ಸಾರಾಂಶ
ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮೇಲಿನ ಎಲ್ಲ ಮೊಕದ್ದಮೆಗಳನ್ನು ರದ್ದುಪಡಿಸಿ, ಬೇಷರತ್ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.
ದಾವಣಗೆರೆ: ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮೇಲಿನ ಎಲ್ಲ ಮೊಕದ್ದಮೆಗಳನ್ನು ರದ್ದುಪಡಿಸಿ, ಬೇಷರತ್ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತರರ ನೇತೃತ್ವದಲ್ಲಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ರಾಜ್ಯಪಾಲರು, ಸರ್ಕಾರಕ್ಕೆ ಮನವಿ ಅರ್ಪಿಸಿದರು.ಮುಖಂಡರು ಮಾತನಾಡಿ, ಬೆಳಗಾವಿ ಸುವರ್ಣ ಸೌಧದಲ್ಲಿ ಕಲಾಪದ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಕ್ಸಮರ ನಡೆದಿದೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ಭರದಲ್ಲಿ ಸಿ.ಟಿ.ರವಿ ಅವರನ್ನು ಕೊಲೆಗಾರ ಅಂದಿದ್ದಾರೆ. ಇದರಿಂದ ಕೋಪಗೊಂಡ ಸಿ.ಟಿ.ರವಿ ಹತಾಶೆ ಎಂಬುದಾಗಿ ಕನ್ನಡದಲ್ಲಿ ಹೇಳುವ ಬದಲು ಇಂಗ್ಲಿಷ್‌ನಲ್ಲಿ ಪ್ರಸ್ಟ್ರೇಟ್ ಎಂಬುದಾಗಿ ಹೇಳಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿಪ ಸದಸ್ಯರ ರವಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದು ಸಭ್ಯತೆಯಲ್ಲ. ಅದು ಯಾವ ಸಂಸ್ಕೃತಿ, ಸಂಸ್ಕಾರ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಅವರು ಎಂದಿಗೂ ಬಳಸದಿರುವ ಪದಗಳನ್ನು ಬಳಕೆ ಮಾಡಿದ್ದಾರೆಂಬ ಆರೋಪವೇ ಸುಳ್ಳು. ಸಂಘ ಪರಿವಾರದ ಹಿನ್ನೆಲೆಯ ಸಿ.ಟಿ.ರವಿ ಯಾವುದೇ ಕಾರಣಕ್ಕೂ ಅಂತಹ ಪದ ಬಳಸುವವರಲ್ಲ. ವಿಧಾನಸಭೆಯಲ್ಲೇ ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಕೂಗಿದವರ ಬಂಧನಕ್ಕೆ ಎಫ್‌ಎಸ್‌ಎಲ್ ವರದಿಗೆ ಕಾದಿದ್ದ ಕಾಂಗ್ರೆಸ್ ಸರ್ಕಾರ, ರವಿ ಮೇಲಿನ ಸುಳ್ಳು ಆರೋಪದ ಪ್ರಕರಣದಲ್ಲಿ ಅವಸರವಸರದಲ್ಲಿ ಬಂಧಿಸಿ, ಇಡೀ ರಾತ್ರಿ ಸುತ್ತಾಡಿಸಿದ್ದಾರೆ. ವಿಪ ಸದಸ್ಯ ಸಿ.ಟಿ.ರವಿ ಬಂಧನವೇ ಕಾನೂನಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.ವಿಪ ಸದಸ್ಯ ಸಿ.ಟಿ.ರವಿ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿರುವ ಸಚಿವೆ ಲಕ್ಷ್ಮೀ ಹೆಬ್ಬಾಳರ್ ಅವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಮತ್ತು ಆತನ ಚೇಲಾಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ರವಿ ಮೇಲಿನ ಕೇಸ್ ರದ್ದುಪಡಿಸಬೇಕು. ತಕ್ಷಣವೇ ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ರಾಷ್ಟ್ರಪತಿ, ರಾಜ್ಯಪಾಲರಿಗೆ ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಪಿ.ಸಿ.ಶ್ರೀನಿವಾಸ ಭಟ್, ರಾಜನಹಳ್ಳಿ ಶಿವಕುಮಾರ, ರಘುನಂದನ್, ಶ್ಯಾಮ ಮಾಯಕೊಂಡ, ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ಕೆ.ಎಂ.ವೀರೇಶ, ಆರ್.ಶಿವಾನಂದ, ಆರ್.ಎಲ್.ಶಿವಪ್ರಕಾಶ, ವೈ.ಮಲ್ಲೇಶ, ಎಚ್.ಪಿ.ವಿಶ್ವಾಸ, ಕಲ್ಲಪ್ಪ, ಹೆಬ್ಬಾಳ್ ಮಹೇಂದ್ರ, ಪ್ರವೀಣ ಜಾಧವ್, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಕೆಟಿಜೆ ನಗರ ಆನಂದ, ಲೋಕೇಶ, ನಿಂಗರಾಜ ರೆಡ್ಡಿ ಇತರರು ಇದ್ದರು.