ಕರ್ನಾಟಕ ಸಂಭ್ರಮದ ಅನುದಾನ ಬರುವುದು ಯಾವಾಗ?

| Published : Aug 27 2024, 01:37 AM IST

ಸಾರಾಂಶ

ಈಗಾಗಲೇ ಜಿಲ್ಲಾಡಳಿತ ತನ್ನ ಅಸಹಾಯಕತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯುವ ಮೂಲಕ ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳು ಗದಗ ಜಿಲ್ಲಾಡಳಿತ ಮನವಿಗೆ ಸ್ಪಂದಿಸುವ ಕಿಂಚಿತ್ತೂ ಇಚ್ಚಾಶಕ್ತಿ ತೋರಿಸಿಲ್ಲ.

ಶಿವಕುಮಾರ ಕುಷ್ಟಗಿ

ಗದಗ: ಕರ್ನಾಟಕ ಸಂಭ್ರಮ ಹೆಸರಲ್ಲಿ ಗದಗ ಜಿಲ್ಲಾಡಳಿತ ಅದ್ಧೂರಿ ಕಾರ್ಯಕ್ರಮ ಮಾಡಿ 10 ತಿಂಗಳು ಗತಿಸಿವೆ. ಅದಕ್ಕಾಗಿ ಅಂದು ಮಾಡಿದ ಖರ್ಚು ವೆಚ್ಚಕ್ಕಾಗಿ ಹಣವಿಲ್ಲದೇ ಗದಗ ಜಿಲ್ಲಾಡಳಿತ ಪರದಾಡುತ್ತಿದೆ.

ಈಗಾಗಲೇ ಜಿಲ್ಲಾಡಳಿತ ತನ್ನ ಅಸಹಾಯಕತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯುವ ಮೂಲಕ ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳು ಗದಗ ಜಿಲ್ಲಾಡಳಿತ ಮನವಿಗೆ ಸ್ಪಂದಿಸುವ ಕಿಂಚಿತ್ತೂ ಇಚ್ಚಾಶಕ್ತಿ ತೋರಿಸಿಲ್ಲ.

2023ರಲ್ಲಿ ಕಾರ್ಯಕ್ರಮ

ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗದಗ ಮತ್ತು ಹೊಸಪೇಟೆಯಲ್ಲಿ ನವೆಂಬರ್‌ 1,2,3, 2023ರಂದು ಕರ್ನಾಟಕ ಸಂಭ್ರಮ ಎನ್ನುವ ಹೆಸರಿನಡಿ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವ ಸಂಪುಟವೇ ಗದಗ ನಗರಕ್ಕೆ ಆಗಮಿಸಿತ್ತು. ಇದರೊಟ್ಟಿಗೆ ಮನರಂಜನಾ ಕಾರ್ಯಕ್ರಮಗಳು ಜರುಗಿದ್ದು, ಅಂದು ಪಾಲ್ಗೊಂಡಿದ್ದ ಕಲಾವಿದರಿಗೆ 10 ತಿಂಗಳು ಗತಿಸಿದರೂ ಗೌರವಧನವನ್ನು ಗದಗ ಜಿಲ್ಲಾಡಳಿತ ನೀಡುತ್ತಿಲ್ಲ. ಅಷ್ಟೇ ಅಲ್ಲ, ನಮ್ಮ ಬಳಿ ಆ ಕುರಿತು ಯಾವುದೇ ಅನುದಾನವೇ ಇಲ್ಲ ಎಂದು ಹೇಳುತ್ತಿದೆ.

ಮೇ 31ರಂದು ಪತ್ರ ರವಾನೆ

ಕರ್ನಾಟಕ ಸಂಭ್ರಮದಲ್ಲಿ ಭಾಗವಹಿಸಿದ ಕಲಾವಿದರು ಸೇರಿದಂತೆ ಹಣಕಾಸಿನ ಕೊರತೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಗದಗ ಜಿಲ್ಲಾಡಳಿತ ಕಳೆದ 8 ತಿಂಗಳಿನಿಂದ ನಿರಂತರವಾಗಿ ಪತ್ರ ವ್ಯವಹಾರ ನಡೆಸಿದ್ದು, ಈ ಪತ್ರಗಳನ್ನು ಉಲ್ಲೇಖವಾಗಿಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸರ್ಕಾರದ ಕಾರ್ಯದರ್ಶಿಗಳಿಗೆ ಮೇ 31ರಂದೇ ಪತ್ರ ಬರೆದು ಹೆಚ್ಚುವರಿಯಾಗಿ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಬೇಕು. ಇದಕ್ಕಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿರುವ ಬಗ್ಗೆ ತಿಳಿಸಿ 3 ತಿಂಗಳುಗಳೇ ಕಳೆದಿದೆ. ಆದರೆ, ಒಂದು ರುಪಾಯಿ ಅನುದಾನವೂ ಇದುವರೆಗೂ ಬಿಡುಗಯಾಗಿಲ್ಲ.

ಪತ್ರದಲ್ಲೇನಿದೆ

ಗದಗ ಜಿಲ್ಲಾಡಳಿತ ಹೆಚ್ಚುವರಿಯಾಗಿ ಮಾಡಿದ ಖರ್ಚು ವರ್ಚಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ನವೆಂಬರ್ 1ರಿಂದ 3ರ ವರೆಗೆ ನಡೆದ ಕಾರ್ಯಕ್ರಮದ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರ ಬಸ್ ಸಂಚಾರದ ₹33,67,755. ಪತ್ರಿಕೆಗಳಿಗೆ ನೀಡಿದ ಜಾಹೀರಾತುಗಳ ಬಾಕಿ ₹49,24,000 ಹಾಗೂ ಊಟ ಸೇರಿದಂತೆ ಇನ್ನಿತರೆ ಖರ್ಚಿನ ಹಣ ₹59,00,000 ಸೇರಿದಂತೆ ಒಟ್ಟು ₹1,41,91,755 ಬಿಡುಗಡೆ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವಂತೆ ಗದಗ ಜಿಲ್ಲಾಡಳಿತ ಹಲವಾರು ಬಾರಿ ಮನವಿ ಮಾಡಿದೆ. ಎಲ್ಲ ಅಗತ್ಯ ದಾಖಲೆಗಳ ಸಮೇತ ಫೈಲ್‌ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಬಳಿ ಇವೆಯಂತೆ. ಆದರೆ, ಅದ್ಯಾವ ಕಾರಣಕ್ಕೆ ಇಲಾಖೆ ಸಚಿವರು ಹಣ ಬಿಡುಗಡೆ ಮಾಡುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಆದರೆ, ಜಿಲ್ಲೆಯ ಕಲಾವಿದರ ವಲಯದಲ್ಲಿ ಬೇರೆಯದ್ದೇ ಚರ್ಚೆ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ನಿಗದಿಯಾದ ಹಣಕ್ಕಿಂತ ಹೆಚ್ಚುವರಿ ಖರ್ಚು ಮಾಡಿದ ಹಿನ್ನೆಲೆಯಲ್ಲಿ ಆ ಹಣವನ್ನು ಬಿಡುಗಡೆ ಮಾಡಬೇಕಾದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರೇ ಇಲಾಖೆ ಸಚಿವರೊಂದಿಗೆ ಚರ್ಚಿಸಬೇಕಿದೆ. ಆದರೆ, ಅದು ಮಾತ್ರ ಆಗುತ್ತಿಲ್ಲ. ಹಾಗಾಗಿ, ಈ ಹಣ ಬಿಡುಗಡೆಯಾಗುತ್ತಿಲ್ಲ. ಇದು ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ ಎನ್ನುವುದಂತೂ ಸುಳ್ಳಲ್ಲ. ಸರ್ಕಾರಕ್ಕೆ ಪತ್ರ

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹೆಚ್ಚಿನ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಂದ ಪಡೆದುಕೊಳ್ಳಿ.

ವೀರಯ್ಯಸ್ವಾಮಿ. ಬಿ. ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ

ಸರಿಹೋಗಲಿದೆ

ಗದಗ ಜಿಲ್ಲಾಧಿಕಾರಿಗಳಿಂದ ಪತ್ರ ಬಂದಿದೆ. ಅದಕ್ಕೆ ಮಂಜೂರಾತಿ ನೀಡಲಾಗಿದೆ. ನಾಲ್ಕೈದು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ...

ಶಿವರಾಜ ತಂಗಡಗಿ. ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು.