ಎಸ್.ಎಂ. ಸೈಯದ್ಗಜೇಂದ್ರಗಡ: ಒಂದೇ ತಿಂಗಳ ಅವಧಿಯಲ್ಲಿ ತಾಲೂಕಿನಲ್ಲಿ ಎರಡು ಕಡೆ ಅಗ್ನಿ ಅವಘಡಗಳು ಸಂಭವಿಸಿವೆ. ಆದರೆ, ಪಟ್ಟಣದ ಸನಿಹ ನಿರ್ಮಾಣವಾದ ನೂತನ ಅಗ್ನಿಶಾಮಕ ಠಾಣೆಗೆ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಹೀಗಾಗಿ ಅಗ್ನಿಶಾಮಕ ಠಾಣೆ ಇದ್ದೂ ಇಲ್ಲದಂತಾಗಿದೆ.
ಪಟ್ಟಣ ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗಾನೂರು ಗ್ರಾಮದ ಹೊರವಲಯದಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡ ಪೂರ್ಣವಾಗಿ ಒಂದೂವರೆ ವರ್ಷವಾದರೂ ಉದ್ಘಾಟನೆಯಾಗಿಲ್ಲ.ತಾಲೂಕಿನಲ್ಲಿ ಅಗ್ನಿ ಅವಘಡ ಸಂಭವಿಸಿದರೆ ರೋಣ ಪಟ್ಟಣದಿಂದ ಅಗ್ನಿಶಾಮಕ ದಳದ ವಾಹನ, ಸಿಬ್ಬಂದಿ ಬರಬೇಕು. ಅಷ್ಟರೊಳಗೆ ಬೆಂಕಿ ಅವಘಡ ಕೈಮೀರಿ ಹೋಗಿರುತ್ತದೆ. ಹೀಗಾಗಿ ಅಗ್ನಿಶಾಮಕ ಠಾಣೆ ಪಟ್ಟಣದಲ್ಲಿ ಆರಂಭವಾಗಬೇಕು ಎಂಬ ಕೂಗು ತಾಲೂಕಿನಲ್ಲಿ ಬಲವಾಗಿ ಕೇಳಿ ಬಂದಿತ್ತು. ೨೦೨೨- ೨೩ನೇ ಸಾಲಿನಲ್ಲಿ ಶಾಸಕರಾಗಿದ್ದ ಕಳಕಪ್ಪ ಬಂಡಿ ಅವರು ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು.ಪಟ್ಟಣ ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಯ ಕೊಡಗಾನೂರು ಗ್ರಾಮದ ಬಳಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅಂದಾಜು ₹೩೦೦ ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ೨೦೨೩ರ ಮೇ ೨೪ರಂದು ಆರಂಭಿಸಿ ೨೦೨೪ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.
ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಅಗ್ನಿಶಾಮಕ ಠಾಣಾಧಿಕಾರಿ- ೧, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ- ೨, ಪ್ರಮುಖ ಅಗ್ನಿಶಾಮಕ- ೬, ಅಗ್ನಿಶಾಮಕ ಚಾಲಕ- ೪, ಚಾಲಕ ತಂತ್ರಜ್ಞ- ೧ ಅಗ್ನಿಶಾಮಕ- ೧೬ ಹಾಗೂ ದ್ವಿತೀಯ ದರ್ಜೆ ಸಹಾಯಕ- ೧ ಹಾಗೂ ಜಲವಾಹನ- ೨ ಸೇರಿದಂತೆ ಅಗತ್ಯವಿರುವ ಹುದ್ದೆಗಳ ಸೃಜನೆಗೆ ಮಂಜೂರಾತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಗಜೇಂದ್ರಗಡ ಪಟ್ಟಣದಲ್ಲಿ ಕಳೆದ ವಾರ ೧೩ನೇ ವಾರ್ಡಿನಲ್ಲಿ ಗ್ಯಾಸ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿತ್ತು. ಬುಧವಾರ ಈದ್ಗಾ ಮೈದಾನ ಬಳಿ ನಡೆದ ಅಗ್ನಿ ಅಅವಘಡ ನಂದಿಸಲು ರೋಣದಿಂದ ಅಗ್ನಿಶಾಮಕ ಸಿಬ್ಬಂದಿ ಬರುವುದರೊಳಗೆ ಅಂಗಡಿಯಲ್ಲಿನ ಸಾಮಗ್ರಿಗಳು ಅಗ್ನಿಯ ಕೆನ್ನಾಲಿಗೆ ಆಹುತಿಯಾಗಿದ್ದವು. ಹೀಗಾಗಿ ಉದ್ಘಾಟನೆಗೆ ಕಾದಿರುವ ಠಾಣೆಗೆ ಬೇಕಿರುವ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಿ ಠಾಣೆಯನ್ನು ಲೋಕಾರ್ಪಣೆಗೊಳಿಸಲು ಮುಂದಾಗಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಸರ್ಕಾರಕ್ಕೆ ಪ್ರಸ್ತಾವನೆ: ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ಠಾಣೆಗೆ ಒಂದು ವಾಹನ ಮಂಜೂರಾಗಿದ್ದು, ಸಿಬ್ಬಂದಿ ನಿಯೋಜನೆಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದಿಂದ ಅನುಮೋದನೆ ಸಿಕ್ಕ ತಕ್ಷಣವೇ ಠಾಣೆಯ ಆರಂಭವಾಗಲಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಜಯಕುಮಾರ ಎಚ್.ಜಿ. ತಿಳಿಸಿದರು.ಲೋಕಾರ್ಪಣೆಯಾಗಲಿ: ತಾಲೂಕಿನಲ್ಲಿ ಹೊಲ, ಬಣವೆ ಹಾಗೂ ಮನೆ ಸೇರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗೂ ಪರಿಸರ ವಿಕೋಪದಿಂದ ಉಂಟಾಗುವ ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ದಳದಿಂದ ಮಾತ್ರ ಸಾಧ್ಯ. ಪಟ್ಟಣದಲ್ಲಿ ಇದೇ ತಿಂಗಳಲ್ಲಿ ೨ ಅಗ್ನಿ ಅವಘಡಗಳು ಸಂಭವಿಸಿವೆ. ಹೀಗಾಗಿ ಅಗ್ನಿಶಾಮಕ ಠಾಣೆಯನ್ನು ಶೀಘ್ರ ಲೋಕಾರ್ಪಣೆಗೆ ಮುಂದಾಗಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಯಮನಪ್ಪ ಬಿ. ತಿರಕೋಜಿ ತಿಳಿಸಿದರು.