ಕೊಳವೆ ಬಾವಿ ದುರಂತಕ್ಕೆ ಮುಕ್ತಿ ಯಾವಾಗ?

| Published : Apr 04 2024, 01:08 AM IST / Updated: Apr 04 2024, 10:45 AM IST

ಸಾರಾಂಶ

  ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟವೊಂದರಲ್ಲಿ ಆಟವಾಡುತ್ತಾ ಮಗುವೊಂದು ಕೊಳವೆ ಬಾವಿಗೆ ಬಿದ್ದಿದೆ. ಆದರೆ, ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.

ಶಶಿಕಾಂತ ಮೆಂಡೆಗಾರ

 ವಿಜಯಪುರ :  ರಾಜ್ಯದಲ್ಲಿ ಆಗಾಗ ಕೊಳವೆಬಾವಿಗಳಿಗೆ ಮಕ್ಕಳ ಬಿದ್ದ ಘಟನೆಗಳು ಸಂಭವಿಸುತ್ತಲೇ ಇವೆ. ಹೀಗಾದಾಗ ಮಾತ್ರ ಸರ್ಕಾರ, ಸಂಘ-ಸಂಸ್ಥೆಗಳು, ಜನರು ಎಚ್ಚೆತ್ತು ಕೊಳವೆಬಾವಿಗಳನ್ನು ಮುಚ್ಚಲು ಆಂದೋಲನಗಳನ್ನು ಕೈಗೊಳ್ಳುತ್ತಾರೆ. ನಂತರ ಇದರ ಬಗ್ಗೆ ಚಕಾರವೇ ಎತ್ತುವುದಿಲ್ಲ. ಹೀಗಾಗಿಯೇ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟವೊಂದರಲ್ಲಿ ಆಟವಾಡುತ್ತಾ ಮಗುವೊಂದು ಕೊಳವೆ ಬಾವಿಗೆ ಬಿದ್ದಿದೆ. ಆದರೆ, ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಎರಡು ಕೊಳವೆಬಾವಿ ದುರಂತಗಳು ಸಂಭವಿಸಿವೆ. ಈ ಎರಡು ಪ್ರಕರಣಗಳಲ್ಲಿ ಇಬ್ಬರು ಬಾಲಕಿಯರು ಬದುಕಿ ಬಂದಿರಲಿಲ್ಲ. 2008 ಸೆಪ್ಟೆಂಬರ್‌ನಲ್ಲಿ ಇಂಡಿ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಕಾಂಚನಾ(ಏಗವ್ವ) ಎಂಬ ಬಾಲಕಿ ಆಟವಾಡುತ್ತ ಹೋಗಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಮೂರು ದಿನಗಳ ಕಾರ್ಯಾಚರಣೆ ನಡೆದರೂ ಬಾಲಕಿ ಬದುಕಿ ಬರಲಿಲ್ಲ. 2017 ಜೂನ್ 17ರಂದು ವಿಜಯಪುರ ತಾಲೂಕಿನ ದ್ಯಾಬೇರಿಯಲ್ಲಿ ಅಕ್ಷತಾ ಎಂಬ 3 ವರ್ಷದ ಬಾಲಕಿ ಅಟ್ಟಿಸಿಕೊಂಡು ಬಂದ ಶ್ವಾನದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕೊಳವೆಬಾವಿಗೆ ಬಿದ್ದಿದ್ದಳು. ಆವಾಗಲೂ ಅಕ್ಷತಾಳನ್ನು ಕಾಪಾಡಲು ಸಾಕಷ್ಟು ಕಸರತ್ತು ನಡೆಸಿದರೂ ಬಾಲಕಿ ಮಾತ್ರ ಬದುಕಿ ಬರಲಿಲ್ಲ.

ಇದೀಗ ಬೇಸಿಗೆ ಸಮಯದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲೆಂದು ಜಮೀನಿನಲ್ಲಿ ಕೊರೆದ ಬೋರ್‌ವೇಲ್‌ನಲ್ಲಿ ಸಂಜೆಯ ವೇಳೆ ಮಗುವೊಂದು ಬಿದ್ದು ದುರಂತ ಸಂಭವಿಸಿರುವ ಘಟನೆ ಇಂಡಿ ತಾಲೂಕಿನ ಲಚ್ಯಾಣದಲ್ಲಿ ನಡೆದಿದೆ. ಲಚ್ಯಾಣ ತೋಟದ ವಸತಿಯಲ್ಲಿರುವ ಸತೀಶ ಮುಜಗೊಂಡ ಎಂಬುವವರ ತೋಟದಲ್ಲಿ ಅವಘಡ ನಡೆದಿದ್ದು, ಸತೀಶ-ಪೂಜಾ ದಂಪತಿ ಎರಡು ವರ್ಷದ ಕಂದಮ್ಮ ಸಾತ್ವಿಕ ಕೊಳವೆಬಾವಿಗೆ ಬಿದ್ದಿದೆ.

ಈ ಬಾರಿಯ ಭೀಕರ ಬರದಿಂದಾಗಿ ಜಮೀನಿನಲ್ಲಿದ್ದ ಲಿಂಬೆ ಹಾಗೂ ಕಬ್ಬಿನ ಬೆಳೆಗಳು ಒಣಗುತ್ತಿದ್ದ ಹಿನ್ನೆಲೆ ಅವುಗಳನ್ನು ಉಳಿಸಿಕೊಳ್ಳಬೇಕೆಂದು ಬುಧವಾರ ನಸುಕಿನ ಜಾವ ಸತೀಶ ಮುಜಗೊಂಡ ತಮ್ಮದೇ ಜಮೀನಿನಲ್ಲಿ 180 ಅಡಿ ಬೋರ್‌ವೆಲ್ ಕೊರೆಸಿದ್ದರು. ಈ ವೇಳೆ ಅದರಲ್ಲಿ ಏರ್ ಪಾಸ್ ಆಗಿದ್ದು, ನೀರು ಸಿಗದ ಕಾರಣ ಅಷ್ಟಕ್ಕೆ ಕೈ ಬಿಡಲಾಗಿತ್ತು. ಬಳಿಕ ಪಕ್ಕದಲ್ಲೇ ಮತ್ತೊಂದು ಬೋರ್‌ವೆಲ್ ಕೊರೆಸಲಾಗಿದ್ದು, ಅದರಲ್ಲಿ ನೀರು ಬಂದಿದೆ. ಹಾಗಾಗಿ ಅದರಲ್ಲಿನ ನೀರಿನ ಪ್ರಮಾಣ ತಪಾಸಣೆ ಮಾಡಿದ ಬಳಿಕ ಪಂಪ್‌ಸೆಟ್ ಅಳವಡಿಸಬೇಕು ಎಂದು ಬಿಡಲಾಗಿತ್ತು. ಮಧ್ಯಾಹ್ನದವರೆಗೂ ಬೋರ್‌ವೆಲ್ ಕೆಲಸದಲ್ಲೇ ಬ್ಯುಸಿಯಾಗಿದ್ದ ಮನೆಯವರು ಹಾಗೂ ಕೆಲಸದವರು ನೀರು ಬಾರದೇ ಉಳಿದಿದ್ದ ಖಾಲಿ ಬೋರ್‌ವೆಲ್ ಮೇಲೆ ಮುಚ್ಚಳ ಮುಚ್ಚದೆ ಸಂಜೆಯ ವೇಳೆಗೆ ಮನೆಗೆ ಬಂದಿದ್ದಾರೆ. ಅಲ್ಲಿಯೇ ಆಟವಾಡುತ್ತಿದ್ದ ಮಗು ಕೊಳವೆಬಾವಿಯ ಬಳಿ ಹೋಗಿ ಆಕಸ್ಮಿಕವಾಗಿ ಬಿದ್ದಿದೆ.

ರಕ್ಷಣಾ ಕಾರ್ಯಾಚರಣೆ:

ಮಗು ಕೊಳವೆಬಾವಿಗೆ ಬಿದ್ದಿರುವ ಮಾಹಿತಿ ಗೊತ್ತಾದ ತಕ್ಷಣವೇ ಜಿಲ್ಲಾಧಿಕಾರಿ ಟಿ ಭೂಬಾಲನ್ ಹಾಗೂ ಎಸ್.ಪಿ.ಋಷಿಕೇಶ ಸೋನಾವಣೆ, ಸಿಇಒ ರಿಶಿ ಆನಂದ ಸೇರಿದಂತೆ ಎಲ್ಲ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದೆ. ಪ್ರಾಥಮಿಕ ಹಂತದಲ್ಲಿ ಕೊಳವೆಬಾವಿಗೆ ಆಕ್ಸಿಜನ್ ಪೂರೈಕೆ ಹಾಗೂ ಜೆಸಿಬಿ ಮೂಲಕ ಸ್ಥಳ ಅಗೆಯುವ ಕೆಲಸ ಶುರು ಮಾಡಿದೆ. ಮಗುವಿನ ರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಲಬುರಗಿಯಿಂದ ರಾಜ್ಯ ವಿಪತ್ತು ನಿರ್ವಹಣಾ ತಂಡ ಆಗಮಿಸಿದೆ.

ರಾಜ್ಯಾದ್ಯಂತ ನಡೆದ ದುರಂತಗಳು

-2014 ಅಗಸ್ಟ್ 4ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಆಟವಾಡುತ್ತ 350 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಿದ್ದು, ಆತನೂ ಬದುಕಿರಲಿಲ್ಲ. 2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲಿ ಕೊಳವೆಬಾವಿಯಲ್ಲಿ 20 ವರ್ಷದ ಕಲ್ಲವ್ವ ಎಂಬಾಕೆ ಜಮೀನಿಗೆ ಹೋಗುವಾಗ ಕೊಳವೆಬಾವಿಗೆ ಬಿದ್ದಿದ್ದು, ಸುರಂಗಮಾರ್ಗ ಕೊರೆದು ಆಕೆಯನ್ನು ಬದುಕಿಸಲಾಗಿತ್ತು. 2017 ಏಪ್ರಿಲ್ 23 ರಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದಲ್ಲಿ ತಾಯಿಯೊಂದಿಗೆ ಕಟ್ಟಿಗೆ ತರಲು ಹೋಗಿದ್ದ ವೇಳೆ 4 ವರ್ಷದ ಬಾಲಕಿ ಕಾವೇರಿ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಸತತ ನಾಲ್ಕು ದಿನಗಳ ವರೆಗೆ ಕಾರ್ಯಾಚರಣೆ ನಡೆಸಿದರೂ ಸಹ ಬಾಲಕಿ ಬದುಕಿ ಬರಲಿಲ್ಲ. 2000ನೇ ಇಸ್ವಿಯಲ್ಲಿ ದಾವಣಗೆರೆಯಲ್ಲಿ ಕರಿಯ ಎಂಬ ಬಾಲಕ ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದ್ದ, ಸಾಕಷ್ಟು ಪ್ರಯತ್ನಿಸಿದರೂ ಆತನೂ ಸಹ ಬದುಕಿರಲಿಲ್ಲ. 2007 ಏಪ್ರಿಲ್ 27 ರಂದು ರಾಯಚೂರಿನ ಮಾನ್ವಿಯ ನೀರಮಾನವಿಯಲ್ಲಿ ಸಂದೀಪ್ ಎನ್ನುವ ಬಾಲಕ ತೆರೆದ ಕೊಳವೆಬಾವಿಯೊಳಗೆ ಬಿದ್ದದ್ದು, ಮೂರು ದಿನಗಳ ಕಾರ್ಯಾಚರನೆ ನಡೆದರೂ ಆತ ಬದುಕಿರಲಿಲ್ಲ.

ಬೆಳಿಗ್ಗೆ 9 ಗಂಟೆಯವರೆಗೂ ಬೋರ್‌ವೆಲ್ ಕೊರೆದಿದ್ದು, ಅದನ್ನು ಪರಿಶೀಲಿಸಿ ಮುಚ್ಚಿಸಬೇಕು ಎಂದುಕೊಂಡಿದ್ದೆವು. ಅಷ್ಟರೊಳಗೆ ನಮ್ಮ ಮೊಮ್ಮಗು ಸಾತ್ವಿಕ ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದು ಅನಾಹುತ ಆಗಿದೆ.

-ಶಂಕ್ರೆಪ್ಪ ಮುಜಗೊಂಡ, ಮಗುವಿನ ಅಜ್ಜ.

---

ಕೊಳವೆ ಬಾವಿಗೆ ಮಗು ಬಿದ್ದಿರುವ ಘಟನೆಯನ್ನು ಕೇಳಿ ನನಗೂ ದಿಗ್ಭ್ರಮೆಯಾಗಿದೆ. ಮಗುವನ್ನು ರಕ್ಷಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಇಡಿ ಅಧಿಕಾರಿ ವರ್ಗವೇ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಮಗುವನ್ನು ಖಂಡಿತವಾಗಿ ರಕ್ಷಿಸಲಾಗುತ್ತದೆ.

-ಎಂ.ಬಿ.ಪಾಟೀಲ್ ಉಸ್ತುವಾರಿ ಸಚಿವ.