ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿನೂತನವಾಗಿ ರಚನೆಯಾದ ತಾಲೂಕುಗಳಿಗೆ ತಲಾ ₹8.6 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸಚಿವ ಎಚ್.ಕೆ.ಪಾಟೀಲ ಅನುಮೋದನೆ ನೀಡಿದ್ರೂ, ರಬಕವಿ-ಬನಹಟ್ಟಿ ತಾಲೂಕಿನ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗ ಗುರುತಿಸುವುದೇ ತಲೆನೋವಾಗಿದೆ.
2025, ಜೂ.9ರಂದು ರಬಕವಿ ಹೊಸ ಬಸ್‌ನಿಲ್ದಾಣದ ಪಕ್ಕದ ಜಿಎಲ್‌ಬಿಸಿ ಹಿಂಬದಿಯ ೩ ಎಕರೆ ೧೮ ಗುಂಟೆ ಜಾಗ ಪರಿಶೀಲಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ತಾಲೂಕು ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿಯವರು ತಮ್ಮ ಜೊತೆ ಚರ್ಚಿಸದೇ ವರದಿ ಸಲ್ಲಿಸಿದ್ದಕ್ಕೆ ಶಾಸಕ ಸಿದ್ದು ಸವದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬನಹಟ್ಟಿ ಜನತೆಯೂ ಪ್ರಜಾಸೌಧ ತಮಗೆ ಬೇಕೆಂದು ಬೇಡಿಕೆ ಇಟ್ಟಿದ್ದು, ಎರಡೂ ನಗರಗಳ ಧುರೀಣರು ಪರಸ್ಪರ ಒಪ್ಪಿ ಸಮ್ಮತಿ ನೀಡುವವರೆಗೆ ಕಾಯಲೇಬೇಕಿದೆ.ಜು.೨೨ರಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಖುದ್ದು ಸ್ಥಳ ಪರಿಶೀಲನೆಗೆ ಆಗಮಿಸಿ, ಈ ಮೊದಲು ಗುರುತಿಸಿದ್ದ ಗುರುದೇವ ಬ್ರಹ್ಮಾನಂದ ಆಶ್ರಮದ ಎದುರಿನ ಜಾಗ ಸೇರಿದಂತೆ ಬಸ್ ನಿಲ್ದಾಣದ ಪಕ್ಕದ ಜಾಗ ವೀಕ್ಷಿಸಿದರು. ಆದರೆ ಕೆಲವರ ಸ್ವಾರ್ಥದಿಂದಾಗಿ ಬಸ್ ನಿಲ್ದಾಣದ ಪಕ್ಕದ ಜಾಗ ಬಿಟ್ಟು ಮೊದಲಿದ್ದ ಜಾಗದಲ್ಲೇ ಪ್ರಜಾಸೌಧ ನಿರ್ಮಿಸಲು ಕೃಪಾಪೋಷಿತ ಮಂಡಳಿಯು ₹3 ಕೋಟಿ ಮೊತ್ತವನ್ನು ನಗರಾಭಿವೃದ್ಧಿ ಇಲಾಖೆಗೆ ಭರಣಾ ಮಾಡಬೇಕಿದೆ ಎಂದಿದೆ. ಇದು ಜಾಗ ನಿಖರತೆ ತೊಡಕಾಗಿದೆ. ಈ ಮೊದಲಿನ ಜಾಗವು ನ್ಯಾಯಾಲಯದಲ್ಲಿದ್ದು, ಅದನ್ನೇ ನೆಪವಾಗಿಟ್ಟುಕೊಂಡು ಜನಪ್ರತಿನಿಧಿಗಳು ವೃಥಾ ೭ ವರ್ಷಗಳಿಂದ ಕಾಲಹರಣ ಮಾಡುತ್ತಿರುವುದು ಜನತೆ ಆಕ್ರೋಶಕ್ಕೆ ಕಾರಣವಾಗಿದೆ.
ರಬಕವಿಯ ಸರ್ವೇ ನಂ.೬೩ರ ನಾಯಕರ ಗುಡ್ಡದ ಪ್ರದೇಶದಲ್ಲಿ ಮದನಮಟ್ಟಿ ನಿರಾಶ್ರಿತರ ಕೇಂದ್ರಕ್ಕೆಂದು ೪೫ ಎಕರೆಯಷ್ಟು ಭೂಮಿ ಮಂಜೂರಾತಿಗೆ ಸರ್ಕಾರ ಆದೇಶಿಸಿತ್ತು. ಇದರಲ್ಲಿನ 4 ಎಕರೆ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ನೀಲನಕ್ಷೆಯನ್ನೂ ತಯಾರಿಸಲಾಗಿತ್ತು. ಇದೀಗ ಮಾಲೀಕರ ವಿರೋಧದ ಮಧ್ಯ ನ್ಯಾಯಾಲಯ ಮೆಟ್ಟಿಲೇರಿ 7 ವರ್ಷಗಳೇ ಕಳೆದಿವೆ. ಇದು ಇನ್ನಷ್ಟು ವಿಳಂಬಕ್ಕೆ ಕಾರಣವಾಗಿದೆ.ಬಸ್ ನಿಲ್ದಾಣ ಹತ್ತಿರವೇ ನಿರ್ಮಿಸಲು ಜನತೆ ಆಗ್ರಹ:
ತಾಲೂಕಿನ ಕೇಂದ್ರ ಬಿಂದುವಿನಂತಿರುವ ರಬಕವಿ ನೂತನ ಬಸ್ ನಿಲ್ದಾಣ ಹತ್ತಿರದ ಜಿಎಲ್‌ಬಿಸಿ ಇಲಾಖೆಯ ಒಟ್ಟು ೯ ಎಕರೆ ಜಾಗದಲ್ಲಿ ಕಚೇರಿ, ವಸತಿಗೃಹಗಳು, ವಿಶ್ರಾಂತಿಧಾಮ (ಐಬಿ) ಇದೆ. ವಿಶ್ರಾಂತಿ ಧಾಮ ಆವರಣದಲ್ಲಿ ೩.೧೮ ಎಕರೆಯಷ್ಟು ಖಾಲಿ ನಿವೇಶನ ಗುರುತಿಸಿದ್ದು, ಈ ಪ್ರದೇಶದ ಅನುಮೋದನೆಗಾಗಿ ತಾಲೂಕಾಡಳಿತ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದೆ. ತಾಲೂಕು ಆಡಳಿತ ಗುರುತಿಸಿರುವ ಜಿಎಲ್‌ಬಿಸಿ ಆವರಣದ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಲು ಮುಂದಾಗಬೇಕೆಂದು ಜನತೆ ಆಗ್ರಹಿಸುತ್ತಿದೆ.ಭೂಪ್ರದೇಶ ಗುರುತಿಸದೆ ಕಾಲಹರಣದಲ್ಲಿರುವ ತಾಲೂಕು ಆಡಳಿತ ಶೀಘ್ರ ಪ್ರಸ್ತಾವ ಸಲ್ಲಿಸಿದ್ದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣವಾಗುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ನ್ಯಾಯಾಲಯದ ಪ್ರಕರಣದ ನೆಪದಲ್ಲಿ ಮೀನಮೇಷ ಎಣಿಸಿದರೆ ಇನ್ನೂ ದಶಕಗಳೇ ಬೇಕಾಗುವ ಅನಿವಾರ್ಯತೆ ಇದೆ. ಜನಪ್ರತಿನಿಧಿಗಳು, ಶಾಸಕ ಸಿದ್ದು ಸವದಿ ಪ್ರಬಲ ಇಚ್ಛಾಶಕ್ತಿ ತೋರಿದರೆ ತಾಲೂಕಿನ ಹೃದಯ ಭಾಗವಾಗಿರುವ ರಬಕವಿ ಜಿಎಲ್‌ಬಿಸಿ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಸುಲಭಸಾಧ್ಯ. ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣವಾದರೆ ತುಂಬಾ ಅನುಕೂಲ ಎಂದು ನಾಗರಿಕರ ಅಭಿಪ್ರಾಯವಾಗಿದೆ.
ರಬಕವಿಯ ಎರಡೂ ಪ್ರದೇಶಗಳನ್ನು ಅಧಿಕಾರಿಗಳ ಜೊತೆ ವೀಕ್ಷಿಸಲಾಗಿದೆ. ಜಿಎಲ್‌ಬಿಸಿ ಒಡೆತನದ ಜಾಗೆಯ ಒಟ್ಟು ೯ಎಕರೆ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ೩ ಎಕರೆ ೧೮ ಗುಂಟೆ ಜಾಗೆ ಗುರುತಿಸಲಾಗಿದೆ. ಬಸ್ ನಿಲ್ದಾಣದ ಬಳಿಯೇ ಈ ಜಾಗೆ ಇರುವುದರಿಂದ ಜನತೆಯ ಅನುಕೂಲತೆ ಲಕ್ಷಿಸಿ ಮತ್ತು ಆಡಳಿತ ಯಂತ್ರದ ವಿವರ ಪಡೆದು ಜಿಲ್ಲಾಡಳಿತ ಜಾಗೆ ನಿರ್ಧರಿಸಲಿದೆ.ಸಂಗಪ್ಪ. ಜಿಲ್ಲಾಧಿಕಾರಿ ಬಾಗಲಕೋಟೆ
ರಬಕವಿ-ಬನಹಟ್ಟಿ ಮತ್ತು ತೇರದಾಳ ಎರಡು ಕಡೆ ಪ್ರಜಾಸೌಧ ನಿರ್ಮಾಣವಾಗಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬಕ್ಕೆ ಇನ್ನೂ ಜಾಗೆ ಗುರುತಿಸದಿರುವದು ಬೇಸರ ತರುವಂಥದ್ದು, ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿ.ಸಿದ್ದು ಸವದಿ, ಶಾಸಕ, ತೇರದಾಳ.
ರಬಕವಿ ಜಿಎಲ್‌ಬಿಸಿ ಪ್ರದೇಶದಲ್ಲಿ ೩.೧೮ ಎಕರೆಯಷ್ಟು ಜಾಗೆ ನೋಡಿದ್ದಾಗಿದೆ. ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗೆ ಪರಿಶೀಲಿಸಿದ್ದಾರೆ. ನಿಯೋಜಿತ ಪ್ರಜಾಸೌಧ ಕಟ್ಟಡದ ಜಾಗೆಯ ಬಗ್ಗೆ ಶೀಘ್ರವೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.ಗಿರೀಶ ಸ್ವಾದಿ, ತಹಸೀಲ್ದಾರ್ ರಬಕವಿ-ಬನಹಟ್ಟಿ.
ರಬಕವಿಯಲ್ಲಿ ಕಂದಾಯ ಅಧಿಕಾರಿಗಳು ಗುರುತಿಸಿರುವ ಜಾಗ ತಾಲೂಕಿನ ಕೇಂದ್ರಸ್ಥಳವಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶಾಸಕರು ಅಧಿಕಾರಿಗಳಿಗೆ ಆದೇಶಿಸಿ, ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕು. ತಕ್ಷಣ ಮಂಜೂರಾತಿ ಪಡೆದು ಪ್ರಜಾಸೌಧ ಕಾಮಗಾರಿ ಆರಂಭಿಸಲು ಕಂಕಣಬದ್ಧರಾಗಬೇಕು. ಶಾಸಕರ ಹೊಣೆಗಾರಿಕೆಯನ್ನು ಬೇರೊಬ್ಬರ ಮೇಲೆ ಹಾಕುವುದು ಅನುಚಿತ.ಬಸವರಾಜ ಗುಡೋಡಗಿ, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ರಬಕವಿ
ರಬಕವಿ ಬಸ್‌ನಿಲ್ದಾಣದ ಪಕ್ಕದ ಜಿಎಲ್‌ಬಿಸಿ ಜಾಗೆಯಲ್ಲಿ ಪ್ರಜಾಸೌಧ ನಿರ್ಮಾಣಗೊಂಡಲ್ಲಿ ತಾಲೂಕಿನ ಕೇಂದ್ರ ಸ್ಥಳವಾದ್ದರಿಂದ ಮತ್ತು ಬಸ್ ಇಳಿದ ತಕ್ಷಣ ಪಕ್ಕದ ವೃದ್ಧರು, ಅಂಗವಿಕಲರು, ಮಹಿಳೆಯರು ಪ್ರಜಾಸೌಧಕ್ಕೆ ಸರಾಗವಾಗಿ ತೆರಳಿ ತಮ್ಮ ಕೆಲಸ ಮಾಡಿಕೊಳ್ಳಲು ಅನುಕೂಲವಾಗಲಿದೆ. ಬೇರೆ ಪ್ರದೇಶವಾದರೆ ಸಂಚಾರಕ್ಕೆ ವೃಥಾ ಹಣ ವ್ಯಯವಾಗುವುದರಿಂದ ಬಸ್‌ನಿಲ್ದಾಣದ ಬಳಿ ಇರುವ ಜಾಗೆಯಲ್ಲೇ ತಾಲೂಕು ಕಚೇರಿ ಆರಂಭಿಸಬೇಕು.ನಾಗಪ್ಪ ಮಲೋಡಿ. ರೈತ ಸಂಘದ ಧುರೀಣರು, ರಬಕವಿ