ಕನ್ನಡಪ್ರಭ ವಾರ್ತೆ ಬೆಂಗಳೂರುಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರೆ ಇಡೀ ಸಂಪುಟ ಬರ್ಖಾಸ್ತು ಆಗಲಿದೆ. ಹೀಗಾಗಿ ಮುಂದಿನ ಸಂಪುಟ ರಚನೆ ವೇಳೆ ಯಾವ ರೀತಿಯ ತಂಡ ಕಟ್ಟಲಾಗುವುದು ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಹಾಲಿ ಸಂಪುಟ ವಿಸರ್ಜನೆಯಾಗಲಿದೆ. ಆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಎಲ್ಲಾ 31 ಮಂದಿ ಸಚಿವರೂ ಸಂಪುಟ ಸದಸ್ಯ ಸ್ಥಾನ ಕಳೆದುಕೊಳ್ಳಲಿದ್ದಾರೆ.ಬಳಿಕ ಮುಂದೆ ಮುಖ್ಯಮಂತ್ರಿ ಆಗಲಿರುವವರು ಸಂಪುಟ ರಚನೆ ಮಾಡಬೇಕಿದ್ದು, ಈ ವೇಳೆ ಯಾವ ರೀತಿಯ ತಂಡಕ್ಕೆ ಆದ್ಯತೆ ನೀಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ರಾಹುಲ್‌ಗಾಂಧಿ ಅವರಿಗೆ ತಮಿಳುನಾಡು ಮಾದರಿಯಲ್ಲಿ ಯುವಕರು ಹೆಚ್ಚಿರುವ ಸಂಪುಟ ರಚನೆ ಮಾಡಬೇಕು ಎಂಬ ಇರಾದೆ ಇದ್ದು, ಕೆಲವೇ ಹಿರಿಯ ಸಚಿವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಕೊಕ್ ನೀಡಬೇಕು ಎಂಬ ಇಂಗಿತವನ್ನು ದೆಹಲಿಯ ಸಭೆಯಲ್ಲಿ ವ್ಯಕ್ತಪಡಿಸಿದರು ಎನ್ನಲಾಗಿದೆ.ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು ಎಲ್ಲ ಹಿರಿಯರನ್ನು ಸಂಪುಟದಿಂದ ಹೊರಗಿಟ್ಟರೆ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು ಎಂದು ಹೇಳಲಾಗಿದೆ.
20ಕ್ಕೂ ಹೆಚ್ಚು ಸಚಿವರಿಗೆ ಕೊಕ್?:
ಮೂಲಗಳ ಪ್ರಕಾರ ಹೊಸ ಸಚಿವ ಸಂಪುಟದಲ್ಲಿ 20ಕ್ಕೂ ಹೆಚ್ಚು ಸಚಿವರಿಗೆ ಕೊಕ್ ನೀಡುವುದು, ಕೇವಲ 5-6 ಮಂದಿಯನ್ನು ಮಾತ್ರ ಉಳಿಸಿಕೊಳ್ಳುವುದು ಹಾಗೂ ಹೊಸ ರಕ್ತಕ್ಕೆ (ಯುವಕರಿಗೆ) ಆದ್ಯತೆ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬದಲಾವಣೆ ಪರ್ವ:ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷರ ಸ್ಥಾನ ಬದಲಾವಣೆ, ಅವಧಿ ಮುಗಿದಿರುವ ನಿಗಮ-ಮಂಡಳಿ ಅಧ್ಯಕ್ಷರ ಸ್ಥಾನ ಬದಲಾವಣೆ, ಸಂಪುಟಕ್ಕೆ ಸೇರುವ ಶಾಸಕರ ನಿಗಮ-ಮಂಡಳಿ ಸ್ಥಾನ ಎಲ್ಲವೂ ಸಂಪೂರ್ಣ ಬದಲಾವಣೆ ಆಗಲಿದೆ ಎಂದು ತಿಳಿದುಬಂದಿದೆ.ಹೊಸ ಸಂಪುಟ ಸೇರಲು ಮುಸ್ಲಿಂ ನಾಯಕರಲ್ಲಿ ಪೈಪೋಟಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ತೀರ್ಮಾನದ ಬೆನ್ನಲ್ಲೇ ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳಿಗೆ ಪೈಪೋಟಿ ನಡುವೆಯೇ ಹೊಸ ಸಚಿವ ಸಂಪುಟ ಸೇರಲು ಮುಸ್ಲಿಂ ನಾಯಕರಲ್ಲಿ ಲಾಬಿ ಶುರುವಾಗಿದೆ.ಹಾಲಿ ಸಚಿವ ಸಂಪುಟದಲ್ಲಿ ಇಬ್ಬರು ಸಚಿವರು (ಜಮೀರ್ ಅಹಮದ್ ಖಾನ್, ರಹೀಂ ಖಾನ್) ಇದ್ದಾರೆ. ಇನ್ನು ಸ್ಪೀಕರ್ ಆಗಿ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು ಅಧಿಕಾರ ಹೊಂದಿದ್ದಾರೆ.ಮುಂದಿನ ಸಚಿವ ಸಂಪುಟದಲ್ಲಿ ಮೂರು ಮಂದಿ ಮುಸ್ಲಿಮರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಮುೂರು ಸ್ಥಾನಕ್ಕೆ ಹಲವು ಶಾಸಕರು ತೀವ್ರ ಪೈಪೋಟಿ ಆರಂಭಿಸಿದ್ದಾರೆ.ಮಾಹಿತಿ ಪ್ರಕಾರ, ಕರಾವಳಿ ಭಾಗದಿಂದ ಶಾಸಕ ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಯಿಂದ ವಿಮುಕ್ತಿ ಪಡೆಯಲಿದ್ದು, ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಇನ್ನು ಹಳೆ ಮೈಸೂರು ಭಾಗದಿಂದ ಜಮೀರ್ ಅಹಮದ್ ಅವರನ್ನೇ ಮುಂದುವರೆಸಬೇಕೆಂಬ ಬೇಡಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ್ದಾದರೆ, ಮುಂದಿನ ಮುಖ್ಯಮಂತ್ರಿ ಎನ್ನಲಾಗುತ್ತಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಪ್ತ ಬಣದ ಎನ್.ಎ.ಹ್ಯಾರಿಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಬಹುದು ಎನ್ನಲಾಗುತ್ತಿದೆ. ಇದರ ನಡುವೆ ಮೈಸೂರಿನ ನರಸಿಂಹರಾಜ ಕ್ಷೇತ್ರದ ಹಿರಿಯ ಶಾಸಕ ತನ್ವೀರ್ ಸೇಠ್ ಕೂಡ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.ಇನ್ನು, ಕಲ್ಯಾಣ ಕರ್ನಾಟಕ ಭಾಗದ ಪ್ರಾತಿನಿಧ್ಯದಡಿ ಹಾಲಿ ಸಚಿವ ರಹೀಂ ಖಾನ್ ಅವರನ್ನು ಸಂಪುಟದಿಂದ ಕೈಬಿಟ್ಟರೆ ಆಗ ಆ ಸ್ಥಾನ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅವರಿಗೆ ಒಲಿಯಬಹುದು ಎನ್ನಲಾಗುತ್ತಿದೆ. ಏಕೆಂದರೆ, ಈ ಸ್ಥಾನಕ್ಕೆ ಗುಲ್ಬರ್ಗ ಉತ್ತರ ಶಾಸಕಿ ಖನೀಜ್ ಫಾತಿಮಾ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಶಾಸಕರಾದ ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್ ಮತ್ತಿತರ ಪ್ರಬಲ ಆಕಾಂಕ್ಷಿಗಳು ಇರುವುದರಿಂದ ಖನೀಜ್ ಫಾತಿಮಾ ಅವರಿಗೆ ಅವಕಾಶಗಳು ಕಡಿಮೆ. ಆದರೆ, ಸಲೀಂ ಅಹಮದ್ ಪಕ್ಷಕ್ಕಾಗಿ ದಶಕಗಳಿಂದ ದುಡಿಯುತ್ತಿರುವ ಪ್ರಮುಖ ನಾಯಕ. ಇನ್ನು ಕಿತ್ತೂರು ಕರ್ನಾಟಕ ಭಾಗಕ್ಕೆ ಹಲವು ದಶಕಗಳಿಂದ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಿಲ್ಲ. ಸುಮಾರು ಏಳು ಜಿಲ್ಲೆಗಳನ್ನು ಹೊಂದಿರುವ ಕಿತ್ತೂರು ಕರ್ನಾಟಕ ಭಾಗಕ್ಕೆ ಈ ಬಾರಿ ಪ್ರಾತಿನಿಧ್ಯ ನೀಡುವ ಇರಾದೆ ಹೈಕಮಾಂಡ್‌ಗೆ ಇದ್ದು, ಸಲೀಂ ಅಹ್ಮದ್ ಅವರ ಹೆಸರು ಗಂಭೀರವಾಗಿ ಪರಿಗಣಿಸಲಾಗಿದೆ ಎನ್ನಲಾಗುತ್ತಿದೆ.