ಸಾರಾಂಶ
ಕನ್ನಡಪ್ರಭವಾರ್ತೆ, ಚಿತ್ರದುರ್ಗಹಗಲು ರಾತ್ರಿ ಹೋರಾಟ ನಡೆಸಿ ವಿವಿ ಸಾಗರ ಜಲಾಶಯಕ್ಕೆ ನಾವು ನೀರು ತಂದಿದ್ದೇವೆ. ನಮ್ಮ ಹೋರಾಟಕ್ಕೆ ದನಿ ಗೂಡಿಸದ ಚಳ್ಳಕೆರೆ, ಮೊಳಕಾಲ್ಮೂರು ಭಾಗದ ಜನತೆ ನೀರು ಕೇಳಲು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆಂದು ಕುಂಚಿಟಿಗ ಸಮುದಾಯದ ಮುಖಂಡ ಕಸವನಹಳ್ಳಿ ರಮೇಶ್ ಪ್ರಶ್ನಿಸಿದ್ದಾರೆ.ವಿವಿಸಾಗರ ಹೋರಾಟ ಸಮಿತಿ ಹೆಸರಲ್ಲಿ ಕೆಲ ರೈತ ಮುಖಂಡರೊಂದಿಗೆ ಹಿರಿಯೂರಿನ ಕ್ಯಾಚ್ ಆ್ಯಂಡ್ ಈಟ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸಭೆ ನಡೆಸಿದ ಅವರು ವಿವಿ ಸಾಗರದ ನೀರು ಮಾತ್ರ ಎಲ್ಲರಿಗೂ ಬೇಕು. ಆದರೆ ಹೋರಾಟಕ್ಕೆ ಮಾತ್ರ ಹಿರಿಯೂರಿನವರೇ ಆಗಬೇಕಾ ಎಂದರು. ಮೈಸೂರಿನ ಕೆಆರ್‌ಎಸ್ ಡ್ಯಾಂ ಕಟ್ಟುವಾಗ ತಮಿಳುನಾಡಿನ ಜೊತೆ 1924ರಲ್ಲಿ ನೀರಿನ ಹಂಚಿಕೆ ಒಪ್ಪಂದ ಆಗಿತ್ತು. ಆದರೆ ವಾಣಿವಿಲಾಸ ಸಾಗರ ನಿರ್ಮಾಣ ಮಾಡುವಾಗ ಹಿರಿಯೂರು ತಾಲೂಕಿನ ಕೃಷಿ ಉದ್ದೇಶಕ್ಕೆ ಮಾತ್ರ ಎಂದು ನಿರ್ಮಿಸಲಾಗಿದೆ. ಅಧಿಕಾರಕ್ಕೆ ಬಂದ ರಾಜಕಾರಣಿಗಳೆಲ್ಲಾ ತಮಗೆ ತಿಳಿದಂತೆ ಆದೇಶಗಳನ್ನು ಮಾಡಿ ಈ ನೆಲದ ಕಾನೂನಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ನೂರಾರು ವರ್ಷಗಳಿಂದ ವ್ಯವಸಾಯವನ್ನೇ ನಂಬಿರುವ ನಮಗೆ ಮಾರಕವಾಗುವ ಕಾನೂನನ್ನು ಒಪ್ಪುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಕಳೆದ ವರ್ಷ ಒಂದು ಹನಿ ನೀರು ಬಂದಿಲ್ಲವಾದ್ದರಿಂದ ವಾಣಿವಿಲಾಸ ಸಾಗರದಿಂದ ಕೆಳಭಾಗಕ್ಕೆ ನೀರು ಕೊಡಲು ಹೇಗೆ ಸಾಧ್ಯ ? ಚಳ್ಳಕೆರೆ ತಾಲೂಕಿನ ಮೂರ್ನಾಲ್ಕು ಜನ ರಾಜಕಾರಣಿಗಳು ಅಧಿಕಾರದಲ್ಲಿದ್ದು ವಾಣಿವಿಲಾಸ ಸಾಗರದ ಬಗ್ಗೆ ಒಂದೇ ಒಂದು ಮಾತನ್ನು ವಿಧಾನಸೌಧದ ಒಳಗಾಗಲಿ ಹೊರಗಾಗಲಿ ಎತ್ತಿದ್ದನ್ನು ನಾವೆಂದು ಕಂಡಿಲ್ಲ, ಕೇಳಿಲ್ಲ. ಅಂತದ್ದರಲ್ಲಿ ಇವರು ವಾಣಿವಿಲಾಸ ಸಾಗರದ ನೀರನ್ನು ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಆಂಧ್ರಕ್ಕೆ ಕೊಂಡೊಯ್ಯಲು ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಚಳ್ಳಕೆರೆ, ನಾಯಕನಹಟ್ಟಿ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಭಾಗಕ್ಕೆ ಕುಡಿಯುವ ನೀರು ಕೊಟ್ಟಿರುವ ವಾಣಿವಿಲಾಸ ಸಾಗರದ ಬುಡದಲ್ಲಿರುವ ಭರಮಗಿರಿ ಗ್ರಾಮಕ್ಕೇ ಕುಡಿಯುವ ನೀರಿಲ್ಲ. ಇದರ ಬಗ್ಗೆ ಯಾರು ಧ್ವನಿ ಎತ್ತುತ್ತಿಲ್ಲ ಎಂದರು.ಅಧಿಕಾರದಲ್ಲಿರುವ ಎಲ್ಲ ರಾಜಕಾರಣಿಗಳ ವಿರೋಧ ಕಟ್ಟಿಕೊಂಡು ವಾಣಿವಿಲಾಸ ಸಾಗರಕ್ಕೆ ಐದು ಟಿಎಂಸಿ ನೀರನ್ನು ಮಂಜೂರು ಮಾಡಿಸಿದ್ದು ಐತಿಹಾಸಿಕ ದಾಖಲೆಯಾಗಿದೆ. ಇದಕ್ಕೆ ಬೇರೆ ತಾಲೂಕಿನವರು ಆಗ ಯಾಕೆ ಬೆಂಬಲ ಕೊಡಲಿಲ್ಲ? ತಮ್ಮ ತಾಲೂಕುಗಳ ಬಗ್ಗೆ ಮಾತ್ರ ಕೇಳುವ ಹೋರಾಟಗಾರರು ವಾಣಿವಿಲಾಸ ಸಾಗರ ತುಂಬಲಿ ಎಂದು ಎಂದಾದರೂ ಉಪವಾಸ ಸತ್ಯಾಗ್ರಹ, ಪಾದಯಾತ್ರೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರದ ಆದೇಶದ ಪ್ರಕಾರ ಕಾಲು ಟಿಎಂಸಿ ನೀರು ಹೋಗಲು ವಿರೋಧವಿಲ್ಲ. ಆದರೆ ಕಾಣದ ಕೈಗಳ ಕೈವಾಡ ಹಾಗೂ ಅಧಿಕಾರಿಗಳ ನಿರ್ಲಕ್ಷ, ಸುಳ್ಳು ಲೆಕ್ಕಗಳ ಮೇಲೆ ನಮ್ಮ ವಾಣಿವಿಲಾಸ ಸಾಗರ ನೀರು ಅರ್ಧ ಟಿಎಂಸಿಯಷ್ಟು ಈಗಾಗಲೇ ಹರಿದು ಹೋಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತೊಂದು ಭೀಕರ ಬರಗಾಲಕ್ಕೆ ತುತ್ತಾಗುವ ಸಂಭವವಿದೆ. ವಾಣಿವಿಲಾಸ ಸಾಗರ ತುಂಬಿಸುವ ಬಗ್ಗೆ ಯಾವ ಅಧಿಕಾರದಲ್ಲಿರುವ ರಾಜಕಾರಣಿಗಳು ತುಟಿ ಬಿಚ್ಚುತ್ತಿಲ್ಲ. ಸಂಘ ಸಂಸ್ಥೆಗಳನ್ನು ದಾರಿ ತಪ್ಪಿಸಲಾಗುತ್ತಿದೆ. ಈಗಲಾದರೂ ತಾಲೂಕಿನ ಜನ ಎಚ್ಚೆತ್ತುಕೊಂಡು ವಾಣಿವಿಲಾಸ ಸಾಗರವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಬೇಕು ಎಂದರು.ಕುರುಬರಹಳ್ಳಿ ಶಿವಣ್ಣ, ಮಲ್ಲಪ್ಪನಹಳ್ಳಿ ಜೋಗೇಶ್, ಗ್ರಾಮ ಪಂಚಾಯ್ತಿ ಸದಸ್ಯೆ ಶಶಿಕಲಾ , ದೇವರಾಜ್ ಮೇಷ್ಟ್ರು, ವಕೀಲ ಲಕ್ಷ್ಮಣ್ ಗೌಡ್ರು, ಬಾಬು ಕಾಮ್ಟೆ, ಜೈಪ್ರಕಾಶ್, ಬ್ಯಾಡರಹಳ್ಳಿ ಹನುಮಂತರಾಯ, ಜಯರಾಮಯ್ಯ, ಮಾಸ್ತಿಕಟ್ಟೆ ಚಂದ್ರಶೇಖರ್ ಮುಂತಾದವರು ಹಾಜರಿದ್ದರು.