ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಬ್ಬರಿಗೂ ಈ ದೇಶದ ಕಾನೂನಿನ ಅರಿವಿರಬೇಕು. ಕಾನೂನು ಜ್ಞಾನದಿಂದ ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟಿ ನಿಲ್ಲುವುದಕ್ಕೆ ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಸಲಹೆ ನೀಡಿದರು.ನಗರದ ಮಹಿಳಾ ಸರ್ಕಾರಿ ಕಾಲೇಜಿನ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನು-ಅರಿವು ಮತ್ತು ನೆರವು’ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಕಾನೂನು ಎಷ್ಟೇ ಕಠಿಣವಾಗಿದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಕಾನೂನು ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣ. ವಿದ್ಯಾರ್ಥಿ ದಿಸೆಯಲ್ಲಿಯೇ ಕಾನೂನಿನ ಅರಿವನ್ನು ಪಡೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ದೌರ್ಜನ್ಯ ತಡೆಯಲು ಸಾಧ್ಯವಾಗುತ್ತದೆ ಎಂದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿಯೇ ಕಾನೂನುಗಳನ್ನು ಬಲಗೊಳಿಸಲಾಗಿದೆ. ಅವುಗಳನ್ನು ತಿಳಿದುಕೊಳ್ಳುವುದಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ತಮ್ಮ ರಕ್ಷಣೆಗಿರುವ ಕಾನೂನನ್ನು ಅರಿತುಕೊಳ್ಳುವುದಕ್ಕೆ ಹೆಚ್ಚು ಗಮನಹರಿಸಬೇಕು. ತಾವು ಕಾನೂನಿನ ಅರಿವನ್ನು ಹೊಂದುವುದಲ್ಲದೆ ಇತರರಿಗೂ ಅದನ್ನು ತಿಳಿಸಿಕೊಡಬೇಕು ಎಂದರು.ಕಾಲೇಜು ಹಂತದಲ್ಲಿ ಪ್ರೀತಿ, ಪ್ರೇಮದ ಸೆಳೆತಕ್ಕೊಳಗಾಗಿ ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡಿಕೊಳ್ಳಬೇಡಿ. ಅದರಿಂದ ದೂರವಿದ್ದು ಕಾನೂನು ಪುಸ್ತಕಗಳನ್ನು ಓದಿ ಜ್ಞಾನವನ್ನು ಸಂಪಾದಿಸಿ. ಕಾನೂನಿನ ತಿಳಿವಳಿಕೆ ಇದ್ದಾಗ ಸಮಸ್ಯೆಗಳನ್ನು ಸಮರ್ಥವಾಗಿ, ಧೈರ್ಯದಿಂದ ಎದುರಿಸಬಹುದು. ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ಸಮಾಜದಲ್ಲಿ ತಮಗೆ ಯಾವ ರೀತಿಯ ಕಾನೂನಿನ ರಕ್ಷಣೆ ಇದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಅನ್ಯಾಯವಾಗದಂತೆ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಸಂವಿಧಾನಬದ್ಧವಾಗಿ ದೊರಕಿಸಿಕೊಡಲಾಗಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ತಡೆಗೆ ಕಠಿಣ ಕಾನೂನುಗಳಿವೆ. ಅವೆಲ್ಲದರ ಅರಿವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದಿರು.ಬೆಂಗಳೂರಿನ ನಿವೃತ್ತ ಡಿಸಿಪಿ ಎಸ್.ಸಿದ್ದರಾಜು ಮಾತನಾಡಿ, ಕಾನೂನು ಅರಿವು ನಿಮಗಿದ್ದರೆ ಸಮಸ್ಯೆ ಬಗ್ಗೆ ಮಾತನಾಡುವ ಧೈರ್ಯ ಬರುತ್ತದೆ. ಕೇವಲ ವಕೀಲರು ಮಾತ್ರ ಕಾನೂನುಗಳನ್ನು ಓದಿಕೊಳ್ಳಲಿ ಎಂಬುವ ಪರಿಕಲ್ಪನೆ ಬಿಡಬೇಕು. ಭಾರತ ಸಂವಿಧಾನವು ನೆಲದ ಕಾನೂನು ತಿಳಿದುಕೊಳ್ಳಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಅದರಂತೆ ನಡೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾಲೇಜಿನ ಪ್ರಾಂಶುಪಾಲ ಗುರುರಾಜಪ್ರಭು, ಧ್ವನಿ ಲಯನ್ಸ್ ಸಂಸ್ಥೆ ಅಧ್ಯಕ್ಷ ರಜನಿರಾಜ್, ಉಪನ್ಯಾಸಕರಾದ ಎಚ್.ಜಿ.ಪುಷ್ಪಲತಾ, ಜ್ಯೋತಿ, ಕುಸುಮಾದೇವಿ, ಕೆ.ಹೇಮಲತಾ ಭಾಗವಹಿಸಿದ್ದರು.