ಮಳೆಗಾಲಕ್ಕೂ ಮುನ್ನವೇ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ..!

| Published : May 22 2024, 12:56 AM IST

ಮಳೆಗಾಲಕ್ಕೂ ಮುನ್ನವೇ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ..!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ ೮೧ ಅಡಿಯಷ್ಟು ನೀರು ದಾಖಲಾಗಿದೆ. ಅಣೆಕಟ್ಟೆಗೆ ೧೮೩೨ ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ ೨೭೨ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ ೧೧.೨೩೩ ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಮುಂಗಾರು ಮಳೆ ಆರಂಭವಾಗುವ ಮುನ್ನವೇ ತಮಿಳುನಾಡು ನೀರಿಗೆ ಬೇಡಿಕೆ ಇಡುವುದರೊಂದಿಗೆ ಕಾಂಗ್ರೆಸ್ ಸರ್ಕಾರಕ್ಕೆ ಕಠಿಣ ಸವಾಲನ್ನು ಮುಂದಿಟ್ಟಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಈ ಬಾರಿ ಮಳೆಗಾಲಕ್ಕೂ ಮುನ್ನವೇ ಕ್ಯಾತೆ ತೆಗೆದಿದೆ. ತುರ್ತಾಗಿ ಕಾವೇರಿ ಜಲಾನಯನ ಪ್ರದೇಶದಿಂದ ೨.೫ ಟಿಎಂಸಿ ನೀರು ಹರಿಸುವಂತೆ ಪಟ್ಟುಹಿಡಿದಿದೆ. ತಮಿಳುನಾಡು ಬೇಡಿಕೆಗೆ ಮಣೆ ಹಾಕಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ೨.೫ ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿರುವುದು ಅನ್ನದಾತರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.

ಕಳೆದ ವರ್ಷ ಎದುರಾದ ಬರಗಾಲದಿಂದ ಬೆಳೆ ಬೆಳೆಯಲಾಗದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಬೇಸಿಗೆಯಲ್ಲೂ ನೀರು ಸಿಗದ ಕಾರಣ ಬೆಳೆಯನ್ನೇ ಕೈಬಿಟ್ಟಿದ್ದರು. ಕಳೆದ ಹದಿನೈದು ದಿನಗಳಿಂದ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಕೆರೆ-ಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರು ನಿಂತಿದೆ. ಜಲಾಶಯಗಳಿಗೆ ಇನ್ನೂ ಒಳಹರಿವೇ ಬಾರದಿರುವ ಸಮಯದಲ್ಲೇ ತಮಿಳುನಾಡು ನೀರಿಗಾಗಿ ಪ್ರಾಧಿಕಾರದ ಮೂಲಕ ಒತ್ತಡ ಹಾಕಿರುವುದು ಬರಗಾಲದಲ್ಲಿ ಅನ್ನದಾತರ ಬದುಕಿಗೆ ಬರೆ ಎಳೆದಂತಾಗಿದೆ.

ತಮಿಳುನಾಡು ಕಾವೇರಿ ನೀರಿಗಾಗಿ ಇಟ್ಟಿದ್ದ ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿತ್ತು. ಅಷ್ಟಕ್ಕೇ ಸುಮ್ಮನಾಗದ ತಮಿಳುನಾಡು ನೀರು ನಿರ್ವಹಣಾ ಪ್ರಾಧಿಕಾರದ ಮೆಟ್ಟಿಲೇರಿ ತನ್ನ ಬೇಡಿಕೆಯನ್ನು ಈಡೇರಿಸಿಕೊಂಡಿದೆ. ಪ್ರಾಧಿಕಾರ ಮೇ ತಿಂಗಳಲ್ಲಿ ಬಿಡುಗಡೆ ಮಾಡಬೇಕಾದ ೨.೫ ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡುವುದರೊಂದಿಗೆ ಕಾವೇರಿ ವಿವಾದಕ್ಕೆ ಕಿಚ್ಚು ಹಚ್ಚಿಸುತ್ತಿದೆ.

ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ ೮೧ ಅಡಿಯಷ್ಟು ನೀರು ದಾಖಲಾಗಿದೆ. ಅಣೆಕಟ್ಟೆಗೆ ೧೮೩೨ ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ ೨೭೨ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ ೧೧.೨೩೩ ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಮುಂಗಾರು ಮಳೆ ಆರಂಭವಾಗುವ ಮುನ್ನವೇ ತಮಿಳುನಾಡು ನೀರಿಗೆ ಬೇಡಿಕೆ ಇಡುವುದರೊಂದಿಗೆ ಕಾಂಗ್ರೆಸ್ ಸರ್ಕಾರಕ್ಕೆ ಕಠಿಣ ಸವಾಲನ್ನು ಮುಂದಿಟ್ಟಿದೆ.

ಕಳೆದ ವರ್ಷ ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರುವುದರೊಂದಿಗೆ ನಿರಂತರವಾಗಿ ರಾಜ್ಯದ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಿಂದ ನೀರನ್ನು ಹರಿಸಿಕೊಂಡ ತಮಿಳುನಾಡು ಈ ವರ್ಷ ಮೇ ತಿಂಗಳಿನಲ್ಲೇ ಕಾವೇರಿ ನೀರಿಗೆ ಕ್ಯಾತೆ ತೆಗೆದಿದೆ. ಪ್ರಸ್ತುತ ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ೧೯.೧೭ ಟಿಎಂಸಿ ನೀರಿದೆ. ಕರ್ನಾಟಕದ ಅಗತ್ಯ ಪೂರೈಸಿಕೊಳ್ಳುವುದಕ್ಕೆ ೪ ಟಿಎಂಸಿ ನೀರು ಸಾಕು. ಹಾಗಾಗಿ ನಮಗೆ ಮೇ ತಿಂಗಳಿನಲ್ಲಿ ಬಿಡಬೇಕಿರುವ ೨.೫ ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಪ್ರಾಧಿಕಾರದ ಮುಂದಿಟ್ಟ ಮನವಿಯನ್ನು ಪುರಸ್ಕರಿಸಿ ಕರ್ನಾಟಕದ ಕಾವೇರಿ ಕಣಿವೆ ರೈತರನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದೆ.ಕಾಂಗ್ರೆಸ್ ಸರ್ಕಾರ ಕಾವೇರಿ ನೀರನ್ನು ಉಳಿಸುವ ವಿಚಾರದಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ. ನೀರಿನ ವಸ್ತುಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟಿಲ್ಲ. ವಸ್ತುಸ್ಥಿತಿ ಮನವರಿಕೆ ಮಾಡಿಯೂ ಈ ತೀರ್ಪು ಬಂದರೆ ಅಂತಹ ಆದೇಶವನ್ನು ತಿರಸ್ಕರಿಸಬೇಕು. ನೆಪಮಾತ್ರಕ್ಕೆ ತಿರಸ್ಕಾರ ಮಾಡಿ ಮತ್ತೊಂದೆಡೆ ಓಲೈಕೆ ಮಾಡುವ ಧೋರಣೆ ಸರಿಯಲ್ಲ. ಸರ್ಕಾರ ನೀರನ್ನು ಉಳಿಸಿಕೊಂಡು ರೈತರ ಕಾಪಾಡುವ ಬಗ್ಗೆ ನಂಬಿಕೆ ಇಲ್ಲ. ನೀರು ಬಿಟ್ಟರೆ ರೊಚ್ಚಿಗೇಳುವುದು ನಿಶ್ಚಿತ.

- ಕೆ.ಎಸ್.ನಂಜುಂಡೇಗೌಡ, ರೈತ ಮುಖಂಡರುಮಳೆ ತೀರ್ಥ ಕೊಟ್ಟಂತೆ ಈಗ ಕೊಡುತ್ತಿದೆ. ಕೆಆರ್‌ಎಸ್‌ನಲ್ಲಿ ಒಂದಡಿಯಷ್ಟೇ ನೀರು ಹೆಚ್ಚಾಗಿದೆ. ನಾಲೆಗಳಲ್ಲಿ ನೀರನ್ನು ನೋಡೇ ಇ್ಲಲ್ಲ. ಆಗಲೇ ನೀರು ಬಿಡಿ ಎನ್ನುವುದು ಯಾವ ನ್ಯಾಯ. ಯಾವುದೇ ಕಾರಣಕ್ಕೂ ಪ್ರಾಧಿಕಾರದ ಆದೇಶವನ್ನು ಒಪ್ಪುವುದಿಲ್ಲ. ಇದನ್ನು ಸರ್ಕಾರ ತಿರಸ್ಕರಿಸಬೇಕು. ಪಕ್ಷಾತೀತವಾಗಿ ಹೋರಾಡಲು ಎಲ್ಲರೂ ಸಜ್ಜಾಗಬೇಕು.

- ಸುನಂದಾ ಜಯರಾಂ, ರೈತ ಮುಖಂಡರುನೀರಿನ ವಸ್ತುಸ್ಥಿತಿಯನ್ನೇ ಅಧ್ಯಯನ ಮಾಡದೆ ಮಾಡುವ ಆದೇಶದ ಬಗ್ಗೆ ಪ್ರಾಧಿಕಾರದವರಿಗೇ ನಾಚಿಕೆಯಾಗಬೇಕು. ತಮಿಳುನಾಡು ಬೇಡಿಕೆಯನ್ನು ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿರುವಾಗ ಪ್ರಾಧಿಕಾರ ಹೇಗೆ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಕರ್ನಾಟಕದಲ್ಲಿ ಇನ್ನೂ ಮಳೆಯೇ ಆರಂಭವಾಗದಿರುವಾಗ ನೀರಿಗೆ ಬೇಡಿಕೆ ಇಡುವುದು, ಆ ಬೇಡಿಕೆಯನ್ನು ಪುರಸ್ಕರಿಸುವುದು ನ್ಯಾಯಸಮ್ಮತವೇ. ಇಂತಹ ಜನ-ರೈತ ವಿರೋಧಿ ಆದೇಶಗಳು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ.

-ಎ.ಎಲ್.ಕೆಂಪೂಗೌಡ, ಅಧ್ಯಕ್ಷರು, ಜಿಲ್ಲಾ ರೈತಸಂಘಪ್ರಾಧಿಕಾರದ ಆದೇಶ ಪ್ರಜಾತಂತ್ರ ವ್ಯವಸ್ಥೆಗೆ ವಿರೋಧವಾಗಿದೆ. ಇಂತಹ ಪ್ರಾಧಿಕಾರವನ್ನು ವಜಾಗೊಳಿಸಬೇಕು. ಇದು ತಮಿಳುನಾಡಿಗೆ ಸೀಮಿತವಾದ ಪ್ರಾಧಿಕಾರವಾಗಿದೆ. ನೀರಿನ ವಾಸ್ತವಾಂಶವನ್ನು ಪರಿಶೀಲಿಸದೆ ದೆಹಲಿಯಲ್ಲಿ ಕುಳಿತು ನೀಡುವ ತೀರ್ಪುಗಳು ಜನರ ಬದುಕನ್ನು ತಲ್ಲಣಗೊಳಿಸುತ್ತಿವೆ. ನ್ಯಾಯಸ್ಥಾನದಲ್ಲಿ ಕುಳಿತವರು ನಿಷ್ಪಕ್ಷಪಾತಿಯಾಗಿರಬೇಕೇ ವಿನಃ ಪಕ್ಷಪಾತಿಯಾಗಿರಬಾರದು. ಪ್ರಾಧಿಕಾರ ವಜಾಕ್ಕೆ ಹೋರಾಟ ನಡೆಸಬೇಕಿದೆ.

- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಒಕ್ಕೂಟ