ಸಾರಾಂಶ
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಪ್ರತಿಷ್ಠಿತ ಕಾರ್ಖಾನೆಗಳನ್ನು ಹೊಂದಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ, ತ್ಯಾಜ್ಯ ವಿಲೇವಾರಿಯಾಗದೆ ಅವ್ಯವಸ್ಥೆಗಳ ಆಗರವಾಗಿ ರೂಪುಗೊಂಡಿದೆ.ಈ ಪ್ರದೇಶದಲ್ಲಿ ಸುಮಾರು 450 ರಿಂದ 500 ಕಾರ್ಖಾನೆಗಳು ಮೊದಲನೇ ಹಂತ ಹಾಗೂ ಎರಡನೇ ಹಂತದಲ್ಲಿ ಸ್ಥಾಪಿತವಾಗಿವೆ. ಮೂರನೇ ಹಂತದಲ್ಲೂ ಕೈಗಾರಿಕೆ ಪ್ರಾರಂಭವಾಗಿದ್ದು ಸರಿಯಾದ ನಿರ್ವಹಣೆಯಿಲ್ಲದೇ ಕಾರ್ಮಿಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ, ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಕೈಗಾರಿಕಾ ಪ್ರದೇಶದೊಳಗೆ ರಸ್ತೆ ಬದಿಗಳಲ್ಲಿ ವಿದ್ಯುತ್ ಕಂಬಗಳಿದ್ದರೂ ವಿದ್ಯುತ್ ಇಲ್ಲದೆ ರಾತ್ರಿ ಕತ್ತಲು ಆವರಿಸಿರುತ್ತದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತ್ತು ಸ್ಥಳೀಯ ಸಾರ್ವಜನಿಕರು ನಡೆದಾಡಲು ತೊಂದರೆಯಾಗುತ್ತಿದೆ. ಕಳ್ಳತನದ ಆತಂಕವೂ ಇದೆ.ಕೆಲವು ಕಾರ್ಖಾನೆಗಳಲ್ಲಿ ಉಪಯೋಗಕ್ಕೆ ಬಾರದೇ ಇರುವ ಪ್ಲಾಸ್ಟಿಕ್ ಕಾಗದಗಳನ್ನು ಹಾಗೂ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಅಕ್ಕಪಕ್ಕದ ಖಾಲಿ ಜಾಗಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.ಇದರಿಂದ ಸ್ಥಳೀಯ ಪರಿಸರ ಸ್ವಚ್ಛತೆ ಹಾಳಾಗಿ ಕಲುಷಿತವಾಗುವುದಲ್ಲದೆ, ಸೊಳ್ಳೆ, ವಿಷ ಜಂತುಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆ ಜಾಗದಲ್ಲಿ ಓಡಾಡುವ ಸಾರ್ವಜನಿಕರು ದುರ್ವಾಸನೆಯನ್ನು ಕಂಡು ಮೂಗು ಮುಚ್ಚಿಕೊಂಡು ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತಡೆಯಬೇಕು, ಇಲ್ಲವಾದಲ್ಲಿ ಈ ಸ್ಥಳ ಸಂಪೂರ್ಣವಾಗಿ ಕಲುಷಿತಗೊಳ್ಳಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
‘ಕೆಲವು ಕಾರ್ಖಾನೆಗಳಲ್ಲಿ ಉತ್ಪತ್ತಿಯಾದ ತ್ಯಾಜ್ಯಗಳಿಂದ ಗ್ರಾಮಸ್ಥರಿಗೆ, ವ್ಯವಸಾಯ ಜಮೀನುಗಳ ರೈತರಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗುತ್ತದೆ, ಆದ್ದರಿಂದ ತ್ಯಾಜ್ಯ ಘಟಕಗಳಲ್ಲೇ ವಿಲೇವಾರಿ ಮಾಡಬೇಕು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಸಹ ಇದಕ್ಕೆ ಸೂಕ್ತ ಪರಿಹಾರ ಪಡೆದು ಸ್ಥಳೀಯ ಪರಿಸರ ಮತ್ತು ಜನರ ಆರೋಗ್ಯ ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು’.- ಗಬ್ಬಾಡಿ ಕಾಡೇಗೌಡ, ಅಧ್ಯಕ್ಷರು, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ .
‘ವಿದ್ಯುತ್ ಕಂಬಗಳಿದ್ದರೂ ಸಹ ವಿದ್ಯುತ್ತನ್ನು ಪೂರೈಸದೆ ಇರುವುದು ಇಲ್ಲಿನ ಕಾರ್ಮಿಕರಿಗೆ ಬಹಳ ಕಷ್ಟಕರವಾಗಿದ್ದು, ಹೆಚ್ಚಾಗಿ ಸಾರ್ವಜನಿಕರು ಓಡಾಡುವ ಹೆದ್ದಾರಿಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದರೆ ಮತ್ತು ರಾತ್ರಿ ವೇಳೆಯಲ್ಲಿ ಕೈಗಾರಿಕೆ ಪ್ರದೇಶದ ದೀಪಗಳ ಸಮಸ್ಯೆ ಬಾರದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.’- ಕೋಟೆ ರಾಜು, ಅಧ್ಯಕ್ಷರು, ಹಾರೋಹಳ್ಳಿ ರೈತ ಸಂಘ.