ಪಂಪನ ಕಾವ್ಯದಲ್ಲಿ ಕೃಷಿಯನ್ನೇ ನಂಬಿ ಬದುಕಿದವರ ಹಾಗೂ ಕೃಷಿಯಿಲ್ಲದೇ ಬದುಕಿಲ್ಲ ಎನ್ನುವ ಹಾಗೂ ಭತ್ತ, ಜೋಳ ಇತ್ಯಾದಿ ದ್ವೀದಳ ದಾನ್ಯಗಳ ಒಂದು ಲಕ್ಷಕ್ಕಿಂತಲೂ ಹೆಚ್ಚು ತಳಿಗಳಿದ್ದವು ಎನ್ನುವ ಉಲ್ಲೇಖವಿರುವುದನ್ನು ಕಾಣುತ್ತೇವೆ.
ಧಾರವಾಡ:
ವೈಯಕ್ತಿಕ ಹಾಗೂ ಕೌಟುಂಬಿಕ ನೆಲೆಯಲ್ಲಿ ಸಾಧಿಸಬೇಕಾಗುವುದೇ ಸುಸ್ಥಿರತೆ. ಮನುಷ್ಯನ ಮನಸ್ಸಿನೊಳಗೆ ಕೃಷಿಯನ್ನು ಆಳವಾಗಿ, ಭದ್ರವಾಗಿ ಇಟ್ಟುಕೊಳ್ಳುವುದೇ ಸುಸ್ಥಿರ ಕೃಷಿ ಎಂದು ಸಹಾಯಕ ಕೃಷಿ ನಿರ್ದೇಶಕ, ಸಾಹಿತಿ ಡಾ. ಚನ್ನಪ್ಪ ಅಂಗಡಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಕೃಷಿ ಹಾಗೂ ಪರಿಸರ ಮಂಟಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸುಸ್ಥಿರ ಕೃಷಿ ಮತ್ತು ಪರಿಸರ ಕಾಳಜಿ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಪಂಪನ ಕಾವ್ಯದಲ್ಲಿ ಕೃಷಿಯನ್ನೇ ನಂಬಿ ಬದುಕಿದವರ ಹಾಗೂ ಕೃಷಿಯಿಲ್ಲದೇ ಬದುಕಿಲ್ಲ ಎನ್ನುವ ಹಾಗೂ ಭತ್ತ, ಜೋಳ ಇತ್ಯಾದಿ ದ್ವೀದಳ ದಾನ್ಯಗಳ ಒಂದು ಲಕ್ಷಕ್ಕಿಂತಲೂ ಹೆಚ್ಚು ತಳಿಗಳಿದ್ದವು ಎನ್ನುವ ಉಲ್ಲೇಖವಿರುವುದನ್ನು ಕಾಣುತ್ತೇವೆ. ಈಗ ನಾವು ಸಾಂಪ್ರದಾಯಿಕ ಕೃಷಿ ಪದ್ಧತಿ ಬಿಟ್ಟು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಅಡಕೆ, ಸೋಯಾ, ಗೋವಿನಜೋಳ ಮುಂತಾದ ಏಕ ಬೆಳೆ ಬೆಳೆಯುತ್ತ ಹಣದ ಹಾಗೂ ಅಪಾಯಕಾರಿ ಕೃಷಿ ಪದ್ಧತಿಯ ಬೆನ್ನು ಹತ್ತಿದ್ದೇವೆ, ಇದು ಸುಸ್ಥಿರತೆಗೆ ಧಕ್ಕೆ ತರುವ ಅಸ್ಥಿರತೆಯ ಸಂಗತಿಯಾಗಿದೆ ಎಂದರು.
ನಾವು ತಿನ್ನುವ ಆಹಾರ ಪೋಷಕಾಂಶರಹಿತವಾಗಿದೆ. ನಾವು ವಾಸಿಸುವ ಪ್ರದೇಶದ ಸುತ್ತಮುತ್ತಲು ಬೆಳೆಯುವ ಹಣ್ಣು, ಹಂಪಲು, ತರಕಾರಿ ಮುಂತಾದ ಸಾಂಪ್ರದಾಯಿಕ ಆಹಾರವನ್ನೇ ಸೇವಿಸಬೇಕು. ಇದರಲ್ಲಿ ಹೆಚ್ಚು ಪೌಷ್ಟಿಕಾಂಶಗಳು ದೊರೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನಾವು ಉತ್ತರ ಭಾರತದಲ್ಲಿ ಬೆಳೆಯುವ, ರಾಸಾಯನಿಕ ದ್ರಾವಣದಲ್ಲಿ ಎದ್ದಿ ಶೇಖರಿಸಿ ಮಾರುವ ಹಣ್ಣು, ಹಂಪಲುಗಳಿಗೆ ಮಾರು ಹೋಗುತ್ತಿದ್ದೇವೆ. ನಮ್ಮ ಜೀವನ ಶೈಲಿ ಬದಲಾಗಿದೆ. ಅನಾರೋಗ್ಯಕರ ಜೀವನ ಶೈಲಿಯತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ. ನಮ್ಮ ಮೂಲ ತಳಿಗಳಾದ ಜೋಳ, ಸಿರಿಧಾನ್ಯ, ಅವಿಭಕ್ತ ಕುಟುಂಬ, ದನಕರುಗಳ ರಾಶಿಯ ದೊಡ್ಡ ಜಾಲ ಅದು ಸುಸ್ಥಿರ ಕೃಷಿ ಸಂಕೇತ. ಆದರೆ, ಸದ್ಯ ಅಸ್ಥಿರತೆಯತ್ತ ನಾವು ಸಾಗುತ್ತಿದ್ದೇವೆ ಎಂದು ಡಾ. ಚನ್ನಪ್ಪ ಅಂಗಡಿ ಕಳವಳ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಪರಿಸರವಾದಿ ಪಿ.ವಿ. ಹಿರೇಮಠ, ಪರಿಸರ ನಾಶದಿಂದ ನೈಸರ್ಗಿಕ ವಿಕೋಪ, ತಾಪಮಾನದ ಹೆಚ್ಚಳ, ಹಿಮಗಡ್ಡೆಗಳ ಕರಗುವಿಕೆಯಿಂದ ಜಲಸ್ಫೋಟ ಸೇರಿದಂತೆ ಮುಂತಾದ ಕಾರಣಗಳಿಂದ ಪ್ರತಿ ವರ್ಷ ಭಾರತದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಪರಿಸರದಲ್ಲಿ ಕೀಟ, ಪಕ್ಷಿ, ಕಾಡುಪ್ರಾಣಿಗಳು ಇಲ್ಲದೇ ಹೋದರೆ ಕೃಷಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಪರಿಸರ ನಾಶ ಮಾಡದೆ, ಸಂರಕ್ಷಣೆಗೆ ಕೈಜೋಡಿಸಬೇಕೆಂದರು.
ನಂತರ ಸಭಿಕರೊಂದಿಗೆ ಸಂವಾದ ಜರುಗಿತು. ಉದ್ಯಮಿ ಶಶಿಭೂಷಣ ದೊಡವಾಡ ವೇದಿಕೆಯಲ್ಲಿದ್ದರು. ಜಯಶ್ರೀ ಗವಳಿ ಸ್ವಾಗತಿಸಿದರು. ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಮತ್ತು ಪರಿಸರ ಮಂಟಪದ ಸಂಚಾಲಕ ಗುರು ಹಿರೇಮಠ ನಿರೂಪಿಸಿದರು. ಸಿದ್ದು ಕಂಬಾರ ವಂದಿಸಿದರು.