ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ತೀವ್ರ ಕುತೂಹಲವನ್ನೂ ಮೂಡಿಸಿದ್ದಲ್ಲದೇ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸುವ ಮೂಲಕ ಮತ್ತಷ್ಟು ಭದ್ರವನ್ನಾಗಿಸಿಕೊಂಡಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸ್ಪರ್ಧೆಯಿಂದ ಬೆಳಗಾವಿ ಲೋಕಸಭೆ ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಎರಡು ಪಕ್ಷಗಳ ಅಭ್ಯರ್ಥಿ, ನಾಯಕರುಗಳು ಬಹಿರಂಗ ಸಮಾವೇಶ, ರೋಡ್ ಶೋ, ಮನೆ ಮನೆಗೆ ಭೇಟಿ ಸೇರಿ ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ರೀತಿಯ ಕಸರತ್ತು ನಡೆಸಿದ್ದರು. ಅಲ್ಲದೇ ಇಬ್ಬರೂ ಅಭ್ಯರ್ಥಿಗಳ ನಡುವೆ ಟಾಕ್‌ವಾರ್ ಕೂಡ ಜೋರಾಗಿತ್ತು. ಪುತ್ರ ಮೃಣಾಲ್ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ದರು. ಜಗದೀಶ ಶೆಟ್ಟರ್ ಬೆನ್ನಿಗೆ ಅಂಗಡಿ ಕುಟುಂಬ, ಮಾಜಿ ಸಚಿವ ರಮೇಶ ಜಾರಕಿಹೊಳಿ ನಿಂತಿದ್ದರು. ಇನ್ನು ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಪಾರುಪತ್ಯ ಮುಂದುವರಿಸಲು ಕಮಲ ಪಾಳೆಯ ತಂತ್ರ ರೂಪಿಸಿದಂತೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅತ್ಯಂತ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ಬಾಕ್ಸ್.....ಜಗದೀಶ ಶೆಟ್ಟರ್ ಗೆಲುವಿಗೆ ಕಾರಣಗಳು1. ಕಳೆದ ಎರಡು ಚುನಾವಣೆಗಳಂತೆ ಈ ಬಾರಿಯೂ ಬೆಳಗಾವಿಯಲ್ಲಿ ಮೋದಿ ಮತ್ತು ಹಿಂದುತ್ವದ ಅಲೆ ಜೋರಾಗಿತ್ತು. ಅಭ್ಯರ್ಥಿ ಯಾರೂ ಅಂತಾ ನೋಡದೇ, ನಾವು ಹಾಕುತ್ತಿರೋದು ಮೋದಿ ಮೂರನೇ ಬಾರಿ ಪ್ರಧಾನಿ ಆಗಲು ಎಂದು ಜನ ಮತ ಚಲಾಯಿಸಿದ್ದು, ಜಗದೀಶ ಶೆಟ್ಟರ್ ಗೆಲ್ಲಲು ಸುಲಭವಾಗಿದೆ.
2. ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿ ಸತತ ಗೆಲುವು ಸಾಧಿಸಿದೆ. ಹಾಗಾಗಿ, ಇದು ಬಿಜೆಪಿ ಭದ್ರಕೋಟೆ. ಬಿಜೆಪಿ ತಳಮಟ್ಟದಲ್ಲಿ ಗಟ್ಟಿಯಾಗಿದ್ದರಿಂದ ಬಿಜೆಪಿ ಭದ್ರಕೋಟೆ ಬೇಧಿಸಲು ಕಾಂಗ್ರೆಸ್ ವಿಫಲವಾಗರುವವ ಪರಿಣಾಮ ಬೆಳಗಾವಿಯನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯಲು ಕೇಸರಿ ಪಡೆ ಯಶಸ್ವಿಯಾಗಿದೆ.3. ಜಗದೀಶ ಶೆಟ್ಟರ್ ಸರಳ ಸಜ್ಜನಿಕೆ ರಾಜಕಾರಣಿ. ಮುಖ್ಯಮಂತ್ರಿ, ಸಚಿವರಾಗಿ, ಸ್ಪೀಕರ್ ಆಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಇಂಥ ಹಿರಿಯ ರಾಜಕಾರಣಿ ಬೆಳಗಾವಿಯಿಂದ ಸ್ಪರ್ಧಿಸಿರೋದು ಜಿಲ್ಲೆಗೆ ಅನುಕೂಲ ಆಗಲಿದೆ. ಅಲ್ಲದೇ ಶೆಟ್ಟರ್ ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆಂದು ಪ್ರಚಾರ ಮಾಡಿದ್ದು, ಗೆಲುವಿಗೆ ಸಹಕಾರಿಯಾಗಿದೆ.
4. ಪ್ರಧಾನಿ ಮೋದಿ ಜಗದೀಶ ಶೆಟ್ಟರ್ ಪರ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಿ, ಮತಭೇಟೆ ನಡೆಸಿದರು. ಮೋದಿ ಆಗಮಿಸಿದ್ದು ಶೆಟ್ಟರ್ ಗೆ ಆನೆಬಲ ತಂದು ಕೊಟ್ಟಿತು.5. ಬೆಳಗಾವಿಯಲ್ಲಿ ತನ್ನದೇ ವೋಟ್ ಬ್ಯಾಂಕ್ ಹೊಂದಿರುವ ಎಂಇಎಸ್ ಈ ಬಾರಿ ಡಮ್ಮಿ ಅಭ್ಯರ್ಥಿ ಕಣಕ್ಕಿಳಿಸಿತ್ತು. ಅಲ್ಲದೇ ಮರಾಠಾ ಸಮುದಾಯ ಸದಾಕಾಲ ಹಿಂದುತ್ವದ ಪರ ನಿಲ್ಲುತ್ತದೆ. ಜತೆಗೆ ಮಾಹಾರಷ್ಟ್ರ ಸಿಎಂ ಏಕನಾಥ ಶಿಂಧೆ ಪ್ರಚಾರದಿಂದ ಮರಾಠಾ ಸಮುದಾಯದ ಹೆಚ್ಚಿನ ಮರಾಠಾ ಮತಗಳು ಬಿಜೆಪಿಗೆ ವಾಲಿದ್ದು, ಶೆಟ್ಟರ್ ಗೆಲುವಿಗೆ ವರದಾನವಾಗಿದೆ.
-------ಬಾಕ್ಸ್..ಮೃಣಾಲ್ ಹೆಬ್ಬಾಳಕರ ಸೋಲಿಗೆ ಕಾರಣಗಳು1.ಹಲವು ಆಕಾಂಕ್ಷಿಗಳನ್ನು ಬಿಟ್ಟು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಪುತ್ರ ಎಂಬ ಕಾರಣಕ್ಕೆ ಟಿಕೆಟ್ ನೀಡಲಾಗಿತ್ತು. ಇದರಿಂದ ಸಹಜವಾಗಿ ಕೆರಳಿದ ಆಕಾಂಕ್ಷಿಗಳು ಹಾಗೂ ಸ್ಥಳೀಯ ನಾಯಕರು ಸಕ್ರಿಯವಾಗಿ ಮೃಣಾಲ್ ಹೆಬ್ಬಾಳಕರ ಪರ ಪ್ರಚಾರ ಮಾಡಲಿಲ್ಲ. ಜತೆಗೆ ಕೆಲವು ಕಾಟಚಾರಕ್ಕೆ ಎಂಬಂತೆ ಪ್ರಚಾರದಲ್ಲಿ ತೊಡಗಿ, ಪರೋಕ್ಷವಾಗಿ ಬಿಜೆಪಿಗೆ ಸಹಕಾರ ನೀಡಿರುವುದು.
2. ಮೃಣಾಲ್ ಹೆಬ್ಬಾಳಕರ ಎದುರಿಸಿದ್ದು ಮೊದಲ ಚುನಾವಣೆ. ತಾಯಿ ಪರ ಪ್ರಚಾರ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದು ಬಿಟ್ಟರೆ, ಹೇಳಿಕೊಳ್ಳುವಂಥ ಅನುಭವ ಇಲ್ಲ. ಸಂಸತ್ತಿನಲ್ಲಿ ಕಾನೂನು ಮಾಡಲು ಅನುಭವಿ ಸಂಸತ್ತ ಸದಸ್ಯರ ಅವಶ್ಯಕತೆ ಇದೆ ಎಂದು ಹೆಚ್ಚಿನ ಮತದಾರರು ಶೆಟ್ಟರ್‌ಗೆ ಮತ ಚಲಾಯಿಸಿದರು.3. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ ಜಾರಕಿಹೊಳಿ ಬದ್ಧ ವೈರಿಗಳು. ಒಂದು ವೇಳೆ ಮೃಣಾಲ್ ಗೆದ್ದು ಬಿಟ್ಟರೆ ಬೆಳಗಾವಿಯಲ್ಲಿ ತಮ್ಮ ಪ್ರಭಾವ ಕುಗ್ಗುತ್ತದೆ ಎಂಬ ಉದ್ದೇಶದಿಂದ ರಮೇಶ ಮತ್ತು ಬಾಲಚಂದ್ರ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡರು. ಶೆಟ್ಟರ್ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಹಾಗಾಗಿ, ಇದು ಮೃಣಾಲ್‌ಗೆ ಬಹಳ ದೊಡ್ಡ ಹೊಡೆತ ಕೊಟ್ಟಿತು.
4. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ತನ್ನದೇ ಕಾರ್ಯಕರ್ತರ ದಂಡೆ ಇದೆ. ಆದರೆ, ಕಾಂಗ್ರೆಸ್‌ಗೆ ಕಾರ್ಯಕರ್ತರ ಕೊರತೆ ಕಾಣಿಸಿಕೊಂಡಿತು. ಬೂತ್ ಮಟ್ಟದಲ್ಲಿ ಬಿಜೆಪಿ ಚನ್ನಾಗಿ ಕೆಲಸ ಮಾಡಿದ್ದರಿಂದ ಮೃಣಾಲ್‌ಗಿಂತ ಹೆಚ್ಚು ಮತಗಳು ಜಗದೀಶ ಶೆಟ್ಟರ್‌ಗೆ ಬರಲು ಸಾಧ್ಯವಾಯಿತು.5. ಒಂದು ಬಾರಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಬಂದಿದ್ದು ಬಿಟ್ಟರೆ, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬರಲೇ ಇಲ್ಲ. ಇದು ರಾಷ್ಟ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುವುದನ್ನು ನಿರ್ಧರಿಸುವ ಚುನಾವಣೆ. ಹಾಗಾಗಿ, ಇದು ಕೂಡ ಮೃಣಾಲ್ ಹಿನ್ನಡೆಗೆ ಕಾರಣವಾಯಿತು.
6. ಚುನಾವಣೆ ಪ್ರಚಾರದ ಸಮಯದಲ್ಲಿ ಪಂಚಸಾಲಿ ಸಮುದಾಯ ಎಂದು ಭಾಷಣ ಮಾಡಿದ್ದು, ಇನ್ನೂಳದ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲಿಂಗಾಯತ ಮತಗಳನ್ನು ತಮ್ಮತ್ತ ಸೆಳೆದುಕೊಂಡಷ್ಟು, ಅನ್ಯ ಸಮುದಾಯದ ಮತಗಳನ್ನು ಸೆಳೆದುಕೊಳ್ಳಲು ವಿಫಲವಾಗಿದೆ.