ಹಾವೇರಿಯ ವಿದ್ಯಾನಗರದ ರಸ್ತೆಗೆ ಕಾಯಕಲ್ಪ ಯಾವಾಗ?

| Published : Jul 06 2024, 12:56 AM IST

ಸಾರಾಂಶ

ಇದು ಜಿಲ್ಲಾ ಕೇಂದ್ರ ಹಾವೇರಿ ನಗರದ ಪ್ರತಿಷ್ಠಿತ ಬಡಾವಣೆಯಾದ ಎಲ್‌ಐಸಿ ಹಿಂಭಾಗದ ವಿದ್ಯಾನಗರದ ಪಶ್ಚಿಮ ಬಡಾವಣೆ ರಸ್ತೆ. ಸ್ವಲ್ಪ ಮಳೆ ಬಂದರೂ ಇಲ್ಲಿನ ರಸ್ತೆಗಳೆಲ್ಲಾ ಕೆಸರು ಗದ್ದೆಯಂತಾಗುತ್ತವೆ. ಆದರೂ ಸಹಿತ ನಗರಸಭೆ ಮಾತ್ರ ತನಗೆ ಸಂಬಂಧವೇ ಇಲ್ಲದಂತಿದೆ ವರ್ತಿಸುತ್ತಿದೆ.

ಹಾವೇರಿ: ಇದು ಯಾವುದೋ ಕುಗ್ರಾಮದ ರಸ್ತೆ ಅಲ್ಲ, ಜಿಲ್ಲಾ ಕೇಂದ್ರ ಹಾವೇರಿ ನಗರದ ಪ್ರತಿಷ್ಠಿತ ಬಡಾವಣೆಯಾದ ಎಲ್‌ಐಸಿ ಹಿಂಭಾಗದ ವಿದ್ಯಾನಗರದ ಪಶ್ಚಿಮ ಬಡಾವಣೆ ರಸ್ತೆ. ಸ್ವಲ್ಪ ಮಳೆ ಬಂದರೂ ಇಲ್ಲಿನ ರಸ್ತೆಗಳೆಲ್ಲಾ ಕೆಸರು ಗದ್ದೆಯಂತಾಗುತ್ತವೆ. ಆದರೂ ಸಹಿತ ನಗರಸಭೆ ಮಾತ್ರ ತನಗೆ ಸಂಬಂಧವೇ ಇಲ್ಲದಂತಿದೆ ವರ್ತಿಸುತ್ತಿದೆ.ಹೌದು, ವಿದ್ಯಾನಗರದ ಪಶ್ವಿಮ ಬಡವಾಣೆಯ ನಿವಾಸಿಗಳು ಈ ರಸ್ತೆಗಳಲ್ಲಿ ಸಂಚರಿಸಲು ನಿತ್ಯ ತ್ರಾಸು ಪಡುವಂತಾಗಿದೆ. ಇಲ್ಲಿಗೆ ಹೋಗೋದು ಅಂದ್ರೆ ತಂತಿಯ ಮೇಲಿನ ನಡಿಗೆಗೆ ಸಮ. ಈ ರಸ್ತೆಗಳು ಹಾಳಾಗಿ ವರ್ಷಗಳೇ ಕಳೆದರೂ ನಗರಸಭೆ ಮಾತ್ರ ದುರಸ್ತಿಪಡಿಸುವ ಗೋಚಿಗೆ ಹೋಗಿಲ್ಲ, ಕೆಲ ವರ್ಷಗಳಿಂದ ಹಾಕಿದ್ದ ಡಾಂಬರು ಕಿತ್ತು ಹೋಗಿದೆ. ರಸ್ತೆಗಳಲ್ಲಿ ದೊಡ್ಡ, ದೊಡ್ಡ ಗುಂಡಿಗಳೇ ಬಿದ್ದಿವೆ. ಮಳೆ ಬಂದರೆ ಆ ಗುಂಡಿಗಳ ಆಳವೇ ಗೊತ್ತಾಗಲ್ಲ, ಹೀಗಾಗಿ ಗುಂಡಿಗಳಲ್ಲಿ ಬೈಕ್ ಸ್ಕಿಡ್‌ಗಾಗಿ ಅನೇಕರು ಬಿದ್ದಿದ್ದಾರೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಅನೇಕ ಹಿರಿಯರು ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಕೂಡಲೇ ರಸ್ತೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ನಿವಾಸಿ ವಕೀಲರಾದ ಆನಂದ ಪಾಟೀಲ ಆಗ್ರಹಿಸಿದ್ದಾರೆ.ಡೆಂಘಿ ಭೀತಿ...ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಕಾಲುವೆಗಳು ಸಹ ಮುಚ್ಚಿಕೊಂಡಿವೆ. ಗುಂಡಿಗಳಲ್ಲಿನ ನೀರು ಚರಂಡಿಗೂ ಹರಿದು ಹೋಗುತ್ತಿಲ್ಲ, ಗುಂಡಿಗಳಲ್ಲಿ ಅನೇಕ ದಿನಗಳಿಂದ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗಿ ಕಡೆದರೆ ಡೆಂಘೀ ಜ್ವರ ಬರುವ ಭೀತಿ ಇಲ್ಲಿನ ನಿವಾಸಿಗಳದ್ದಾಗಿದೆ. ನಗರಸಭೆಗೆ ಅಧಿಕಾರಿಗಳಿಗೆ ಹಾಗೂ ವಾರ್ಡಿನ ಸದಸ್ಯರಿಗೆ ಎಷ್ಟು ಬಾರಿ ರಸ್ತೆ ದುರಸ್ತಿ ಪಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ಈಗ ಡೆಂಘೀ ಜ್ವರದ ಭಯ ಶುರುವಾಗಿದೆ. ಯಾವುದೇ ಗ್ರಾಮೀಣ ರಸ್ತೆಗಳು ಈಗ ಹೀಗೆ ಇರಲು ಸಾಧ್ಯವಿಲ್ಲ, ಬಹುತೇಕ ಗ್ರಾಮೀಣ ರಸ್ತೆಗಳು ಸುಧಾರಣೆ ಕಂಡಿವೆ. ನಾವು ನಗರಪ್ರದೇಶದಲ್ಲಿ ಇಂಥ ರಸ್ತೆಯಲ್ಲಿ ಸಂಚರಿಸುತ್ತಿದ್ದೇವೆ. ಯಾರನ್ನಾದರೂ ಮನೆಗೆ ಕರೆಯಲು ನಮಗೇ ಮುಜುಗರ ಆಗುತ್ತಿದೆ. ಕಾರಣ ಕೂಡಲೇ ವಿದ್ಯಾನಗರದ ಪಶ್ಚಿಮ ಬಡಾವಣೆಯ ರಸ್ತೆ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಕಾಂತೇಶ, ನಾಗರಾಜ, ವಿಕಾಶ ಕುಲಕರ್ಣಿ ಒತ್ತಾಯಿಸಿದ್ದಾರೆ.