ಹಾಲು, ಮಜ್ಜಿಗೆಗೂ ಜಿಎಸ್ಟಿ ಹಾಕಿದಾಗ ಬಿಜೆಪಿ ನಾಯಕರು ಎಲ್ಲಿದ್ರು?

| Published : Jun 21 2024, 01:08 AM IST

ಹಾಲು, ಮಜ್ಜಿಗೆಗೂ ಜಿಎಸ್ಟಿ ಹಾಕಿದಾಗ ಬಿಜೆಪಿ ನಾಯಕರು ಎಲ್ಲಿದ್ರು?
Share this Article
  • FB
  • TW
  • Linkdin
  • Email

ಸಾರಾಂಶ

ಸಿಲಿಂಡರ್‌ ದರ ಸಾವಿರ ಗಡಿ ದಾಟಿದರೂ ಮೌನವಾಗಿದ್ದರು ಬಿಜೆಪಿ ನಾಯಕರು: ಎಸ್.ಎಂ.ಪಾಟೀಲ ಗಣಿಹಾರ ವಾಗ್ದಾಳಿ

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ಸರ್ಕಾರ ಮನಬಂದಂತೆ ಇಂಧನ ದರ ಏರಿಕೆ ಮಾಡಿದಾಗ ಸಾವಿರ ರು. ದರ ಏರಿಕೆಯಾದರೂ ದೇಶಕ್ಕಾಗಿ ಸ್ವಾಗತಿಸುವುದಾಗಿ ಹೇಳುತ್ತಿದ್ದ ಬಿಜೆಪಿ ನಾಯಕರು, ರಾಜ್ಯದಲ್ಲಿ ಕೇವಲ ₹2-3 ತೆರಿಗೆ ಹೇರಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರಿಗೆ ನೈತಿಕತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ದೇಶದಲ್ಲಿ ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಿದ್ದು ಗೃಹ ಬಳಕೆಯ ಸಿಲಿಂಡರ್ ದರ ಸಾವಿರ ರು. ಗಡಿ ದಾಟಿದರೂ ಮೌನವಾಗಿದ್ದರು. ರಾಜ್ಯದ ಬಿಜೆಪಿ ನಾಯಕರು, ಮಕ್ಕಳು ಕುಡಿಯುವ ಹಾಲು, ಮೊಸರು, ಮಜ್ಜಿಗೆ ಮೇಲೂ ಜಿಎಸ್ಟಿ ಹಾಕಿ ದರ ಏರಿಕೆ ಮಾಡಿತು. ಆಗ ಬಿಜೆಪಿ ಮುಖಂಡರು ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಜನ ಬಿಜೆಪಿಯನ್ನು ತಿರಸ್ಕರಿಸಿದರೂ ಅವಸರವಾಗಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಲೇ ನೀಟ್ ಪರೀಕ್ಷೆಯ ಹಗರಣದ ಮೂಲಕ ದೇಶದ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಕುತ್ತು ತರುವ ಕೊಡುಗೆ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದೆ. ಇಂತಹ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಚುನಾವಣೆ ಅಥವಾ ಮತ ಹಾಕಲಿ ಎಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿಲ್ಲ. ಎಲ್ಲ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸಲು ಜಾರಿಗೆ ತಂದಿರುವ ಯೋಜನೆಗಳು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂಬುದು ಸರಿಯಲ್ಲ ಎಂದು ತಿರುಗೇಟು ನೀಡಿದರು.ಮೋದಿ ಸರ್ಕಾರದ ಸಂಪುಟದಲ್ಲಿ ಅಹಿಂದ ವರ್ಗಕ್ಕೆ ಅನ್ಯಾಯ ಆಗಿದೆ. ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾದ ವಿಜಯಪುರದಿಂದ ಮೂರು ಬಾರಿ ಗೆಲುವು ಸಾಧಿಸಿರುವ ರಮೇಶ ಜಿಗಜಿಣಗಿ ಅವರಿಗೂ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.

ಡಾ.ರವಿ ಬಿರಾದಾರ ಮಾತನಾಡಿ, ದೇಶದ ಹೆದ್ದಾರಿಗಳಲ್ಲಿ ಚುನಾವಣೆ ಮುಗಿಯುತ್ತಲೇ ದರ ಏರಿಕೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹಗರಣಗಳು ಒಂದೊಂದಾಗಿ ಹೊರ ಬರುತ್ತಿವೆ. ರಾಜ್ಯದ ನೀರಾವರಿ ಸೇರಿದಂತೆ ಇತರೆ ಅಭಿವೃದ್ಧಿ ಯೋಜನೆಗಳಿಗೆ ಘೋಷಿಸಿರುವ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹೋರಾಟ ಮಾಡುವುದಿದ್ದರೆ ಬಿಜೆಪಿ ನಾಯಕರು ಮೊದಲು ಈ ಬಗ್ಗೆ ಧ್ವನಿ ಎತ್ತಲಿ ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಲಂಬು, ಪಯಾಜ್ ಕಲಾದಗಿ ಸೇರಿದಂತೆ ಮುಂತಾದವರು ಇದ್ದರು.