ದೋಟಿಹಾಳ ಗ್ರಾಮದಲ್ಲಿ ಹೈಟೆಕ್ ಶೌಚಾಲಯದ ಕಾಮಗಾರಿ ಸಂಪೂರ್ಣಗೊಂಡಿದ್ದು, ಗ್ರಾಪಂಗೆ ಹಸ್ತಾಂತರ ಮಾಡಲಾಗಿದ್ದು, ಗ್ರಾಪಂ ನಿರ್ವಹಣೆ ಮಾಡಲಿದೆ

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದುಗಡೆ ಸಾರ್ವಜನಿಕರ ಅನುಕೂಲಕ್ಕಾಗಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಶೌಚಾಲಯ ಸಾರ್ವಜನಿಕ ಬಳಕೆಗೆ ಲಭ್ಯವಾಗದೇ ಇರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

2023-24ನೇ ಸಾಲಿನ ಸಮುದಾಯ ನೈರ್ಮಲ್ಯ ಶೌಚಾಲಯ ಸಂಕೀರ್ಣ ಯೋಜನೆಯಡಿ ಸುಮಾರು ₹ 25ಲಕ್ಷ ಅನುದಾನದಲ್ಲಿ ಕೆಆರ್‌ಐಡಿಎಲ್ ನಿರ್ಮಿಸಿದ ಈ ಹೈಟೆಕ್ ಶೌಚಾಲಯ ಆಧುನಿಕ ಸೌಲಭ್ಯ ಹೊಂದಿದ್ದರೂ ದಿನನಿತ್ಯ ಬಳಕೆಗೆ ತೆರೆಯದೆ ಬಾಗಿಲು ಬಂದ ಮಾಡಿದ್ದಾರೆ.

ದೋಟಿಹಾಳ ಗ್ರಾಮದಲ್ಲಿ ಹೈಟೆಕ್ ಶೌಚಾಲಯದ ಕಾಮಗಾರಿ ಸಂಪೂರ್ಣಗೊಂಡಿದ್ದು, ಗ್ರಾಪಂಗೆ ಹಸ್ತಾಂತರ ಮಾಡಲಾಗಿದ್ದು, ಗ್ರಾಪಂ ನಿರ್ವಹಣೆ ಮಾಡಲಿದೆ ಎಂದು ಕೆಆರ್‌ಐಡಿಎಲ್ ಇಂಜಿನಿಯರ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಈ ಶೌಚಾಲಯ ಬಳಕೆಗೆ ಸಿಗದ ಕಾರಣ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಬಯಲೇ ಗತಿಯಾಗಿದೆ. ಪರಿಸರ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆಗಳ ಭೀತಿ ಹೆಚ್ಚಾಗಿದೆ. ತಕ್ಷಣ ಶೌಚಾಲಯ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಇನ್ನೆಷ್ಟು ದಿನ ಬೇಕು?: ದೋಟಿಹಾಳ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ನಿರ್ಮಾಣ ಆಗುತ್ತಿರುವ ಹೈಟೆಕ್ ಶೌಚಾಲಯದ ಕಾಮಗಾರಿ ಮುಕ್ತಾಯಗೊಂಡು ಎರಡು ತಿಂಗಳ ಕಳೆದರೂ ಸಹಿತ ಇದುವರೆಗೂ ಬಳಕೆಗೆ ಅವಕಾಶ ಮಾಡಿಕೊಟ್ಟಿಲ್ಲ, ಇನ್ನೆಷ್ಟು ದಿನ ಬೇಕು ಶೌಚಾಲಯ ಬಳಕೆ ಮಾಡಲು ಎಂಬುದು ಇಲ್ಲಿಯ ನಿವಾಸಿಗಳ ಪ್ರಶ್ನೆಯಾಗಿದೆ.

ದೋಟಿಹಾಳ ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಸದುದ್ದೇಶದಿಂದ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅದನ್ನು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಗ್ಯಾನಪ್ಪ ಮನ್ನಾಪೂರ ತಿಳಿಸಿದ್ದಾರೆ.

ದೋಟಿಹಾಳ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಶೌಚಾಲಯದ ಉದ್ಘಾಟನೆ ಮತ್ತು ಸಾರ್ವಜನಿಕರಿಗೆ ಬಳಕೆಗೆ ನೀಡುವ ಕುರಿತು ಪಿಡಿಒ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ದೋಟಿಹಾಳ ಗ್ರಾಪಂ ಆಡಳಿತಾಧಿಕಾರಿ ನಾಗರಾಜ ಕಾತರಕಿ ತಿಳಿಸಿದ್ದಾರೆ.