ಗಲಭೆ ಮಾಡದೇ ಬಿಜೆಪಿ ಯಾವ ಎಲೆಕ್ಷನ್‌ ಗೆದ್ದಿದ್ದೆ?: ಸಚಿವ ಮಂಕಾಳ ವೈದ್ಯ ಪ್ರಶ್ನೆ

| Published : Jan 09 2024, 02:00 AM IST / Updated: Jan 09 2024, 05:03 PM IST

Mankalu Vaidya
ಗಲಭೆ ಮಾಡದೇ ಬಿಜೆಪಿ ಯಾವ ಎಲೆಕ್ಷನ್‌ ಗೆದ್ದಿದ್ದೆ?: ಸಚಿವ ಮಂಕಾಳ ವೈದ್ಯ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಜವಾದ ಭಕ್ತಿಯಿದ್ದರೆ ಪಕ್ಷಾತೀತವಾಗಿ ರಾಮಮಂದಿರ ಲೋಕಾರ್ಪಣೆ ಮಾಡಬೇಕು. ನಾವು ಮಂದಿರ ಕಟ್ಟಿದ್ದೇವೆಂದು ಪ್ರಚಾರ ತೆಗೆದುಕೊಂಡಿಲ್ಲ. ಧರ್ಮಕ್ಕಾಗಿ, ಹಿಂದೂಗಳಿಗಾಗಿ, ರಾಮನ ಭಕ್ತರಿಗಾಗಿ ನಿರ್ಮಾಣ ಮಾಡಿದ್ದೇವೆ. ಧರ್ಮ ಉಳಿಯಬೇಕು ಎನ್ನುವ ಬಿಜೆಪಿಗರು ಪಕ್ಷಾತೀತವಾಗಿ ಉದ್ಘಾಟನೆ ಮಾಡಬೇಕಿತ್ತು.

ಕಾರವಾರ: ಬಿಜೆಪಿಯವರು ಗಲಭೆ ಮಾಡದೇ ಯಾವ ಎಲೆಕ್ಷನ್ ಗೆದ್ದಿದ್ದಾರೆ? ಅವರು ಎಲೆಕ್ಷನ್‌ಗೋಸ್ಕರ ಏನು ಬೇಕಾದರೂ ಮಾಡುವುದಕ್ಕೆ ತಯಾರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆಕ್ರೋಶ ಹೊರಹಾಕಿದರು.

ಸೋಮವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸತ್ಯ ಹೇಳುವುದಿಲ್ಲ. ಸುಳ್ಳನ್ನೇ ಹೇಳುತ್ತಾರೆ. ಅವರಿಗೆ ಜನರ ಬಗ್ಗೆ ಪ್ರೀತಿಯಿಲ್ಲ. ಸುಳ್ಳು ಹೇಳುವುದು, ಗಲಭೆ ಮಾಡುವುದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಅವರ ಅಜೆಂಡಾ ಆಗಿದೆ. ಶ್ರೀರಾಮನ ನಿಜ ಭಕ್ತರಾದರೆ ಹೀಗೆ ಮಾಡುವುದಿಲ್ಲ. ರಾಮ ಮಂದಿರ ಉದ್ಘಾಟನೆಯೇ ಆಗದೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ.

 ಪೂಜೆಯೇ ಆಗದೇ ಮಂತ್ರಾಕ್ಷತೆ ಹೇಗೆ ಕೊಡುತ್ತಾರೆ? ಎಂದು ಪ್ರಶ್ನಿಸಿದ ಸಚಿವರು, ಶುಭ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿ ಅಕ್ಷತೆ ಕೊಟ್ಟು ಕರೆಯುವ ಪದ್ಧತಿಯಿದೆ. ಆ ರೀತಿ ಮಾಡಿದ್ದಾರೆ ಎನ್ನಲು ಆಮಂತ್ರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಫೋಟೋ ಹಾಕಿ ಪ್ರಚಾರ ಮಾಡುವುದು ಏಕೆ? ಅಕ್ಷತೆ ಕೊಡುವಲ್ಲಿ ಮೋದಿ ವಿಚಾರ ಏಕೆ ಹೇಳುತ್ತಾರೆ? ನಮ್ಮ ಸ್ವಂತ ಹಣವನ್ನು ನಾವು ಕೂಡ ಕೊಟ್ಟಿದ್ದೇವೆ. ನಮ್ಮ ಕ್ಷೇತ್ರ ಭಟ್ಕಳದಲ್ಲಿ ರಾಮ ಮಂದಿರವನ್ನು ನಾವೇ ಕಟ್ಟಿದ್ದೇವೆ. ಯಾವಾಗಲೂ ಹೋಗುತ್ತಿರುತ್ತೇವೆ. ನಮ್ಮ ಕಾರ್ಯಕರ್ತರ ಬಳಿ ಪ್ರಚಾರಕ್ಕೆ ದೇವರ, ದೇವಸ್ಥಾನದ ಹೆಸರು ಬಳಸಬಾರದು ಎಂದು ತಾಕೀತು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಿಜವಾದ ಭಕ್ತಿಯಿದ್ದರೆ ಪಕ್ಷಾತೀತವಾಗಿ ಲೋಕಾರ್ಪಣೆ ಮಾಡಬೇಕು. ನಾವು ರಾಮಮಂದಿರ ಕಟ್ಟಿದ್ದೇವೆಂದು ಪ್ರಚಾರ ತೆಗೆದುಕೊಂಡಿಲ್ಲ. ಧರ್ಮಕ್ಕಾಗಿ, ಹಿಂದೂಗಳಿಗಾಗಿ, ರಾಮನ ಭಕ್ತರಿಗಾಗಿ ನಿರ್ಮಾಣ ಮಾಡಿದ್ದೇವೆ. ಧರ್ಮ ಉಳಿಯಬೇಕು ಎನ್ನುವ ಬಿಜೆಪಿಗರು ಪಕ್ಷಾತೀತವಾಗಿ ಮಾಡಬೇಕಿತ್ತು. 

ಪಕ್ಷವನ್ನಾಗಲಿ, ನಾಯಕತ್ವವನ್ನಾಗಲಿ ತೋರಿಸಬಾರದಿತ್ತು. ಪ್ರತಿವರ್ಷವೂ ಉತ್ತರ ಭಾರತದಲ್ಲಿನ ಪುಣ್ಯಕ್ಷೇತ್ರಗಳ ದರ್ಶನಕ್ಕೆ ನಾವೂ ಹೋಗುತ್ತೇವೆ. ಅಯೋಧ್ಯೆಗೂ ಹೋಗಬೇಕು ಎಂದುಕೊಂಡಿದ್ದೇವೆ. ರಾಮ, ರಾಮ ಮಂದಿರ ಕಾಂಗ್ರೆಸ್, ಬಿಜೆಪಿ ಸ್ವತ್ತು ಅಲ್ಲ. ಬಿಜೆಪಿಯವರದ್ದು ಬೋಗಸ್ ಭಕ್ತಿ ಎನ್ನುವುದು ತಿಳಿಯುತ್ತದೆ. ಇದೆಲ್ಲಾ ನಾಟಕ ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು ಎಂದರು.

ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ. ಬಿಜೆಪಿಯವರು ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಸತ್ಯವನ್ನು ಹೇಳಲಿಲ್ಲ. ಅವರು ಹೇಳಿದ್ದೇ ಸರಿ ಎನ್ನುತ್ತಾರೆ. ಜನರಿಗಂತೂ ಎಲ್ಲವೂ ತಿಳಿದಿದೆ. ಅವರ ಬಗ್ಗೆ ಏನು ಮಾತನಾಡಬಾರದು ಎಂದು ತೀರ್ಮಾನಿಸಿದ್ದೇವೆ. 

ಯಾರೇ ಏನೇ ಮಾಡಿದರೂ ನಮ್ಮ ರಾಜ್ಯದ, ಜಿಲ್ಲೆಯ ಮತದಾರರು ಒಳ್ಳೆಯವರಿದ್ದಾರೆ. ನಿಷ್ಠಾವಂತರಿದ್ದಾರೆ. ಅವರ ಸರಿಯಾದ ವೇಳೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ನಮ್ಮ ರಾಜ್ಯ ಉದಾಹರಣೆಯಾಗಿದೆ ಎಂದರು.

ಎಲ್ಲರೂ ಅಯೋಧ್ಯೆಗೆ ಬನ್ನಿ. ಸಾಧ್ಯವಾಗದೇ ಇದ್ದರೆ ನಿಮ್ಮ ಸಮೀಪದ ದೇವಸ್ಥಾನ, ರಾಮಮಂದಿರಕ್ಕೆ ಹೋಗಿ ಪೂಜೆ ಮಾಡಿ. ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ಮುಜರಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲು ಸೂಚಿಸಲಾಗಿದೆ. ಎಲ್ಲರನ್ನೂ ಆಹ್ವಾನಿಸಿದ್ದೇವೆ ಎಂದ ಅವರು, ಅಂದು ರಾಜ್ಯದಲ್ಲಿ ಸೂಕ್ತ ಭದ್ರತೆಯನ್ನೂ ಕಲ್ಪಿಸುತ್ತೇವೆ ಎಂದು ತಿಳಿಸಿದರು.