂದ ನಿರ್ಜಲೀಕರಣ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಬಾರದು ಎಂದು ಜನರು ಕಲ್ಲಂಗಡಿ, ಕರಬೂಜ, ಎಳನೀರು, ಕಬ್ಬಿನ ಹಾಲು ಸೇರಿದಂತೆ ಇನ್ನಿತರ ತಂಪು ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಭಾರೀ ಏರಿಕೆಯಾಗಿದೆ. ಎಳನೀರು ₹ 30ರಿಂದ ₹ 50ರ ವರೆಗೆ ಮಾರಾಟವಾದರೆ, ಕಲ್ಲಂಡಗಿ ಕೆಜಿಗೆ ₹ 25ರಿಂದ ₹ 30ಕ್ಕೆ ಮಾರಾಟವಾಗುತ್ತಿದೆ. 10 ಕೆಜಿ ಕರಬೂಜ ಹಣ್ಣಿಗೆ ಎಪಿಎಂಸಿಯಲ್ಲಿಯೇ ₹ 200 ಇದೆ.ಹಿಟ್‌ಸ್ಟ್ರೋಕ್ ಭಯ:
ಬಿಸಿಲಿನ ಶಾಖದ ಹೊಡೆತ ಮತ್ತು ನಿರ್ಜಲೀಕರಣ ಎನ್ನುವ ಎರಡು ಪ್ರಮುಖ ಸಮಸ್ಯೆಗಳು ಕಂಡುಬರುತ್ತವೆ. ಬಿಸಿಲಿನಲ್ಲಿ ತಾಪಮಾನ ಹೆಚ್ಚಿದಂತೆ ಇವುಗಳು ದೇಹದ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತವೆ. ಇನ್ನು ಕೆಲವರಿಗೆ ಚರ್ಮರೋಗದಂತಹ ಸಮಸ್ಯೆಗಳು ಸಹ ಕಂಡುಬರುತ್ತವೆ. ಚಿಕ್ಕಮಕ್ಕಳು ಹಾಗೂ ವೃದ್ಧರಿಗೆ ಉಸಿರಾಟ ಸಮಸ್ಯೆ, ಹೆಚ್ಚಿನ ಬಾಯಾರಿಕೆ, ಅಸ್ತಮಾ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ದೇಹದಲ್ಲಿ ಒಮ್ಮಿಂದೊಮ್ಮೆಲೆ ಉಷ್ಣತೆ ಹೆಚ್ಚಾಗಿ ಅಸ್ವಸ್ಥರಾಗುವುದು, ಪದೇ ಪದೇ ಜ್ವರ ಕಾಣಿಸಿಕೊಳ್ಳುವುದು. ಬೆವರು ಇರದೇ ಚರ್ಮವು ಬಿಸಿಯಾಗಿ ಮತ್ತು ಒಣಗುವುದು. ಮಾತಿನಲ್ಲಿ ತೊದಲುವಿಕೆ, ಇದ್ದಕ್ಕಿಂದ್ದಂತೆ ದೇಹದ ನಿಯಂತ್ರಣ ತಪ್ಪುವುದು. ಹೃದಯ ಬಡಿತ, ಉಸಿರಾಟದಲ್ಲಿ ಏರುಪೇರು ಕಂಡುಬರುತ್ತವೆ. ಹೀಗಾಗಿ ಜನರು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ.ಯಾವಾಗ ಎಷ್ಟೆಷ್ಟು ಬಿಸಿಲು?ಕಳೆದ ಒಂದು ತಿಂಗಳಿನಿಂದ ಹೋಲಿಕೆ ಮಾಡಿದರೆ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಸಾಗಿದೆ. ಇದರಿಂದ ಮುಕ್ತಿ ಪಡೆಯಬೇಕಾದರೆ ಇನ್ನೂ ಒಂದೂವರೆ ತಿಂಗಳು ಕಾಯುವುದು ಅನಿವಾರ್ಯ. ಏ. 1ರಿಂದ 8ರ ವರೆಗೆ 36 ಡಿಗ್ರಿ ಸೆಲ್ಸಿಯಸ್, ಏ. 9ರಂದು 38, 10ರಿಂದ 12ರ ವರೆಗೆ 39, 13ರಂದು 38, 14ರಂದು 39, 15ರಂದು ಗರಿಷ್ಠ 40, 16ಕ್ಕೆ 38, 17, 18ಕ್ಕೆ 39, 19ಕ್ಕೆ 38, 20ಕ್ಕೆ 39, 21ಕ್ಕೆ 38, 22 ಹಾಗೂ 23ರಂದು 37, 24ರಂದು 38 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಮುಂದಿನ ವಾರದೊಳಗೆ 40 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟುವ ಸಂಭವವಿದೆ. ರಣಬಿಸಿಲಿನಿಂದ ನಮ್ಮ ಬದುಕು ಸಹ ತರಕಾರಿಯಂತೆ ಬೆಂದು ಹೋಗುತ್ತಿದೆ. ದಿನವಿಡೀ ಬಿಸಿಲಿನಲ್ಲಿ ನಿಲ್ಲುವುದರಿಂದ ಆರೋಗ್ಯ ಸಮಸ್ಯೆಯೂ ಶುರುವಾಗಿದೆ. ತರಕಾರಿ ಮಾರಿಯೇ ಜೀವನ ನಡೆಸುವ ನಮಗೆ ಬಿಸಿಲು ಬರೆ ಎಳೆದಿದೆ.
ಮಲ್ಲಮ್ಮ ರ‍್ಯಾವಣಕಿ, ತರಕಾರಿ ಮಾರುವ ವೃದ್ಧೆ