ಸಿದ್ದರಾಮಯ್ಯ ಅವರನ್ನು ಏನೆಂದು ಕರೆಯಬೇಕು: ಸಿ.ಟಿ. ರವಿ

| Published : Oct 06 2024, 01:22 AM IST

ಸಿದ್ದರಾಮಯ್ಯ ಅವರನ್ನು ಏನೆಂದು ಕರೆಯಬೇಕು: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದರಂತೆ. ಇಂದು ಸಿಎಂ ಸಿದ್ದರಾಮಯ್ಯ ನಾನು ಯಾರಿಗೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್‌ಗೂ ಹೆದರುವುದಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ನಾವು ಏನೆಂದು ಕರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದರಂತೆ. ಇಂದು ಸಿಎಂ ಸಿದ್ದರಾಮಯ್ಯ ನಾನು ಯಾರಿಗೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್‌ಗೂ ಹೆದರುವುದಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ನಾವು ಏನೆಂದು ಕರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಂವಿಧಾನ, ಕಾನೂನಿನ ಬಗ್ಗೆ ಭಯವಿಲ್ಲ. ನೈತಿಕ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಆದರೆ ಸಿದ್ದರಾಮಯ್ಯ ಜನರಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರುವುದಿಲ್ಲ ಎನ್ನುವುದಾದರೆ ನಾವು ಅವರನ್ನು ಒಬ್ಬ ಮನುಷ್ಯ ಎಂದು ಕೊಳ್ಳುವುದೇ. ನಾವು ಯಾರಿಗೂ ಹೆದರುವುದಿಲ್ಲ ಎನ್ನುತ್ತಿದ್ದರಲ್ಲ ಅವರಂತೆಯೇ ಎಂದು ಕೊಳ್ಳುವುದಾ ಎಂದು ವ್ಯಂಗ್ಯವಾಡಿದರು.

ರಾಯಚೂರಿನ ಸಮಾವೇಶದ ಕುರಿತು ಮಾತನಾಡಿದ ಅವರು, ಅಧಿಕಾರ, ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ, ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಧ್ಯವಿಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದೋನು ನೀರು ಕುಡಿಯಲೇ ಬೇಕು. ಅದು ಪ್ರಕೃತಿ ಧರ್ಮ ಎಂದು ಹೇಳಿದರು.

ಮತ್ತೆ ಮುನ್ನೆಲೆಗೆ ಬಂದ ಜಾತಿ ಜನಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮುಂದುವರಿದರೆ ಸಮಸ್ಯೆ ಇಲ್ಲ. ಆದರೆ, ಸಮಾಜ ಒಡೆಯಲು, ಜಾತಿ ಎತ್ತಿಕಟ್ಟಲು, ರಾಜಕೀಯಕ್ಕಾಗಿ ಜಾತಿಗಣತಿ ಮಾಡುವುದಾದರೆ ಯಾರೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಎಚ್.ಎಂ.ರೇವಣ್ಣ ಮೀಸಲಾತಿಗೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರೋಧವಿದೆ ಎಂದು ಆರೋಪಿಸಿದ್ದಾರೆ. ಆದರೆ, ವಿರೋಧಿಸಿದ್ದು ಆರ್‌ಎಸ್‌ಎಸ್ ಅಥವಾ ಬಿಜೆಪಿ ಅಲ್ಲ. ನೆಹರೂ ವಿರೋಧಿಸಿದ್ದು. ರಾಹುಲ್ ಗಾಂಧಿ ಅವರ ಮುತ್ತಜ್ಜ, ಇಂದಿರಾಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ ನೆಹರೂ ಅವರು ಮೀಸಲಾತಿ ವಿರೋಧಿಸಿದ್ದು. ಅಭಿವೃದ್ಧಿ, ದಕ್ಷತೆಗೆ ಅಡ್ಡಿಯಾಗುತ್ತೆಂದು ರಾಜ್ಯದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರೂ. ರೇವಣ್ಣ ತಪ್ಪು ತಿಳಿದಿದ್ದಾರೆ. ನೆಹರೂ ಬಿಜೆಪಿ ಆರ್‌ಎಸ್‌ಎಸ್‌ಗೆ ಸೇರಿದವರಲ್ಲ. ಬದಲಿಗೆ ಅವರು ಕಾಂಗ್ರೆಸ್ಸಿಗರು ಎಂದು ತಿರುಗೇಟು ನೀಡಿದರು.

ಮೀಸಲಾತಿ ವಿರೋಧಿಸಿದ್ದವರು ಕಾಂಗ್ರೆಸ್ಸಿಗರು. ಮೀಸಲಾತಿಗೆ ವಿರೋಧ ಇದ್ದ ಕಾಂಗ್ರೆಸ್ ಇದೀಗ ನಾಟಕವಾಡುತ್ತಿದೆ. ಮಂಡಲ್ ಆಯೋಗದ ವರದಿಯನ್ನು ಅಡಿಗೆ ಹಾಕಿಕೊಂಡು ಕೂತಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು.