ಕನ್ನಡಪ್ರಭ ವಾರ್ತೆ ಬಾಗಲಕೋಟೆಗೌರವಾನ್ವಿತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ರಿವ್ಯೂ ಕಮಿಟಿ ಮಾಡ್ತೀವಿ ಅಂತ ಒಂದು ಕಡೆ ಹೇಳುತ್ತಾರೆ. ಮತ್ತೊಂದು ಕಡೆ ತಕ್ಷಣ 3 ಊರುಗಳ ಅಂತಿಮ ಅಧಿಸೂಚನೆ ಹೊರಡಿಸ್ತಾರೆ. ರಿವ್ಯೂ ಕಮಿಟಿ ಮಾಡುವುದಾದರೆ ಅದರ ಹಿಂದಿನ ಉದ್ದೇಶವಾದರೂ ಏನಾಗಿರಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗೌರವಾನ್ವಿತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ರಿವ್ಯೂ ಕಮಿಟಿ ಮಾಡ್ತೀವಿ ಅಂತ ಒಂದು ಕಡೆ ಹೇಳುತ್ತಾರೆ. ಮತ್ತೊಂದು ಕಡೆ ತಕ್ಷಣ 3 ಊರುಗಳ ಅಂತಿಮ ಅಧಿಸೂಚನೆ ಹೊರಡಿಸ್ತಾರೆ. ರಿವ್ಯೂ ಕಮಿಟಿ ಮಾಡುವುದಾದರೆ ಅದರ ಹಿಂದಿನ ಉದ್ದೇಶವಾದರೂ ಏನಾಗಿರಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಬಿಡದಿ ಟೌನ್‌ಶಿಪ್‌ ವಿವಾದದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಕೆಂದೂರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಟಿ ಮಾಡುವುದಾದರೆ ಪರ ವಿರೋಧಗಳ ಚರ್ಚೆ ಆಗಬೇಕು. ಬಿಡದಿ ಟೌನ್‌ಶಿಪ್ ಸಂಬಂಧ ಸಿಎಂ ಡಿಕೆಶಿ ಸಮಿತಿ ರಚಿಸಲು ಮುಂದಾಗಿರುವ ವಿಚಾರದಲ್ಲಿ 4 ಜನ ಚರ್ಚಿಸಬೇಕು. ಇದನ್ನು ಮಾಡೋಕೆ ಕಮಿಟಿ ಮಾಡ್ತಿದಾರಾ ಅಥವಾ ಮತ್ತೆ 3 ಊರುಗಳ ಅಧಿಸೂಚನೆ ಹೊರಡಿಸಿ ಗೊಂದಲ ಸೃಷ್ಟಿಸುತ್ತಿದ್ದಾರಾ?, ಸಿಎಂ ಅವರು ಮೊದಲು ತಮ್ಮ ದ್ವಂದ್ವ ನೀತಿಗೆ ಉತ್ತರ ಕೊಡಬೇಕಾಗಿದೆ ಎಂದು ಒತ್ತಾಯಿಸಿದರು.

ಸಿಎಂ ಹೇಳುವ ಕಮಿಟಿ ರಚನೆ ಹೀಗೆಯೇ ಇರಬೇಕಾ? ಎಷ್ಟು ರೈತರು ಕನ್ಸೆಂಟಗೆ ಒಪ್ಪಿಕೊಂಡಿದ್ದಾರೆ ಅನ್ನೋದು ತಿಳಿಯಬೇಕು. ಭೂಮಿ ಕೊಡದೆ ಇರೋಕೆ ಎಷ್ಟು ಜನ ಇದ್ದಾರೆ. ಭೂಮಿ ಕಸಿದುಕೊಳ್ಳುವುದರಿಂದ ಆಗುವ ಅನುಕೂಲ ಅನಾನುಕೂಲಗಳೇನು, ಕಮಿಟಿಯಲ್ಲಿ ಈ ಬಗ್ಗೆ ಸಾಧಕ-ಬಾದಕಗಳ ಬಗ್ಗೆ ಚರ್ಚಿಸಬೇಕು. ಒಂದೊಮ್ಮೆ ಸಿಎಂ ಅವರ ಉದ್ದೇಶ ಒಳ್ಳೆಯದಾಗಿದ್ದರೆ ಈ 3 ಹಳ್ಳಿಗಳ ಫೈನಲ್ ನೋಟಿಫಿಕೇಶನ್ ಹೊರಡಿಸುತ್ತಿರಲಿಲ್ಲ ಎಂದರು.

ನನ್ನ ಜೈಲಿಗೆ ಕಳಿಸ್ಲಿಕ್ಕೆ ಕುಮಾರಸ್ವಾಮಿ ಕನಸು ಕಾಣ್ತಿದ್ದಾರೆ, ನಾನು ಜೈಲಿಗೆ ಹೋಗಿ ಬಂದೆ ಸಿಎಂ ಆದವನು ಎಂಬ ಸಿಎಂ ಡಿಕೆಶಿ ಹೇಳಿಕೆಗೆ ನಿಖಿಲ್ ತಿರುಗೇಟು ನೀಡಿ, ಜೈಲಿಗೆ ಹೋಗಿ ಬಂದು ಸಿಎಂ ಆಗಿದ್ದೇನೆ ಅಂದ ಮೇಲೆ ಇನ್ನೇನಿದೆ, ಮುಖ್ಯಮಂತ್ರಿ ಪಟ್ಟಕ್ಕಿಂತ ಇನ್ಯಾವ ಪಟ್ಟ ದೊಡ್ಡದಿದೆ. ರಾಜ್ಯ ರಾಜಕಾರಣದಲ್ಲಿ ಅಂತಿಮ ದೊಡ್ಡ ಪಟ್ಟ ಮುಖ್ಯಮಂತ್ರಿ ತಾನೇ, ಯಾರು ಯಾರನ್ನ ಜೈಲಿಗೆ ಕಳ್ಸೋಕಾಗುತ್ತೆ, ನೀವು ಸರಿಯಾಗಿದ್ದರೆ ಸರಿಯಾಗಿ ನಡೆದುಕೊಂಡಿದ್ದರೆ, ಕಾನೂನು ವಿರುದ್ಧ ಯಾವುದೇ ಚಟುವಟಿಕೆ ಮಾಡದೇ ಇದ್ದರೆ, ನೀವು ಯಾಕೆ ಒಳಗಡೆ ಹೋಗುತ್ತಿದ್ದೀರಿ, ಪಾಪ, ನೀವು ಅವತ್ತು ಒಳಗಡೆ ಇದ್ರಿ, ಅವತ್ತು ಕುಮಾರಸ್ವಾಮಿ ಅವರು ಜೈಲಿಗೆ ಬಂದು ನಿಮ್ಮನ್ನು ಭೇಟಿಯಾಗಿದ್ದು ಮರೆತಿದ್ದೀರಾ, ನಿಮ್ಮ ತಾಯಿ ಅವರನ್ನು ಹೋಗಿ ಸೌಜನ್ಯಕ್ಕೆ ಭೇಟಿಯಾಗಿದ್ದು ಮರೆತು ಹೋಗಿದೆಯಾ ?, ದೇವೇಗೌಡ ಕುಟುಂಬ ಯಾವತ್ತೂ ಯಾವ ಒಬ್ಬ ವ್ಯಕ್ತಿ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಬದಲಾಗಿ ಆರೋಗ್ಯಕರವಾಗಿ, ಜನಪರವಾಗಿ, ವಿರೋಧ ಪಕ್ಷದಲ್ಲಿದ್ದಾಗಲೂ ಸರ್ಕಾರ ಎಡಿವಿದಾಗ ಎಚ್ಚೆತ್ತುಕೊಳ್ಳುವಂತೆ ಸಲಹೆ ಕೊಟ್ಟಿದೆ, ಯಾರನ್ನು ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿ ರಾಜಕಾರಣ ಮಾಡಿಲ್ಲ ಎಂದರು.

ನಮ್ಮ ಹೋರಾಟ ಬಹಳ ಸ್ಪಷ್ಟ. ಯಾವ ಕಾರಣಕ್ಕೂ ಸಹ ರೈತರಿಗೆ ಜಯ ಸಿಗುವವರೆಗೂ ಕೂಡ ವಾಪಸ್ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಪಾದಯಾತ್ರೆಯನ್ನು ಮಾಡಿದ್ದೇನೆ ಎಂದರು.

ನಾನು ಸಿಎಂ ಆದ್ಮೇಲೆ ದೇವೇಗೌಡರಿಗೆ ಪ್ರತಿಭಟನೆ ಮಾಡೋಕೆ ಧೈರ್ಯ ಬಂತು ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ದೇವೇಗೌಡರಿಗೆ 93 ವಯಸ್ಸು, ಆದರೂ ಆ ಪುಣ್ಯಾತ್ಮ ಅವರ ಹೃದಯ ಮಿಡಿತ ಇರುವುದು ರೈತರ ಪರವಾಗಿ, ರೈತರು ಕಷ್ಟದಲ್ಲಿದ್ದಾಗ ಅವರಿಗೆ ರಕ್ಷಣೆಗೆ ನಿಲ್ಲಬೇಕು. ರೈತರನ್ನ ಅವರಷ್ಟು ಪ್ರೀತಿ ಮಾಡುವವರು ಯಾರು ಇಲ್ಲ. ರಾಮನಗರದಲ್ಲಿನ 4 ಸ್ಥಾನಗಳಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳಿದ್ದು, ಯಾವೊಬ್ಬ ಪ್ರತಿನಿಧಿಗಳು ರೈತರ ಗೋಳು ಕೇಳಿಲ್ಲ. ಈಗ ಇರೋ ಮುಖ್ಯಮಂತ್ರಿಗಳು ಸಹ ಜನರ ಬಗ್ಗೆ ಏನನ್ನು ಕೇಳಲಿಲ್ಲ, ಏನು ಮಾಡಬೇಕು ಅಂತ ಕೂಡ ಕೇಳಲಿಲ್ಲ, ಹೀಗಾಗಿ ಅದನ್ನೇ ಇವತ್ತು ದೇವೇಗೌಡರು ಮಾಡ್ತಾ ಇರೋದು ರೈತರಿಗೋಸ್ಕರ.

-ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ, ಜೆಡಿಎಸ್‌ ಯುವ ಘಟಕ