ಕ್ಷೇತ್ರಕ್ಕೆ ಬಿಜೆಪಿಯವರ ಕೊಡುಗೆ ಏನು?: ತುಕಾರಾಂ ಪ್ರಶ್ನೆ

| Published : Apr 17 2024, 01:28 AM IST

ಕ್ಷೇತ್ರಕ್ಕೆ ಬಿಜೆಪಿಯವರ ಕೊಡುಗೆ ಏನು?: ತುಕಾರಾಂ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿ.ಶ್ರೀರಾಮುಲು ಸಾರಿಗೆ ಸಚಿವರಾಗಿದ್ದಾಗ ಕ್ಷೇತ್ರಕ್ಕೆ ಎಷ್ಟು ಬಸ್‌ಗಳನ್ನು ಕೊಟ್ಟಿದ್ದಾರೆ? ಬಸ್‌ಗಳಿಗಾಗಿ ನಾನು ಹೋರಾಟ ಮಾಡಬೇಕಾಯಿತು.

ಸಂಡೂರು: ಕ್ಷೇತ್ರಕ್ಕೆ ಬಿಜೆಪಿಯವರ ಕೊಡುಗೆ ಏನು? ಈಗ ಬಿಜೆಪಿಯವರು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನೀವೇನು ಮಾಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಸಂಸದರನ್ನು ಪ್ರಶ್ನಿಸಿದರು.ತಾಲೂಕಿನ ನಿಡಗುರ್ತಿ, ಬಂಡ್ರಿ, ಎಚ್.ಕೆ. ಹಳ್ಳಿ, ಕಾಳಿಂಗೇರಿ, ಸೇವೇನಹಳ್ಳಿ, ಗೆಣತಿಕಟ್ಟೆ, ಬೊಮ್ಮಾಘಟ್ಟ, ರ‍್ರಯ್ಯನಹಳ್ಳಿ ಹಾಗೂ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ಬಿರುಸಿನ ಪ್ರಚಾರ ನಡೆಸಿ, ಮತಯಾಚಿಸಿ ಅವರು ಮಾತನಾಡಿದರು.

ಬಿ.ಶ್ರೀರಾಮುಲು ಸಾರಿಗೆ ಸಚಿವರಾಗಿದ್ದಾಗ ಕ್ಷೇತ್ರಕ್ಕೆ ಎಷ್ಟು ಬಸ್‌ಗಳನ್ನು ಕೊಟ್ಟಿದ್ದಾರೆ? ಬಸ್‌ಗಳಿಗಾಗಿ ನಾನು ಹೋರಾಟ ಮಾಡಬೇಕಾಯಿತು. ಈಗ ಬಿಜೆಪಿ ಅಭ್ಯರ್ಥಿ ತಮಗೆ ರಾಜಕೀಯ ಪುನರ್ಜನ್ಮ ನೀಡಿ ಎಂದು ಮತದಾರರನ್ನು ಕೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಕೆಲಸ ಮಾಡಬೇಕು. ಜನತೆ ಬುದ್ಧಿವಂತರಿದ್ದು ನಮ್ಮ ಕಾರ್ಯಗಳನ್ನು ಗಮನಿಸುತ್ತಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ೩೭೧ಜೆ ಕಲಂ ಅನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ. ಇದಕ್ಕೆ ಬಿಜೆಪಿ ಮುಖಂಡರು ವಿರೋಧಿಸಿದ್ದರು. ಇದೇ ಅನುದಾನದ ಅಡಿಯಲ್ಲಿಯೇ ನಿಡಗುರ್ತಿ ಗ್ರಾಮದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಪ್ರೌಢ ಶಾಲೆಯನ್ನು, ೩ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಬಂಡ್ರಿ ಗ್ರಾಮದಲ್ಲಿ ₹೩.೧೧ ಕೋಟಿ ವೆಚ್ಚದಲ್ಲಿ ೧೦ ಬೆಡ್‌ನ ಆಸ್ಪತ್ರೆ ಆರಂಭಿಸಲು ಅನುಮೋದನೆ ಪಡೆಯಲಾಗಿದೆ. ವಿದ್ಯುತ್ ಸರಬರಾಜು ಸಬ್ ಸ್ಟೇಷನ್ ಆರಂಭಿಸಲಾಗುವುದು. ಸುವರ್ಣ ಗ್ರಾಮ, ಬಸ್‌ ಸ್ಟ್ಯಾಂಡ್‌ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ಜನತೆಯ ಆರೋಗ್ಯ ರಕ್ಷಣೆಗಾಗಿ ಕ್ಲಿನಿಕ್ ಆನ್ ವೀಲ್ ಆರಂಭಿಸಲಾಗಿದೆ. ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಈ ಬಾರಿ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ತಮ್ಮನ್ನು ಗೆಲ್ಲಿಸುವ ವಿಶ್ವಾಸವಿದೆ. ಆಗ ಡಬಲ್ ಎಂಜಿನ್ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿ ಇನ್ನು ಹೆಚ್ಚಲಿದೆ ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಿಂದ ಜನತೆಗೆ ತುಂಬ ಅನುಕೂಲವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ರೈತನ್ಯಾಯ, ಶ್ರಮಿಕ ನ್ಯಾಯ, ಸಾಮಾಜಿಕ ನ್ಯಾಯ ಮುಂತಾದ ಯೋಜನೆಗಳು ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ, ಮೀಸಲಾತಿ ಪ್ರಮಾಣ ಹೆಚ್ಚಿಸಲು, ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್‌ಕುಮಾರ್, ಮುಖಂಡರಾದ ಪಿ.ರವಿಕುಮಾರ್, ಕೆ. ಸತ್ಯಪ್ಪ, ಜಯರಾಂ, ಸಿದ್ದೇಶ್ ಸೇರಿದಂತೆ ಹಲವು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.