ಏತ ನೀರಾವರಿ ಯೋಜನೆಗಾಗಿ ಭೂಮಿ ಕೊಟ್ಟ ರೈತರಿಗೆ ಸಿಗದ ಪರಿಹಾರ

| Published : Dec 14 2024, 12:45 AM IST

ಸಾರಾಂಶ

ತಾಲೂಕಿನ ರೈತರಿಗೆ ನೀರುಣಿಸಲು ಸರ್ಕಾರದ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಪರಿಹಾರ ನೀಡದ್ದಕ್ಕಾಗಿ ಅಧಿಕಾರಿಗಳ ವಾಹನವನ್ನು ಜಫ್ತಿ ಮಾಡಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ರೈತರಿಗೆ ನೀರುಣಿಸಲು ಸರ್ಕಾರದ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಪರಿಹಾರ ನೀಡದ್ದಕ್ಕಾಗಿ ಅಧಿಕಾರಿಗಳ ವಾಹನವನ್ನು ಜಫ್ತಿ ಮಾಡಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕಾರಿಪುರ ರೈತರ ಹಲವು ವರ್ಷಗಳ ಕನಸಾಗಿದ್ದ ಸನ್ಯಾಸಿಕೊಪ್ಪ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡು, ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಯೋಜನೆಗಾಗಿ 2009ರಲ್ಲಿ ಶಿಕಾರಿಪುರ ತಾಲೂಕು ಅಂಜನಾಪುರ ಹೋಬಳಿಯ, ಸನ್ಯಾಸಿಕೊಪ್ಪ ಗ್ರಾಮದ ಸರ್ವೆ ನಂಬರ್ 20 ರಲ್ಲಿನ, ಕೆಟಿ. ರುದ್ರಗೌಡರಿಗೆ ಸೇರಿದ 20 ಗುಂಟೆ ಜಮೀನನ್ನು ಯೋಜನಾ ಅನುಷ್ಠಾನ ಕಾಮಗಾರಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು.

ಈ ಕುರಿತು ಪರಿಹಾರ ಕೋರಿ ಶಿಕಾರಿಪುರದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಪರಿಹಾರ ನೀಡುವಂತೆ ಸದರಿ ನ್ಯಾಯಾಲಯವು ಆದೇಶ ಮಾಡಿದಾಗಿಯೂ, ಸರ್ಕಾರದಿಂದ ಸಂಬಂಧಿತ ಇಲಾಖೆಯವರು ಪರಿಹಾರವನ್ನು ಕೊಡಿಸಲು ಮೀನ ಮೇಷ ಮಾಡಿದ್ದರು.

ನ್ಯಾಯಾಲಯದಲ್ಲಿ ಜಮೀನಿನ ಮಾಲೀಕರದ ಕೆ.ಟಿ. ರುದ್ರಗೌಡರು ಅರ್ಜಿ ಸಲ್ಲಿಸಿದ ಮೇರೆಗೆ, ಶಿಕಾರಿಪುರದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ದಂಡಾವತಿ ಯೋಜನಾ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ರವರ ಬೋಲೇರೋ ವಾಹನವನ್ನು ಜಫ್ತಿ ಮಾಡಲು ಆದೇಶ ಮಾಡಿದ್ದು , ಅದರಂತೆ ಕೋರ್ಟ್‌ನ ಅಧಿಕಾರಿಗಳು ವಾಹನವನ್ನು ಜಫ್ತಿ ಮಾಡಿ ನ್ಯಾಯಾಲಯದ ಆವರಣಕ್ಕೆ ತಂದ ಘಟನೆ ನಡೆದಿದೆ.

ಇದರಿಂದ ಸರ್ಕಾರದ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರು ನ್ಯಾಯಾಲಯದ ಮೆಟ್ಟಿಲು ಏರಿದರೂ, ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ನ್ಯಾಯ ದೊರಕದಂತಹ ಪರಿಸ್ಥಿತಿ ತಲೆದೋರಿದ್ದು, ರೈತರು ಅಧಿಕಾರಿಗಳಿಗೆ ಶಪಿಸುವಂತಾಗಿದೆ.