ಸಾರಾಂಶ
ಕನ್ನಡವನ್ನು ಉಳಿಸಿ ಬೆಳೆಸುವ ತೊಟ್ಟಿಲುಗಳಾದ ಸರ್ಕಾರಿ ಶಾಲೆಗಳಲ್ಲೂ ಸರ್ಕಾರ ಆಂಗ್ಲ ಮಾಧ್ಯಮ ಭೋದನೆ ಆರಂಭಿಸುತ್ತಾ ಬರುತ್ತಿರುವುದರಿಂದ ಮುಂದಿನ 10 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಏನಾಗುತ್ತವೋ, ಕನ್ನಡ ಹೇಗೆ ಉಳಿದು ಬೆಳೆಯುತ್ತದೋ ಎನ್ನುವ ಆತಂಕ ಸೃಷ್ಟಿಯಾಗಿದೆ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡವನ್ನು ಉಳಿಸಿ ಬೆಳೆಸುವ ತೊಟ್ಟಿಲುಗಳಾದ ಸರ್ಕಾರಿ ಶಾಲೆಗಳಲ್ಲೂ ಸರ್ಕಾರ ಆಂಗ್ಲ ಮಾಧ್ಯಮ ಭೋದನೆ ಆರಂಭಿಸುತ್ತಾ ಬರುತ್ತಿರುವುದರಿಂದ ಮುಂದಿನ 10 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಏನಾಗುತ್ತವೋ, ಕನ್ನಡ ಹೇಗೆ ಉಳಿದು ಬೆಳೆಯುತ್ತದೋ ಎನ್ನುವ ಆತಂಕ ಸೃಷ್ಟಿಯಾಗಿದೆ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಹೇಳಿದ್ದಾರೆ.ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಾ ಬರುತ್ತಿರುವ ಸರ್ಕಾರದ ನಡೆಯಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ನಮ್ಮ ತಾಯ್ನುಡಿ ಉಳಿದು ಬೆಳೆದು ಹೆಮ್ಮರವಾಗಿ ಕನ್ನಡಿಗರಿಗೆ ನೆರಳಾಗಬೇಕಾದರೆ, ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಆದರೆ ಇವತ್ತು ಆ ಶಾಲೆಗಳ ಸ್ಥಿತಿ ಹೇಗಾಗಿದೆ ಎಂದರೆ, 6,400 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 50 ಅಥವಾ ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆ 23,342ಕ್ಕೆ ಏರಿಕೆಯಾಗಿದೆ. ಇನ್ನು ದಾಖಲಾತಿ ವಿಚಾರಕ್ಕೆ ಬಂದರೆ 46,473 ಸರ್ಕಾರಿ ಶಾಲೆಗಳಲ್ಲಿ 42,75,354 ಮಕ್ಕಳಿದ್ದಾರೆ(ಸರಾಸರಿ ಮಕ್ಕಳು -92). ಆದರೆ, ಕೇವಲ 16,299 ಖಾಸಗಿ ಶಾಲೆಗಳಲ್ಲಿ 46,74,481 ಮಕ್ಕಳು (ಸರಾಸರಿ ಮಕ್ಕಳ ಸಂಖ್ಯೆ-287) ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 43,133 ಶಿಕ್ಷಕ ಹುದ್ದೆಗಳು ಖಾಲಿ ಇದ್ದರೆ, ಪ್ರೌಢ ಶಾಲೆಗಳಲ್ಲಿ 10,168 ಹುದ್ದೆಗಳು ಖಾಲಿಯಾಗಿವೆ. ಇದಕ್ಕೆ ಪ್ರತಿಯಾಗಿ 40 ಸಾವಿರ ಅತಿಥಿ ಶಿಕ್ಷಕರನ್ನು ಸರ್ಕಾರ ನೇಮಿಸಿದೆ. 2028-29ರ ವೇಳೆಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 34,807 ಮಂದಿ, ಪ್ರೌಢ ಶಾಲೆಗಳಲ್ಲಿ 4,128 ಶಿಕ್ಷಕರು ನಿವೃತ್ತರಾಗಲಿದ್ದಾರೆ. ಪರಿಸ್ಥಿತಿ ಈ ರೀತಿ ಸಾಗುತ್ತಿರುವಾಗ ಮುಂದಿನ 10 ವರ್ಷಗಳಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಸರ್ಕಾರಿ ಕನ್ನಡ ಶಾಲೆಗಳು ಏನಾಗುತ್ತವೋ, ಕನ್ನಡ ಹೇಗೆ ಉಳಿದು ಬೆಳೆಯಬಹುದು ಎಂದು ಎಲ್ಲರೂ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮತ್ತೊಂದು ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಸರ್ಕಾರ ತನ್ನದೇ ಆಯ್ದ ಸರ್ಕಾರಿ ಮತ್ತು ಕೆಪಿಎಸ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆದು ಸರ್ಕಾರಿ ಕನ್ನಡ ಶಾಲೆಗಳಲ್ಲಿರುವ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೆಳೆಯುತ್ತಿದೆ. ಸರ್ಕಾರಿ ಕನ್ನಡ ಶಾಲೆಗಳು ತಮ್ಮ ಉಳಿವಿಗಾಗಿ ತಮ್ಮದೇ ಸರ್ಕಾರಿ ಆಂಗ್ಲ ಮಾಧ್ಯಮದ ಶಾಲೆಗಳ ವಿರುದ್ಧವೇ ಹೋರಾಡಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅರ್ಥಪೂರ್ಣ ರಾಜ್ಯೋತ್ಸವವಾದೀತು ಎಂದು ಅವರು ತಿಳಿಸಿದ್ದಾರೆ.