ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಶ್ವ ವಿಖ್ಯಾತ ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಅಳವಡಿಸಿದ್ದ ಮೆಟಲ್ ಡಿಟೆಕ್ಟರ್‌ಗಳು ಮೂಲೆ ಸೇರಿವೆ. ಉನ್ನತ ಭದ್ರತೆ ಸಾಧನ, ಸಲಕರಣೆಗಳನ್ನು ಹೊಂದಬೇಕಾದ ವಿಶ್ವಪರಂಪರೆ ತಾಣದಲ್ಲೇ ಈಗ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಇಲ್ಲದಾಗಿದೆ!
ಹೌದು, ದೇಶ-ವಿದೇಶಿ ಪ್ರವಾಸಿಗರು ಹಾಗೂ ಗಣ್ಯಾತಿಗಣ್ಯರು ಆಗಮಿಸುವ ಹಂಪಿಯಲ್ಲೇ ಈಗ ಮೆಟಲ್ ಡಿಟೆಕ್ಟರ್‌ಗಳು ಮೂಲೆ ಸೇರಿವೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ ಮತ್ತು ವಿಜಯ ವಿಠ್ಠಲ ದೇವಾಲಯದಲ್ಲಿ ಅಳವಡಿಸಿದ್ದ ಮೆಟಲ್ ಡಿಟೆಕ್ಟರ್‌ಗಳು ಈಗ ಮೂಲೆ ಸೇರಿವೆ. ಇನ್ನೂ ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್ ನಿಷ್ಕ್ರಿಯಗೊಂಡಿದೆ. ಭಾರತೀಯ ಪುರಾತತ್ವ ಇಲಾಖೆ ಅಳವಡಿಸಿದ್ದ ಈ ಡಿಟೆಕ್ಟರ್‌ಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ. ಹಂಪಿಯ ಪ್ರಮುಖ ಸ್ಮಾರಕಗಳು ಮತ್ತು ದೇವಾಲಯಗಳಲ್ಲಿ ಅತ್ಯಾಧುನಿಕ ಭದ್ರತಾ ಸಾಧನಗಳನ್ನು ಅಳವಡಿಸಬೇಕೆಂಬ ಬೇಡಿಕೆಯಂತೆ ಈ ಹಿಂದೆ ಅಳವಡಿಕೆ ಮಾಡಲಾಗಿತ್ತು. ಆದರೆ, ಈಗ ಹಾಳಾಗಿವೆ.ಗಣ್ಯಾತಿಗಣ್ಯರು ಭೇಟಿ:
ಹಂಪಿಗೆ ದೇಶ-ವಿದೇಶಿ ಪ್ರವಾಸಿಗರು ಹಾಗೂ ಗಣ್ಯಾತಿಗಣ್ಯರು ಭೇಟಿ ನೀಡುತ್ತಾರೆ. ಈ ಹಿಂದೆ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭೇಟಿ ನೀಡಿದ್ದರು. ಜತೆಗೆ ಆಗಿನ ಉಪ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕೂಡ ಹಂಪಿ ವೀಕ್ಷಣೆಗೆ ಆಗಮಿಸಿದ್ದರು. ಈಚೆಗೆ ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ವಿವಿಧ ದೇಶಗಳ ರಾಯಭಾರಿಗಳು ಕೂಡ ಹಂಪಿಗೆ ಭೇಟಿ ನೀಡಿದ್ದರು. ಈಗ ಹಲವು ರಾಜ್ಯಗಳ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಕೂಡ ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಅವರ ಭದ್ರತೆ ಕ್ರಮಕ್ಕೆ ಮತ್ತು ದೇಶ-ವಿದೇಶಿ ಪ್ರವಾಸಿಗರ ಭದ್ರತೆಗೆ ಅಳವಡಿಸಿದ್ದ ಮೆಟಲ್ ಡಿಟೆಕ್ಟರ್‌ಗಳೇ ಈಗ ನಿಷ್ಕ್ರಿಯಗೊಂಡಿವೆ.ನ. 2ರಂದು ಸಿಎಂ ಆಗಮನ:
ನ. 2ರಂದು ಹಂಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜತೆಗೆ ಸಚಿವರ ದಂಡು ಹರಿದು ಬರಲಿದೆ. ಹೀಗಿದ್ದರೂ ಹಂಪಿಯಲ್ಲಿ ಶಾಶ್ವತವಾಗಿ ಭದ್ರತೆಗೆ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿಲ್ಲ. ಭಾರತೀಯ ಪುರಾತತ್ವ ಇಲಾಖೆ ಈ ಡಿಟೆಕ್ಟರ್‌ಗಳು ಹಾಳಾಗಿದ್ದರೂ ಅವುಗಳನ್ನು ರಿಪೇರಿ ಮಾಡಿಸಿಲ್ಲ.12 ಶಸ್ತ್ರಧಾರಿ ಗಾರ್ಡ್‌ಗಳಿಗೆ ಕೊಕ್!
ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಜತೆಗೆ ಮಾಡಿಕೊಂಡ ಒಡಂಬಡಿಕೆಯಂತೆ 12 ಜನ ಶಸ್ತ್ರಧಾರಿ ಗಾರ್ಡ್‌ಗಳನ್ನು ಸೆಕ್ಯೂರಿಟಿ ಏಜೆನ್ಸಿಯೊಂದು ನಿಯೋಜನೆ ಮಾಡಿತ್ತು. ಆದರೆ. ಈಗ ಏಕಾಏಕಿ ಈ ಶಸ್ತ್ರಧಾರಿಗಳನ್ನು ಕೊಕ್ ನೀಡಲು ಸೂಚನೆ ನೀಡಿದೆ. ಹಾಗಾಗಿ ಅವರನ್ನು ಕೆಲಸ ಬಿಡಿಸಲಾಗಿದೆ. ಹಂಪಿಯಲ್ಲಿ ನಿಧಿ ಚೋರರ ಹಾವಳಿ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಮತ್ತು ಗಣ್ಯರ ಭದ್ರತೆಗೆ ಈ ಶಸ್ತ್ರಧಾರಿ ಗಾರ್ಡ್‌ಗಳನ್ನುನಿಯೋಜನೆ ಮಾಡಲಾಗುತ್ತಿತ್ತು. ಹಂಪಿಯಲ್ಲಿ ಈಗ 68 ಸೆಕ್ಯೂರಿಟಿ ಗಾರ್ಡ್‌ಗಳನ್ನು ಸರದಿಯಂತೆ ನಿಯೋಜನೆ ಮಾಡಲಾಗುತ್ತಿದೆ. ಈ ಗಾರ್ಡ್‌ಗಳ ಬಳಿ ಬಂದೂಕು ಇಲ್ಲ. ಬಂದೂಕುರಹಿತ ಗಾರ್ಡ್‌ಗಳ ಮೇಲೆಯೇ ಪುರಾತತ್ವ ಇಲಾಖೆ ಹಂಪಿಯಲ್ಲಿ ಭದ್ರತೆ ಕೈಗೊಂಡಿದೆ.ಹಂಪಿಯಲ್ಲಿ ಈ ಹಿಂದೆ ಡಿವೈಎಸ್ಪಿ ಕಚೇರಿಯೂ ಇತ್ತು. ಈಗ ಈ ಕಚೇರಿಯನ್ನು ಹೊಸಪೇಟೆಯಲ್ಲಿ ವಿಲೀನ ಮಾಡಲಾಗಿದೆ. ಹಂಪಿಯಲ್ಲಿ ಪ್ರವಾಸಿ ಪೊಲೀಸ್ ಠಾಣೆ ಇದೆ. ಈ ಠಾಣೆ ಸಿಬ್ಬಂದಿ ಮೇಲೆಯೇ ಪುರಾತತ್ವ ಇಲಾಖೆ ಅವಲಂಬಿತವಾಗಿದೆ. ಹಂಪಿಗೆ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಹಂಪಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವೂ ಆಗಿದೆ.ಹಂಪಿಯಲ್ಲಿ ಪ್ರಮುಖ ಸ್ಮಾರಕಗಳ ಬಳಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಮೆಟಲ್ ಡಿಟೆಕ್ಟರ್‌ಗಳು ಹಾಳಾಗಿದ್ದು, ದುರಸ್ತಿಗೊಳಿಸಲಾಗುವುದು. ಕೇಂದ್ರ ಕಚೇರಿ ಸೂಚನೆ ಹಿನ್ನೆಲೆಯಲ್ಲಿ 12 ಶಸ್ತ್ರಧಾರಿ ಗಾರ್ಡ್‌ಗಳನ್ನು ವಾಪಸ್ ಕಳುಹಿಸಲಾಗಿದೆ. 68 ಜನ ಸೆಕ್ಯೂರಿಟಿ ಗಾರ್ಡ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಭಾರತೀಯ ಪುರಾತತ್ವ ಇಲಾಖೆ ಹಂಪಿ ವಲಯ ಅಧಿಕಾರಿ ನಿಹಿಲ್ ದಾಸ್ ಹೇಳುತ್ತಾರೆ.