ಹಾನಗಲ್ಲಿಗೆ ಒಳಚರಂಡಿ ವ್ಯವಸ್ಥೆ ಯಾವಾಗ?

| Published : May 25 2025, 02:09 AM IST

ಸಾರಾಂಶ

ಹಾನಗಲ್ಲದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಗಟಾರದ ನೀರು ರಸ್ತೆಗೆ ಹರಿದು ಜನರಿಗೆ ಸಮಸ್ಯೆಯಾಗುತ್ತಿದೆ. ಹಾನಗಲ್ಲದಲ್ಲಿ ಒಳಚರಂಡಿ ನಿರ್ಮಿಸಬೇಕು ಎಂಬ 20 ವರ್ಷಗಳ ಬೇಡಿಕೆ ಈ ವರೆಗೂ ಈಡೇರಿಲ್ಲ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ಪಟ್ಟಣದಲ್ಲಿ ಒಳಚರಂಡಿ ನಿರ್ಮಿಸಬೇಕು ಎಂಬ ಬೇಡಿಕೆ 20 ವರ್ಷಗಳಾದರೂ ಈಡೇರಿಲ್ಲ.

ಮಳೆಗಾಲ ಆರಂಭವಾಗುತ್ತಿದ್ದಂತೆ ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ಸಮಸ್ಯೆ ಪರಿಹಾರಕ್ಕೆ ಒಳ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಕುರಿತು ಚರ್ಚೆ ಮಾತ್ರ ಆಗುತ್ತಿದೆ. ಇದಕ್ಕೆ ₹೨೦ ಕೋಟಿ ಬೇಕೆಂಬ ಅಂದಾಜು ಕಡತಗಳಲ್ಲೇ ಉಳಿದಿದೆ.

೪೦ ಸಾವಿರ ಜನಸಂಖ್ಯೆ ಇರುವ ಹಾನಗಲ್ಲ ತಾಲೂಕು ಕೇಂದ್ರವಾದ ಹಾನಗಲ್ಲ ಪಟ್ಟಣ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ನಗರ. ಆದರೆ ಮಳೆ ಬಂತೆಂದರೆ ಊರ ತುಂಬ ಗಟಾರಗಳು ತುಂಬಿ ರಸ್ತೆ ಮೇಲೆ ಹರಿಯುತ್ತವೆ. ಇತ್ತೀಚೆಗೆ ಹುಬ್ಬಳ್ಳಿ ತಡಸ ರಸ್ತೆ ಬದಿಯ ಚರಂಡಿ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆಯಾದರೂ ಉಳಿದೆಡೆ ಸಮಸ್ಯೆಗಳು ಹಾಗೆಯೇ ಉಳಿದಿವೆ.

ಚರಂಡಿ: ಪಟ್ಟಣದಲ್ಲಿ ೧೮೦ ಕಿಮೀ ಉದ್ದದ ಚರಂಡಿಗಳಿವೆ. ೮ ಕಿಮೀ ರಾಜಕಾಲುವೆ ಇದೆ. ಇನ್ನೂ ೫೦ ಕಿಮೀ ಚರಂಡಿ ಆಗಬೇಕಾಗಿದೆ. ಈ ಸ್ವಚ್ಛತೆ ನಿರ್ವಹಿಸಲು ಇರುವ ಪೌರ ಕಾರ್ಮಿಕರ ಸಂಖ್ಯೆ ೨೯ ಮಾತ್ರ. ಇನ್ನೂ ೧೭ ಜನರನ್ನು ಹೊರಗುತ್ತಿಗೆ ಮೇಲೆ ಸೇರಿಸಿಕೊಳ್ಳಲು ಆದೇಶಕ್ಕಾಗಿ ಪುರಸಭೆ ಕಾಯುತ್ತಿದೆ. ಜೂನ್ ತಿಂಗಳಿನಲ್ಲಿ ಅವರು ಕೆಲಸಕ್ಕೆ ಹಾಜರಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇನ್ನೂ ಹೆಚ್ಚುವರಿಯಾಗಿ ೨೦ ಪೌರ ಕಾರ್ಮಿಕರು ಬೇಕು. ಕಸ ವಿಲೇವಾರಿಗಾಗಿಯೇ ೧೦ ಕಾರ್ಮಿಕರು ಬೇಕು ಎನ್ನಲಾಗಿದೆ.

ಕಸ ವಿಲೇವಾರಿ:

ಕಸ ವಿಲೇವಾರಿಗಾಗಿ ೫ ಸಣ್ಣ ಆಟೋಗಳಿವೆ. ೨ ಟ್ಯಾಕ್ಟರ್‌ಗಳು, ೧ ಟಿಪ್ಪರ್‌ ಇದೆ. ಸದ್ಯದಲ್ಲೇ ಒಂದು ಆಟೋ ಹಾಗೂ ಒಂದು ಲಾರಿ ಖರೀದಿಸಲು ಪುರಸಭೆ ಟೆಂಡರ್ ಕರೆದಿದೆ. ಪಟ್ಟಣದ ಕಸದಿಂದ ಎರೆಹುಳ ಘಟಕದ ಮೂಲಕ ಎರೆಹುಳು ಗೊಬ್ಬರ ತಯಾರಿಸುತ್ತಿದ್ದು, ತಯಾರಿಸಿದ ಗೊಬ್ಬರವನ್ನು ೧ ಕೆಜಿಗೆ ₹೫ರಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಈಗ ₹೬ ಸಾವಿರಕ್ಕೂ ಅಧಿಕ ಹಣ ಬಂದಿದ್ದು, ಇನ್ನೂ ಒಂದು ಟನ್ ಗೊಬ್ಬರ ದಾಸ್ತಾನು ಇದೆ. ಪ್ಲಾಸ್ಟಿಕ್ ಆರಿಸಿ ಮಾರಿದ್ದರಿಂದ ಪುರಸಭೆಗೆ ₹೨೧ ಸಾವಿರ ಬಂದಿದೆ.

೨೦ ಕೋಟಿ: ಪಟ್ಟಣದಲ್ಲಿರುವ ಅಂದಾಜು ೧೨೦ ಕಿಮೀ ಚರಂಡಿಯನ್ನು ಒಳಚರಂಡಿ ವ್ಯವಸ್ಥೆಗೆ ಅಳವಡಿಸಿದರೆ ಇಡೀ ಪಟ್ಟಣದ ಗಟಾರಗಳ ಕೊಳಚೆ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ. ಆದರೆ ಇದಕ್ಕೆ ಇಂದಿನ ಲೆಕ್ಕಾಚಾರದಲ್ಲಿ ₹೨೦ ಕೋಟಿಗೂ ಅಧಿಕ ಅನುದಾನ ಬೇಕು. ಹತ್ತಾರು ಪುರಸಭೆ ಅಧ್ಯಕ್ಷರು, ಜನಪ್ರತಿನಿಧಿಗಳು ಬಂದು ಹೋಗಿದ್ದಾರೆ. ಆದರೆ ಈ ಕಾರ್ಯ ಕೈಗೂಡುತ್ತಿಲ್ಲ.

ಬೂದು ನೀರು ನಿರ್ವಹಣೆ:

ಪುರಸಭೆ ಲಭ್ಯ ಅನುದಾನವನ್ನು ಬಳಸಿಕೊಂಡು ಪ್ರಕೃತಿ ವಿಕೋಪ ನಿಧಿಯ ₹೯೦ ಲಕ್ಷಗಳಲ್ಲಿ ಕುಮಾರೇಶ್ವರ ನಗರ ಸೇರಿದಂತೆ ಹಲವೆಡೆ ಚರಂಡಿ ನಿರ್ಮಿಸುತ್ತಿದೆ. ಸದ್ಯಕ್ಕೆ ಅಚಗೇರಿ ಕೆರೆ, ಸುರಳೇಶ್ವರ ರಸ್ತೆ, ಮಂತಗಿ ರಸ್ತೆ, ಅಗ್ನಿಶಾಮಕ ಠಾಣೆ ಬಳಿಯ ಚರಂಡಿಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇಂದಿರಾ ನಗರದ ಬಳಿ ಇರುವ ಕಂಬಳಗೇರಿ ಕೆರೆಗೆ ೧೨೦ ಮೀಟರ್ ಉದ್ದದ ಕಾಲುವೆಯನ್ನು ಕಸ ನಿಯಂತ್ರಣ ಸಹಿತ ತಾಂತ್ರಿಕವಾಗಿ ₹೧೬ ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಬೂದು ನೀರು ನಿರ್ವಹಣಾ ಕಾಮಗಾರಿ ಮೂಲಕ ಗಲೀಜು ಕೆರೆಗೆ ಹೋಗದಂತೆ ತಡೆಯಲಾಗಿದೆ. ಇದರೊಂದಿಗೆ ತ್ಯಾಜ್ಯ ನೀರು ನಿರ್ವಹಣಾ ಘಟಕವನ್ನು ಒಂದು ಎಕರೆ ಕ್ಷೇತ್ರದಲ್ಲಿ ₹೫ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಚಾಲನೆಯಲ್ಲಿದೆ. ಇಲ್ಲಿ ಫಿಲ್ಟರ್ ಅದ ನೀರು ನದಿಯನ್ನು ಸೇರುತ್ತದೆ.

ಹಾನಗಲ್ಲ ಪಟ್ಟಣದಲ್ಲಿ ಹಳೆಯ ಊರು ಶೇ. ೭೫ರಷ್ಟು ಯೋಜನಾಬದ್ಧವಾಗಿಲ್ಲ. ಈಗ ಹೊಸ ಕಾಲನಿಗಳು ಶೇ. ೨೫ರಷ್ಟು ಯೋಜನಾಬದ್ಧವಾಗಿವೆ. ಇಂತಹ ೬ ಬಡಾವಣೆಗಳು ಸುವ್ಯವಸ್ಥಿತವಾಗಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿ ಹಾಗೂ ಕೊಳಚೆ ನೀರಿನಿಂದ ಆಗುವ ರೋಗ-ರುಜಿನಗಳನ್ನು ತಡೆಗಟ್ಟಲು ಪುರಸಭೆಯಿಂದ ಜಾಗೃತಿ ಮೂಡಿಸಲಾಗಿದೆ. ಹತ್ತು ಹಲವು ಸಮಸ್ಯೆಗಳಿರುವ ಹಾನಗಲ್ಲ ಪಟ್ಟಣದಲ್ಲಿ ಇವನ್ನೆಲ್ಲ ಸರಿಪಡಿಸಲು ಅನುದಾನವೇ ಇಲ್ಲ ಎಂಬ ಕೂಗೂ ಎಲ್ಲ ಪುರಸಭೆ ಆಡಳಿತ ಮಂಡಳಿಯಿಂದ ಬರುತ್ತಿದೆ. ಪ್ರತಿ ಮಳೆಗಾಲದಲ್ಲಿ ಸ್ವಚ್ಛತೆಗಾಗಿ ಸಾರ್ವಜನಕರ ಕೂಗು ಕೂಡ ಹಾಗೆಯೇ ಇರುತ್ತದೆ.ಆದ್ಯತೆ ನೀಡಲಾಗಿದೆ: ಇರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿ ಹಾನಗಲ್ಲ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ತಾತ್ಕಾಲಿಕ ಸಮಸ್ಯೆಗಳನ್ನು ಬಗೆಹರಿಸಲು ಅನುದಾನದ ಕೊರತೆ ಇಲ್ಲ. ಆದರೆ ಒಳಚರಂಡಿ ಸೇರಿದಂತೆ ದೊಡ್ಡ ಕಾಮಗಾರಿಗಳಿಗೆ ದೊಡ್ಡ ಅನುದಾನವೇ ಬೇಕು. ಹಾನಗಲ್ಲ ಪುರಸಭೆಗೆ ಆದಾಯದ ಮೂಲಕ ಕಡಿಮೆ ಇರುವುದು ಕೂಡ ಕಾಮಗಾರಿಗಳಿಗೆ ತೊಡಕುಂಟುಮಾಡಿದೆ ಎಂದು ಹಾನಗಲ್ಲ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.