ವೀರಶೈವ ಲಿಂಗಾಯತ ಮಹಾಸಭಾ ಎಲ್ಲಿದೆ?: ಭಗವಂತ ಖೂಬಾ

| Published : Apr 23 2024, 12:47 AM IST

ಸಾರಾಂಶ

ನೇಹಾ ಹತ್ಯೆ ಘಟನೆ ಕುರಿತು ಖಂಡಿಸದಿರುವುದು ದುರ್ದೈವದ ಸಂಗತಿ. ಸಚಿವ ಈಶ್ವರ ಖಂಡ್ರೆ ರಾಜಕೀಯ ಬಿಟ್ಟು ಸಮಾಜದ ಉದ್ಧಾರಕ್ಕಾಗಿ ಮುಂದೆ ಬರಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದಲ್ಲಿ ನೇಹಾ ಹತ್ಯೆ ಕುರಿತು ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತಿದ್ದರೂ ವೀರಶೈವ ಲಿಂಗಾಯತ ಮಹಾಸಭಾ ಎಲ್ಲ ಅಡಗಿ ಕುಳಿತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕಿಡಿ ಕಾರಿದರು.

ನಗರದ ಬಸವೇಶ್ವರ ವೃತ್ತದ ಬಳಿ ಬಿಜೆಪಿ, ಜೆಡಿಎಸ್‌ ಹಾಗೂ ಇನ್ನಿತರ ಸಂಘಟನೆಗಳಿಂದ ನೇಹಾ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತನ್ನಷ್ಟಕ್ಕೆ ತಾನು ವೀರಶೈವ ಮಹಾಸಭಾ ಪ್ರಮುಖರೆಂದು ಹೇಳಿಕೊಳ್ಳುವ ಸಚಿವ ಈಶ್ವರ ಖಂಡ್ರೆ ಮುಂದೆ ಬರಬೇಕಾಗಿತ್ತು. ಘಟನೆ ಕುರಿತು ಇಲ್ಲಿಯವರೆಗೆ ಖಂಡಿಸದೆ ಇರುವುದು ದುರ್ದೈವದ ಸಂಗತಿಯಾಗಿದೆ ಎಂದರು.

ಈಶ್ವರ ಖಂಡ್ರೆ ಅವರು ರಾಜಕೀಯ ಬಿಟ್ಟು ಸಮಾಜದ ಉದ್ಧಾರಕ್ಕಾಗಿ ಮುಂದೆ ಬರಲಿ ಇಂತಹ ಢೋಂಗಿತನಕ್ಕೆ ಜನರು ಒಪ್ಪಲ್ಲ. ಕಳೆದ 10 ತಿಂಗಳಿನಲ್ಲಿ ಕಾನೂನು ಸುವ್ಯವಸ್ಥೆ ಬಹುವಾಗಿ ಹದೆಗೆಟ್ಟಿದೆ. ಹಾಡು ಹಗಲೇ ಕಗ್ಗೊಲೆ, ಬಾಂಬ್‌ ಸ್ಫೋಟದ ಘಟನೆಗಳು ನಡೆಯುತ್ತಿವೆ. ಹಾಡುಹಗಲೇ ಕೊಲೆ ಮಾಡಲು ಆರೋಪಿ ಫಯಾಜ್‌ಗೆ ಧೈರ್ಯ ಬರಲು ಕಾಂಗ್ರೆಸ್‌ ಸರ್ಕಾರವೇ ಕಾರಣ. ಸಿಎಂ ಹಾಗೂ ಡಿಸಿಎಂಗೆ ಛಿಮಾರಿ ಹಾಕಬೇಕು ಎಂದ ಅವರು ಈಗಾಗಲೇ ಫಯಾಜ್‌ನನ್ನು ಬಂಧಿಸಲಾಗಿದೆ. ಆದರೆ ಉಳಿದವರನ್ನು ಬಂಧಿಸುವ ಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಉತ್ತರ ಪ್ರದೇಶದ ಬುಲ್ಡೋಜರ್ ಬಾಬಾ ಮಾದರಿಯಾಗಿ ಮಾಡಲಿ ಇಂತಹ ಘಟನೆಗಳಿಗೆ ಕಡಿವಾಣ ಬೀಳಲಿದೆ ಎಂದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸಿಎಂ, ಡಿಸಿಎಂ ಮತ ಬ್ಯಾಂಕ್‌ಗಾಗಿ ಹೆದರುತ್ತಿದ್ದಾರೆ. ಏನೇ ಇರಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇರಲಿ ಎಂದರು.

ಶಾಸಕ ಡಾ. ಸಿದ್ದು ಪಾಟೀಲ್‌ ಮಾತನಾಡಿ, ಸೌದಿ ಅರಬ್‌ ದೇಶದಲ್ಲಿ ಇರುವಂತಹ ಕಾನೂನು ನಮ್ಮ ದೇಶದಲ್ಲಿಯೂ ಕೂಡ ಜಾರಿಗೆ ತರಬೇಕು. ಅನೇಕ ಕಡೆಗಳಲ್ಲಿ ಬಿಜೆಪಿಗರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಗರ ಅಧ್ಯಕ್ಷ ಶಶಿಧರ ಹೊಸಳ್ಳಿ ಮಾತನಾಡಿ, ಇಂದಿನ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಸಚಿವ ರಹೀಮ್‌ ಖಾನ್‌ ಮಾಡಿದ್ದರು ಎಂದ ಅವರು, ಎಸ್‌ಡಿಪಿಐ ಹಾಗೂ ಪಿಎಫ್‌ಐ ಜೊತೆಗೆ ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಬಿಜೆಪಿ ವಿಭಾಗೀಯ ಪ್ರಮುಖರಾದ ಈಶ್ವರಸಿಂಗ್‌ ಠಾಕೂರ ಮಾತನಾಡಿ, ಮುಸ್ಲಿಂ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸಬೇಡಿ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಕಂಟಕ ಬರಬಹುದು ಎಲ್ಲರೂ ಕೂಡಿ ಲವ್‌ ಜಿಹಾದ್‌ ತಡೆಯುವ ಕೆಲಸ ಮಾಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಜೆಡಿಎಸ್‌ನ ರಾಜು ಕಡ್ಯಾಳ, ಬಸವರಾಜ ಪಾಟೀಲ್‌ ಹಾರೂರಗೇರಿ, ವಿರುಪಾಕ್ಷ ಗಾದಗಿ, ಉಪೇಂದ್ರ ದೇಶಪಾಂಡೆ, ಸೋಮಶೇಖರ ಪಾಟೀಲ್‌, ಸುನೀಲ್‌ ದಳವೆ, ಲುಂಬಣಿ ಗೌತಮ, ಗುರುನಾಥ ಜ್ಯಾಂತಿಕರ್, ರೇವಣಸಿದ್ದಪ್ಪ ಜಲಾದೆ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಅಭಿ ಕಾಳೆ, ಲಲಿತಾಬಾಯಿ ಕರಂಜಿ, ಐಲಿನ್‌ ಜಾನ್ ಮಠಪತಿ ಮತ್ತಿತರರು ಪಾಲ್ಗೊಂಡಿದ್ದರು.