ಸಾರಾಂಶ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುನೆರೆಯ ಆಂಧ್ರಪ್ರದೇಶ ಸಂಪರ್ಕಿಸುವ ರಸ್ತೆಯ ಸೇತುವೆಯೊಂದು ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಒಂದಿಷ್ಟು ಮಣ್ಣು ಹರಡಿ ಸುಮ್ಮನಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಒಬೇನಹಳ್ಳಿ ಗೇಟ್ ಮತ್ತು ದೇವರಕೊಟ್ಟದ ಮಧ್ಯೆ ಹರಿಯುವ ವೇದಾವತಿ ನದಿಗೆ 84 ವರ್ಷಗಳ ಹಿಂದೆ ಮೈಸೂರು ಮಹಾರಾಜರು ಕಟ್ಟಿಸಿದ್ದ ಸೇತುವೆ ದುಸ್ಥಿತಿ ತಲುಪಿದ್ದು, ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸೇತುವೆಯ ಗುಣಮಟ್ಟ, ಸದ್ಯದ ಸ್ಥಿತಿ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ನೀಡಿ ಹೋಗಿದ್ದಾರೆ.ಈ ಸೇತುವೆ ಮೇಲೆ ರಾಜ್ಯ ಹೆದ್ದಾರಿ ಹಾದುಹೋಗಿದ್ದು, ಈ ರಸ್ತೆ ಶಿರಾ, ಅಮರಾಪುರ, ಪಾವಗಡ, ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮೊನ್ನೆ ಹಿಡಿದ ಜಡಿ ಮಳೆಗೆ ಸೇತುವೆ ಮೇಲಿನ ಗುಂಡಿಗಳು ತಮ್ಮ ವಿಸ್ತಾರ ಹೆಚ್ಚಿಸಿಕೊಂಡಿದ್ದು ಸೇತುವೆಯ ಕೊನೆ ಭಾಗದ ಒಂದು ಮಗ್ಗುಲಲ್ಲಿ ಮಣ್ಣು ಜರುಗಿ ಆತಂಕ ಸೃಷ್ಟಿಸಿತ್ತು.
ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಗೆ ಸ್ಥಳೀಯರು ಹೇಳುವ ಪ್ರಕಾರ ನಿರ್ವಹಣೆ ಕೊರತೆ ಕಾಡುತ್ತಿದೆ. ಗುಂಡಿ ಮುಚ್ಚುತ್ತಿಲ್ಲ, ಬಣ್ಣ ಹೊಡೆಸಿಲ್ಲ, ಸೇತುವೆ ಅಕ್ಕಪಕ್ಕದ ಗಿಡ ಮರ ತೆಗೆಯಲ್ಲ ಎಂಬುದು ಸದ್ಯದ ಆಪಾದನೆಯಾದೆ. ದಿನನಿತ್ಯ ಸಾವಿರಾರು ಬೈಕ್, ಕಾರು, ಬಸ್ಸು ಮುಂತಾದ ವಾಹನಗಳು ಈ ಸೇತುವೆಯ ಮುಖಾಂತರವೇ ಸಂಚರಿಸಬೇಕು.ಬೈಕ್ ಸವಾರರು ಸೇತುವೆ ಮೇಲೆ ಗುಂಡಿ ತಪ್ಪಿಸಲು ಪರದಾಡುವ ಸ್ಥಿತಿ ಇದ್ದು, ಮೊನ್ನೆ ಬಿದ್ದ ಮಳೆಗೆ ಮಣ್ಣು ಜರುಗಿದ ನಂತರ ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿ ಒಂದಿಷ್ಟು ಮಣ್ಣು ಹರಡಿಸಿ ರಸ್ತೆಯ ನೀರು ಸೇತುವೆ ಮೇಲೆ ಹರಿಯದಂತೆ ಬೇರೆ ಕಡೆ ಹೋಗುವಂತೆ ಚಿಕ್ಕದಾಗಿ ತಗ್ಗು ಮಾಡಿ ಇನ್ನೇನು ತೊಂದರೆಯಿಲ್ಲ ಎಂಬಂತೆ ಹೊರಟು ಹೋಗಿದ್ದಾರೆ. ಸೇತುವೆ ಪಕ್ಕದ ಮಣ್ಣು ಕುಸಿದಿರುವುದೇ ಸೇತುವೆ ಯಾವ ಅಪಾಯದಲ್ಲಿದೆ ಎಂದು ಹೇಳುತ್ತದೆ.
1939ರಲ್ಲಿ ಮೈಸೂರು ಸಂಸ್ಥಾನದ ಮಹರಾಜರು ಕೊಡುಗೆಯಾಗಿ ಜನ್ಮ ತಾಳಿದ ಸೇತುವೆಯೊಂದನ್ನು ನಿರ್ವಹಣೆಯ ಕೊರತೆಯಿಂದ ಈ ಸ್ಥಿತಿಗೆ ತಂದಿರುವುದು ದುರಂತದ ಸಂಗತಿ.ವಿವಿ ಸಾಗರ ಜಲಾಶಯ 2022 ರಲ್ಲಿ ತುಂಬಿ ಕೋಡಿ ಬಿದ್ದಾಗಿನಿಂದಲೂ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬೆಳಗೆರೆಯವರೊಬ್ಬರು ಇದೇ ಸೇತುವೆಯ ಪಕ್ಕದಿಂದ ನೀರಿಗಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ದೇವರಕೊಟ್ಟ ಕಡೆಯ ಸೇತುವೆಯ ಒಂದು ಭಾಗದಲ್ಲಿ ಮಣ್ಣು ಕುಸಿದಿದೆ ಎಂದು ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದಾಗ ಅಧಿಕಾರಿಗಳು ಹೋಗಿ ಆ ಭಾಗಕ್ಕೊoದಿಷ್ಟು ಮಣ್ಣು ಅಡ್ಡ ಹಾಕಿ ಬಂದಿದ್ದಾರೆ.
ನಿರಂತರವಾಗಿ ನದಿಯಲ್ಲಿ ನೀರು ಹರಿಯುತ್ತಿದ್ದು, ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನ ಓಡಾಡುತ್ತಿರುವುದರಿಂದ ತಜ್ಞರನ್ನು ಕರೆಸಿ ಸೇತುವೆಯ ಗುಣಮಟ್ಟ ಮತ್ತು ಸಾಮರ್ಥ್ಯ ಪರೀಕ್ಷಿಸುವ ತುರ್ತು ಅಗತ್ಯವಿದೆ. ಕಳೆದೆರಡು ವರ್ಷಗಳ ಹಿಂದೆ ತಾಲೂಕಿನ ಮ್ಯಾದನಹೊಳೆ ಸಮುದ್ರದಹಳ್ಳಿ ಬಳಿಯ ಸೇತುವೆ ರಾತ್ರೋರಾತ್ರಿ ಕುಸಿದು ಬಿದ್ದು ಇವತ್ತಿಗೂ ಆ ಭಾಗದ ಹತ್ತಾರು ಹಳ್ಳಿಗಳ ಜನರಿಗೆ, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ತಜ್ಞರಿಂದ ಸೇತುವೆ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಅಪಾಯಕ್ಕೆ ಆಹ್ವಾನ ನೀಡದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲತೋರೆ ಓಬೇನಹಳ್ಳಿ ಗೇಟ್ ಬಳಿ ಸೇತುವೆ ಮೂಲೆಯಲ್ಲಿ ಮಣ್ಣು ಕುಸಿದಿದ್ದು ಕೂಡಲೇ ಹೊಸದಾಗಿ ಮಣ್ಣು ಸುರಿದು ಸರಿ ಮಾಡಲಾಗಿದೆ. ಮುಂದೆ ಮಳೆ ಮುಗಿದ ನಂತರ ಕುಸಿದ ಜಾಗದಲ್ಲಿ ಕಾಂಕ್ರೀಟ್ ಗೋಡೆ ಕಟ್ಟಿ ಇನ್ನೂ ಸ್ವಲ್ಪ ಮಣ್ಣು ಹಾಕಿ ರೀವಿಟ್ಮೆಂಟ್ ಕಟ್ಟಲಾಗುತ್ತದೆ. ಈಗ ಯಾವುದೇ ತೊಂದರೆ ಇಲ್ಲ. ಮೇಲಿನಿಂದ ಬರುವ ಮಳೆ ನೀರನ್ನು ಬೇರೆ ಕಡೆಯಿಂದ ಚರಂಡಿಗೆ ಬಿಡಲಾಗಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ.
- ನಾಗರಾಜ್, ಲೋಕೋಪಯೋಗಿ ಇಲಾಖೆ ಎಇಇ