ವಿಜಯನಗರ ಹೆಣ್ಣುಮಗುಸ್ನೇಹಿ ಜಿಲ್ಲೆಯಾಗಲಿ: ಶಶಿಧರ ಕೋಸಂಬೆ

| Published : Feb 16 2024, 01:46 AM IST

ವಿಜಯನಗರ ಹೆಣ್ಣುಮಗುಸ್ನೇಹಿ ಜಿಲ್ಲೆಯಾಗಲಿ: ಶಶಿಧರ ಕೋಸಂಬೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆಯ ಕಾಯಿದೆಯಗಳ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಹೆಣ್ಣುಮಗುವಿನ ರಕ್ಷಣೆಗೆ ವಿಶೇಷ ಒತ್ತು ಕೊಡಬೇಕು.

ಹೊಸಪೇಟೆ: ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಂಬಂಧಿಸಿದ ವಿವಿಧ ಮೇಲ್ವಿಚಾರಣಾ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಿ ಅನಿಷ್ಟ ಹೆಣ್ಣು ಭ್ರೂಣ ಹತ್ಯೆ ಮೇಲೆ ನಿಯಂತ್ರಣ ವಹಿಸಿ, ಹೆಣ್ಣುಮಗುಸ್ನೇಹಿ ವಿಜಯನಗರ ಜಿಲ್ಲೆಯಾಗುವಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕಾನೂನುಬಾರ ಗರ್ಭಪಾತ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಸಾಕಷ್ಟು ಜಾಗೃತಿ ಮೂಡಿಸಿದಾಗ್ಯೂ ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿವೆ. ಇದು ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಕ್ಕಳ ಹಕ್ಕುಗಳ ರಕ್ಷಣೆಯ ಕಾಯಿದೆಯಗಳ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಹೆಣ್ಣುಮಗುವಿನ ರಕ್ಷಣೆಗೆ ವಿಶೇಷ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣುಮಗುವಿನ ರಕ್ಷಣೆಯ ಜತೆಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಅಂಗನವಾಡಿ ಶಿಕ್ಷಣ ಹಂತದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೈಸ್ಕೂಲ್ ಹಾಗೂ ಕಾಲೇಜು ಹಂತದಲ್ಲಿ ಅಭಿಯಾನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳ ಹಕ್ಕುಗಳ ವಿವಿಧ ಕಾಯ್ದೆಗಳ ಕುರಿತು ಅರಿವು ಮೂಡಿಸಬೇಕು. ಭ್ರೂಣಹತ್ಯೆ, ಬಾಲ್ಯವಿವಾಹ ತಡೆಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಮಾತನಾಡಿ, ಮಕ್ಕಳ ಹಕ್ಕುಗಳ ವಿವಿಧ ಕಾಯ್ದೆಯ ಬಗ್ಗೆ ತರಬೇತಿ ಕಾರ್ಯಗಳು ನಿರಂತರ ನಡೆಯಬೇಕು. ಹೆಣ್ಣುಮಗುವಿನ ರಕ್ಷಣೆಯ ಕಾರ್ಯದಲ್ಲಿ ನನ್ನ ಪಾತ್ರವೂ ಇದೆ ಎಂಬುದನ್ನು ಅರಿತು ಈ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸುದೀಪ್‌ಕುಮಾರ ಉಂಕ್ರಿ ಸೇರಿದಂತೆ ಸಖಿ ಕೇಂದ್ರ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಮಕ್ಕಳ ರಕ್ಷಣಾ ಘಟಕದ ಚಿದಾನಂದ ನಿರ್ವಹಿಸಿದರು.