ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಪಂ ಕಚೇರಿ ಮುಂಭಾಗದ ಮುಖ್ಯ ರಸ್ತೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

2025-26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಡಿ ₹22 ಲಕ್ಷ ವೆಚ್ಚದಲ್ಲಿ ಕೆಆರ್‌ಐಡಿಎಲ್ ಅನುಷ್ಠಾನ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿ ಆರಂಭವಾಗಿ ಎರಡು ವಾರ ಕಳೆದರೂ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ರಸ್ತೆ ಕಾಮಗಾರಿಗಾಗಿ ರಸ್ತೆ ಅಗೆದು, ಸಣ್ಣಪುಟ್ಟ ಕಡಿ ಹಾಕಿರುವುದರಿಂದ ಪಾದಚಾರಿ ಹಾಗೂ ವಾಹನ ಸವಾರರಿಗೆ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.

ಮುಖ್ಯ ಮಾರ್ಗ: ಶುಕಮುನಿಸ್ವಾಮಿ ದೇವಸ್ಥಾನ, ಬನಶಂಕರಿದೇವಿ ದೇವಸ್ಥಾನ ಹಾಗೂ ಜಾಮಿಯಾ ಮಸೀದಿಗೆ ತೆರಳುವ ಪ್ರಮುಖ ಮಾರ್ಗ ಇದಾಗಿದೆ. ಪ್ರತಿನಿತ್ಯ ದೇವಸ್ಥಾನಗಳಿಗೆ ಪೂಜೆ, ದರ್ಶನಕ್ಕಾಗಿ ತೆರಳುವ ಭಕ್ತರು ಹಾಗೂ ಮಸೀದಿಗೆ ನಮಾಜ್‌ಗಾಗಿ ತೆರಳುವ ಸಾರ್ವಜನಿಕರು ಇದೇ ರಸ್ತೆ ಬಳಸುತ್ತಾರೆ. ಕಳೆದ ಎರಡು ವಾರಗಳಿಂದ ಕಾಮಗಾರಿ ನಡೆಯುತ್ತಿದ್ದರೂ ರಸ್ತೆ ನಿರ್ಮಾಣದ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಮುನ್ನಡೆಯುತ್ತಿಲ್ಲ.

ಸೂಚನಾ ಫಲಕ ಎಲ್ಲಿದೆ?: 2025-26ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಡಿ ₹22 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿ ಸ್ಥಳದಲ್ಲಿ ಯೋಜನೆಯ ಹೆಸರು, ಮಂಜೂರಾದ ಅನುದಾನ, ಅಂದಾಜು ಮೊತ್ತ, ಕಾಮಗಾರಿ ಆರಂಭ ಹಾಗೂ ಪೂರ್ಣಗೊಳಿಸುವ ಅವಧಿ ಸೇರಿದಂತೆ ಅಗತ್ಯ ವಿವರ ಒಳಗೊಂಡ ಸೂಚನಾ ಫಲಕ ಅಳವಡಿಸದಿರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.


ದೋಟಿಹಾಳದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗುವುದು ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.

ಕಾಂಕ್ರೀಟ್ ಹಾಕುವ ಕೆಲಸಗಾರರು ಬೇರೆ ಕಡೆ ಹೋಗಿರುವ ಪರಿಣಾಮ ದೋಟಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಗುರುವಾರದಿಂದ ಕಾಮಗಾರಿ ಪುನರಾರಂಭಿಸಲಾಗುವುದು ಎಂದು ಕೆಆರ್‌ಐಡಿಎಲ್ ಎಂಜಿನಿಯರ್ ಇರ್ಫಾನ್ ತಿಳಿಸಿದ್ದಾರೆ.