ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿಯದ್ದಲ್ಲ, ಮೇಕೆ ಮಾಂಸ: ಆಹಾರ ಇಲಾಖೆ ಸ್ಪಷ್ಟನೆ

| Published : Jul 30 2024, 01:31 AM IST / Updated: Jul 30 2024, 01:26 PM IST

ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿಯದ್ದಲ್ಲ, ಮೇಕೆ ಮಾಂಸ: ಆಹಾರ ಇಲಾಖೆ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸವೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

 ಬೆಂಗಳೂರು : ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸವೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಸರಬರಾಜಾಗಿದ್ದ 4500 ಕೇಜಿ ಮಾಂಸವು ಪ್ರಾಥಮಿಕ ವರದಿ ಪ್ರಕಾರ ರಾಜಸ್ಥಾನದ ಮೇಕೆಯ ಮಾಂಸವೆಂಬುದು ಗೊತ್ತಾಗಿದೆ. ಕೆಲವರು ಈ ಮಾಂಸವನ್ನು ನಾಯಿಯ ಮಾಂಸವೆಂದು ಆರೋಪಿಸಿದ್ದರಿಂದ ಪರೀಕ್ಷೆಗೆಂದು ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಅಂತಿಮ ವರದಿ ಕೆಲ ದಿನಗಳಲ್ಲಿ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ಕೂಡ 10ರಿಂದ 15 ಮಂದಿ ಮಾಂಸದ ಮಾರಾಟಗಾರರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಚೇರಿಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಮಾಂಸವನ್ನು ಎಲ್ಲಿಂದ, ಏಕಾಗಿ ಸರಬರಾಜು ಮಾಡಲಾಗಿತ್ತು ಎಂಬಿತ್ಯಾದಿ ವಿಚಾರಗಳ ಕುರಿತು ಅಧಿಕಾರಿಗಳು ಮಾರಾಟಗಾರದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಹಾಜರಾಗದ ಕೆಲ ವ್ಯಾಪಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈ ಸಂಬಂಧ ಯಾವುದೇ ಹೋಟೆಲ್‌ಗಳಿಗೆ ನೋಟಿಸ್‌ ನೀಡಿಲ್ಲ. ಮಾಂಸವು ಕಳಪೆ ಗುಣಮಟ್ಟದ್ದೇ ಎಂಬುದನ್ನೂ ಕೂಡ ಪರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ರಾಜಸ್ಥಾನದಿಂದ ಆಗಮಿಸಿದ್ದ ಜೈಪುರ- ಮೈಸೂರು ರೈಲಿನಲ್ಲಿ 120 ಪೆಟ್ಟಿಗೆಗಳಲ್ಲಿ ಸುಮಾರು 4500 ಕೇಜಿ ಮಾಂಸ ಸಾಗಣೆ ಮಾಡಲಾಗಿತ್ತು. ಉದ್ದ ಬಾಲವಿರುವ ಪ್ರಾಣಿಗಳ ಮಾಂಸ ಅನುಮಾನಕ್ಕೆ ಕಾರಣವಾಗಿತ್ತು. ಇದು ನಾಯಿ ಮಾಂಸ ಎಂದು ಕೆಲವರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದು ಮಾಂಸ ಪ್ರಿಯರಲ್ಲಿ ಆತಂಕ ಮೂಡಿಸಿತ್ತು. ಇದೀಗ ಮೇಕೆ ಮಾಂಸವೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ಮಾಂಸ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ಅಕ್ರಮ ಮಾಂಸ ಸಾಗಣೆ ಆರೋಪ:

ವ್ಯಾಪಾರಿಗಳಿಗೆ ಇಂದು ನೋಟಿಸ್-ಪೂರೈಕೆದಾರರು, ರಜಾಕ್‌ಗೂ ವಿಚಾರಣೆಗೆ ಬುಲಾವ್‌

ರಾಜಸ್ಥಾನದಿಂದ ನಗರಕ್ಕೆ ಅಕ್ರಮ ಮಾಂಸ ಸಾಗಣೆ ಆರೋಪ ಪ್ರಕರಣ ಸಂಬಂಧ ಮಾಂಸ ಪೂರೈಕೆದಾರರು ಹಾಗೂ ನಗರದ ಮಾಂಸ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಿರುವ ಕಾಟನ್‌ಪೇಟೆ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ನೋಟಿಸ್‌ ಜಾರಿಗೊಳಿಸಲಿದ್ದಾರೆ.

ರಾಜಸ್ಥಾನದಿಂದ ಬೆಂಗಳೂರಿಗೆ ಮಾಂಸದ ಬಾಕ್ಸ್‌ಗಳನ್ನು ರೈಲಿನಲ್ಲಿ ಪಾರ್ಸೆಲ್‌ ಕಳುಹಿಸಿದವರು ಹಾಗೂ ನಗರದಲ್ಲಿ ಯಾರ ಹೆಸರಿಗೆ ಆ ಪಾರ್ಸೆಲ್‌ ಬಂದಿದೆ ಎಂಬುದರ ಬಗ್ಗೆ ಪೊಲೀಸರು ರೈಲ್ವೆ ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ. ಈ ಮಾಹಿತಿ ಆಧರಿಸಿ ಮಾಂಸ ಪೂರೈಕೆದಾರರು ಹಾಗೂ ಮಾಂಸ ವ್ಯಾಪಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಿದ್ದಾರೆ. ಅಂತೆಯೇ ಮಾಂಸದ ಬಾಕ್ಸ್‌ಗಳು ತಮ್ಮ ಕಡೆಯವರದು ಎಂದು ರೈಲು ನಿಲ್ದಾಣದಲ್ಲಿ ವಾದಿಸಿದ್ದ ಅಬ್ದುಲ್‌ ರಜಾಕ್‌ಗೂ ಪೊಲೀಸರು ನೋಟಿಸ್‌ ಜಾರಿಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.ಖಾಸಗಿ ಕೋಲ್ಡ್‌ ಸ್ಟೋರೇಜ್‌ನಲ್ಲಿ ಮಾಂಸ

ಕಳೆದ ಶುಕ್ರವಾರ ಕೆಎಸ್‌ಆರ್‌ ರೈಲು ನಿಲ್ದಾಣದಲ್ಲಿ 4,500 ಕೆ.ಜಿ. ತೂಕದ ಮಾಂಸದ 90 ಬಾಕ್ಸ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಖಾಸಗಿ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇರಿಸಿದ್ದಾರೆ. ಈಗಾಗಲೇ ಪ್ರಯೋಗಾಲಯದ ವರದಿಯಲ್ಲಿ ರಾಜಸ್ಥಾನದಿಂದ ನಗರಕ್ಕೆ ಬಂದಿದ್ದ ಮಾಂಸ ಮೇಕೆಯದು ಎಂದು ಖಚಿತವಾಗಿದೆ. ನಾಯಿ ಮಾಂಸದ ಆರೋಪ ಸುಳ್ಳಾಗಿದೆ. ಆದರೆ, ಈ ಮಾಂಸದ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆಹಾರ ಇಲಾಖೆಯ ವರದಿಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.