ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಪ್ರಾರಂಭ ಯಾವಾಗ?

| Published : Feb 08 2024, 01:33 AM IST

ಸಾರಾಂಶ

ಸ್ವಾತಂತ್ರದ ಪೂರ್ವದಲ್ಲಿಯೇ ಈ ಭಾಗಕ್ಕೆ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಂದಿನ ಬ್ರಿಟಿಷರು ಆಲಮಟ್ಟಿ-ಯಾದಗಿರಿ ರೈಲು ಮಾರ್ಗಕ್ಕೆ ನೀಲನಕ್ಷೆ ತಯಾರಿಸಿದ್ದ ಯೋಜನೆ ಇದು. ಪ್ರಸ್ತುತ ಕೇಂದ್ರ ಸರ್ಕಾರ ಸ್ಪಂದಿಸದೇ ಇರುವುದರಿಂದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರರ ಚೈತನ್ಯವನ್ನು ಕುಗ್ಗಿಸುವುದು ಮಾತ್ರವಲ್ಲದೇ ಯೋಜನೆ ಬರಿ ಕನಸಾಗಿಯೇ ಉಳಿದಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸ್ವಾತಂತ್ರದ ಪೂರ್ವದಲ್ಲಿಯೇ ಈ ಭಾಗಕ್ಕೆ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಂದಿನ ಬ್ರಿಟಿಷರು ಆಲಮಟ್ಟಿ-ಯಾದಗಿರಿ ರೈಲು ಮಾರ್ಗಕ್ಕೆ ನೀಲನಕ್ಷೆ ತಯಾರಿಸಿದ್ದ ಯೋಜನೆ ಇದು. ಪ್ರಸ್ತುತ ಕೇಂದ್ರ ಸರ್ಕಾರ ಸ್ಪಂದಿಸದೇ ಇರುವುದರಿಂದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರರ ಚೈತನ್ಯವನ್ನು ಕುಗ್ಗಿಸುವುದು ಮಾತ್ರವಲ್ಲದೇ ಯೋಜನೆ ಬರಿ ಕನಸಾಗಿಯೇ ಉಳಿದಿದೆ.

ಚುನಾವಣೆ ಬಂದಾಗ ನೆನಪಾಗುವ ಯೋಜನೆಗಳು ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಮರೆಯಾಗುತ್ತಿವೆ. ತಮ್ಮನ್ನು ಗೆಲ್ಲಿಸಿದ ಮತದಾರರು ಎಲ್ಲಿದ್ದಾರೆ ಅವರ ಬೇಡಿಕೆಗಳೇನು? ಎಂಬುವುದನ್ನು ಗ್ರಹಿಸದ ಜನಪ್ರತಿನಿಧಿಗಳಿಂದ ಅಭಿವೃದ್ಧಿ ಕಾಣಲು ಸಾಧ್ಯವೆ ಎಂಬ ಪ್ರಶ್ನೇ ಇದೀಗ ಜನರದ್ದಾಗಿದೆ. ೧೯೩೩ರ ಜ.೧ರಂದು ಅಂದಿನ ದಿ ಗ್ರೇಡ್ ರೈಲ್ ರೋಡ್‌ ಫೀಡರ್ ಲೈನ್ಸ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಿ. ಸ್ಕೆಲ್ಟನ್ ಅವರು ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದರು. ಈ ಭಾಗದ ಬಹುತೇಕ ಮುಖಂಡರನ್ನು ಮಂಡಳಿಗೆ ನೇಮಕ ಮಾಡಿ ಆದೇಶ ಕೂಡ ಮಾಡಿದರು ಎಂದು ದಾಖಲೆಗಳು ಹೇಳುತ್ತಿವೆ.

ಏನೇ ಆಗಲಿ ೧೫೪ ಕಿಮೀಗಳ ಈ ರೈಲು ಮಾರ್ಗ ಪ್ರಾರಂಭಿಸಲೇಬೇಕೆಂದು ನಿರ್ಧರಿಸಿ ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಲೇ ಆಯಾ ಸಂದರ್ಭದಲ್ಲಿ ಅಂದಿನ ಯುಪಿಎ ಸರ್ಕಾರವಾಗಲಿ, ಹಾಲಿ ಎನ್‌ಡಿಎ ಸರ್ಕಾರವಾಗಲಿ ಪ್ರತಿವರ್ಷ ರೈಲ್ವೆ ಬಜೆಟ್‌ ವೇಳೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸಚಿವರಿಗೆ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸುವ ಕಾರ್ಯ ಮಾತ್ರ ನಿಂತಿಲ್ಲ. ಆದರೆ, ಕಳೆದ ಬಾರಿಯ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಈ ಯೋಜನೆಗೆ ಚಾಲನೆ ನೀಡಬಹುದು ಎಂದು ಬಹುನಿರೀಕ್ಷೆ ಕೂಡ ಸುಳ್ಳಾಯಿತು.

ಕಳೆದ ೨೦೧೯ರಲ್ಲಿ ದೇಶದೆಲ್ಲೆಡೆ ಮೋದಿ ಅಲೆಯಲ್ಲಿ ಸಂಪೂರ್ಣ ಬಿಜೆಪಿ ಗೆಲ್ಲುವ ಮೂಲಕ ಸ್ವತಂತ್ರವಾಗಿ ಅಧಿಕಾರದ ಗದ್ದುಗೆ ಹಿಡಿದು ಸದ್ಯ ಸಂಪೂರ್ಣ 5 ವರ್ಷ ಕೊನೆಗೊಳ್ಳುತ್ತಿದೆ. ಸದ್ಯ ೨೦೨೪ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯ ಕಾಲ ಸನ್ನಹಿತವಾಗಿದೆ. ಅದರಂತೆ ವಿಜಯಪುರ ಮತಕ್ಷೇತ್ರದಿಂದ ಈ ಬಾರಿಯೂ ರಮೇಶ ಜಿಗಜಿಣಗಿ ಹಾಟ್ರಿಕ್‌ ಗೆಲುವು ಸಾಧಿಸಿದರು. ಈಗಲಾದರೂ ಮುದ್ದೇಬಿಹಾಳ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಮತ್ತು ಜನರ ಅವಶ್ಯಕ ಬೇಡಿಕೆಯಾಗಿದ್ದ ಆಲಮಟ್ಟಿ- ಯಾದಗಿರಿ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಸದನದಲ್ಲಿ ಧ್ವನಿ ಎತ್ತುವ ಮೂಲಕ ಸ್ವಾತಂತ್ರ್ಯ ಪೂರ್ವದಿಂದ ರೈಲ್ವೆ ಕನಸು ನನಸು ಮಾಡುವಲ್ಲಿ ಮನಸ್ಸು ಮಾಡಬೇಕು ಎಂದು ಜನರು ಒತ್ತಾಸೆಯಾಗಿದೆ.

ಜತೆಗೆ ಈ ಭಾಗದ ಜನರ ಅತ್ಯವಶ್ಯಕ ಬೇಡಿಕೆಗಳೊಂದಾದ ಆಲಮಟ್ಟಿ ಯಾದಗಿರಿ ರೈಲು ಮಾರ್ಗ ಪ್ರಾರಂಭಿಸಲು ಸಂಸದರು ಪ್ರಯತ್ನ ಮಾಡಬೇಕು. ಈ ಮೂಲಕ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವಾಗಬೇಕಿದೆ. ದಶಕಗಳ ಬೇಡಿಕೆ ಈಡೇರಿಕೆಗೆ ಬಹಳ ಶ್ರಮಪಡಬೇಕಿದೆ. ಇದರಿಂದಾಗಿ ಈ ಭಾಗದ ಬಹುತೇಕ ರೈತರಿಗೆ ಮತ್ತು ಜನಸಾಮನ್ಯರಿಗೆ ಸುಲಭ ಸಂಚಾರಕ್ಕೆ ಸರಕು ಸಾಗಾಟಕ್ಕೆ ತುಂಬಾ ಅನುಕೂಲವಾಗಲಿದೆ. ಇನ್ನಾದರೂ ರೈಲ್ವೆ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎನ್ನುವುದು ಜನಾಭಿಪ್ರಾಯ.

-------------

೨೦೦೯ ಮತ್ತು ೨೦೧೧ ರಲ್ಲಿನ ಅಂದಿನ ಕೇಂದ್ರ ರಾಜ್ಯ ರೈಲ್ವೆ ಸಚಿವರಿಗೆ ಮುದ್ದೇಬಿಹಾಳದ ಆಲಮಟ್ಟಿ ಯಾದಗಿರಿ ರೈಲ್ವೆ ಹೋರಾಟ ಸಮಿತಿಯ ಸುಮಾರು ೨೦ ಜನ 2 ಬಾರಿ ದೆಹಲಿಗೆ ನಿಯೋಗ ತೆರಳಿ ಅಂದಿನ ಕೇಂದ್ರ ರಾಜ್ಯ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪನವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸಚಿವರು ತಕ್ಷಣವೇ ಸ್ಪಂದಿಸಿದರಲ್ಲದೇ ವಿಶೇಷ ಘೋಷಣೆ ಮಾಡಿ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಕಾಮಗಾರಿ ಪ್ರಾರಂಭಿಸಲು ಅನುಮತಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅಷ್ಟರಲ್ಲಿ ಅಂದು ಸರ್ಕಾರ ಪತನಗೊಂಡು ಭರವಸೆ ಕೇವಲ ಭರವಸೆಯಾಗಿಯೇ ಉಳಿಯತು. ನಮ್ಮ ಬೇಡಿಕೆ ಈಡೇರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಯಾರೂ ಕೂಡ ಇದರ ಬಗ್ಗೆ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಸದ್ಯ ಈಗಲಾದರೂ ನಮ್ಮ ಬೇಡಿಕೆ ಈಡೇರಿಸುವಲ್ಲಿ ಸಂಸದರು ಮನಸು ಮಾಡಬೇಕಿದೆ.

- ವಾಸುದೇವ ಶಾಸ್ತ್ರಿ, ಗಣ್ಯ ವರ್ತಕರು ಹಾಗೂ ಆಲಮಟ್ಟಿ ಯಾದಗಿರಿ ರೈಲ್ವೆ ಹೋರಾಟ ಸಮಿತಿ ಮುಖ್ಯಸ್ಥ ಮುದ್ದೇಬಿಹಾಳ.